ಹರೀಶ್ ಕೇರ, ಬೆಂಗಳೂರು
ಮೆಟ್ರೊಪಾಲಿಟನ್ ನಗರವಾದ ಮುಂಬಯಿಯನ್ನು (Mumbai as union territory) ಕೇಂದ್ರಾಡಳಿತ ಪ್ರದೇಶವಾಗಿ ಮಾಡಬೇಕು ಎಂಬ ಕೂಗು ಇಂದು ನಿನ್ನೆ ಹುಟ್ಟಿಕೊಂಡದ್ದಲ್ಲ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕುʼ ಎಂದು ಮಹಾರಾಷ್ಟ್ರದ ಮೂರ್ಖ ರಾಜಕಾರಣಿಗಳು ಕೂಗು ಹಾಕಿದಾಗಲೆಲ್ಲ ಕರ್ನಾಟಕದ ನಾಯಕರು, ಕನ್ನಡಪರ ಹೋರಾಟಗಾರರು ಮುಂಬಯಿಯ ವಿಷಯ ತೆಗೆಯುತ್ತಾರೆ. ಬೆಳಗಾವಿಯಲ್ಲಿ ಕೇಂದ್ರಾಡಳಿತ ಪ್ರದೇಶವಾಗಲು ಬೇಕಾದ ಗುಣವೇನೂ ಇಲ್ಲ. ಆದರೆ ಮುಂಬಯಿಯಲ್ಲಿ ಧಾರಾಳವಾಗಿ ಇದೆ.
ಮತ್ತು ನಿಮಗೆ ಗೊತ್ತಿರಲಿ, ಮುಂಬಯಿ ಬಹಳ ಕಾಲ ಕೇಂದ್ರಾಡಳಿತ ಪ್ರದೇಶವೇ ಆಗಿತ್ತು. ಬಹಳ ಕಾಲ ಹೋರಾಡಿ ಈ ನಗರವನ್ನು ಮರಾಠಿಗರು ತಮ್ಮ ಪಾಲು ಮಾಡಿಕೊಂಡರು. ಇದು ಹೇಗಾಯ್ತು?
ಬಾಂಬೇ ಪ್ರೆಸಿಡೆನ್ಸಿ
ಬ್ರಿಟಿಷರ ಕಾಲದಲ್ಲಿ ಮುಂಬಯಿ ಪ್ರಾಂತ್ಯವನ್ನು ʼಬಾಂಬೇ ಪ್ರೆಸಿಡೆನ್ಸಿʼ ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರು ತಂದು ಸ್ಥಾಪಿಸಿದ ಗಿರಣಿಗಳು, ಜವಳಿ ಮಿಲ್‌ಗಳು ಮತ್ತಿತರ ಕೈಗಾರಿಕೆಗಳು ಇಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದ್ದವು. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ, ʼಬಾಂಬೇ ಸ್ಟೇಟ್ʼ ಎಂಬ ಹೆಸರಿನಲ್ಲಿ ಮರಾಠಿ ಮಾತನಾಡುವ ಜನರಿರುವ ಪ್ರದೇಶಗಳನ್ನೆಲ್ಲ ಒಂದುಗೂಡಿಸಲಾಯಿತು. ಆಡಳಿತ ಕೇಂದ್ರಗಳಿದ್ದ ಮುಂಬಯಿ ನಗರ ಇದರ ರಾಜಧಾನಿಯಾಯಿತು.
1955ರಲ್ಲಿ ರಾಜ್ಯಗಳ ಪುನರ್‌ವಿಂಗಡಣೆ ಪ್ರಕ್ರಿಯೆ ಆರಂಭವಾಯಿತು. ಆಗ ಒಕ್ಕೂಟ ಸರ್ಕಾರ ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು. ಇದು ನೀಡಿದ ವರದಿಯಲ್ಲಿ, ಮರಾಠಿ – ಗುಜರಾತಿ ಎರಡೂ ಭಾಷೆಗಳನ್ನು ಮಾತಾಡುವ ಜನರಿರುವ ಒಂದು ರಾಜ್ಯವನ್ನು ರಚಿಸಿ, ಅದಕ್ಕೆ ಮುಂಬಯಿಯನ್ನು ರಾಜಧಾನಿಯಾಗಿಸಬೇಕು ಎಂದು ಶಿಫಾರಸು ಮಾಡಿತು. ಅಂದರೆ, ಮುಂಬಯಿಯಲ್ಲಿ ಅಷ್ಟು ಪ್ರಮಾಣದ ಗುಜರಾತಿ ಭಾಷಿಕರಿದ್ದರು. ಇವರು ಮರಾಠಿಗರ ಸಮಸಂಖ್ಯೆಯಲ್ಲಿದ್ದರು.
ಈ ನಡುವೆ, ಮುಂಬಯಿಯ ಬೃಹತ್ ಉದ್ಯಮಿಗಳು ಸೇರಿ ʼಮುಂಬಯಿ ಸಿಟಿಜನ್ಸ್ ಕಮಿಟಿʼ ಎಂಬ ಒಂದು ಸಂಸ್ಥೆಯನ್ನು ರಚಿಸಿಕೊಂಡು, ʼʼಮುಂಬಯಿಯನ್ನು ಸ್ವತಂತ್ರ ಪ್ರಾಂತ್ಯ ಎಂದು ಘೋಷಿಸಬೇಕುʼʼ ಎಂದು ಒಕ್ಕೂಟ ಸರ್ಕಾರಕ್ಕೆ ಬೇಡಿಕೆಯಿಟ್ಟರು. ಅದಕ್ಕೆ ಅವರು ಕೊಟ್ಟ ಕಾರಣಗಳು ಹೀಗಿದ್ದವು: 1. ಇಲ್ಲಿ ಎಲ್ಲ ಭಾಷೆಯ ಜನರೂ ಇದ್ದಾರೆ. 2. ಮುಂಬಯಿ ಇಡೀ ದೇಶದ ಜನತೆಗೆ ಉದ್ಯೋಗದಾಯಿಯಾಗಿದೆ. 3. ಮರಾಠಿ ಭಾಷಿಕ ಸರ್ಕಾರದ ಅಡಿಯಲ್ಲಿ ಇತರ ಭಾಷಿಕರ ಉದ್ಯೋಗದ ಹಕ್ಕುಗಳಿಗೆ ತೊಂದರೆಯಾಗಬಹುದು. 4. ರಕ್ಷಣಾ ದೃಷ್ಟಿಯಿಂದ, ಮುಂಬಯಿ ದೇಶದ ಮಧ್ಯ ಭಾಗದಲ್ಲಿದೆ.
ಮರಾಠಿ ಭಾಷಿಕರ ರಾಜ್ಯಕ್ಕೆ ಒತ್ತಾಯ ಹೆಚ್ಚುತ್ತಿರುವಂತೆ, ಸ್ವತಂತ್ರ ಮುಂಬಯಿ ಪ್ರತಿಪಾದಕರು 1955ರಲ್ಲಿ ಚೌಪಾಟಿಯಲ್ಲಿ ಒಂದು ಬೃಹತ್ ಪ್ರತಿಭಟನೆಯನ್ನೇ ಹಮ್ಮಿಕೊಂಡರು. ಅದರಲ್ಲಿ ಮುಂದೆ ದೇಶದ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ಕೂಡ ಇದ್ದರು. ʼʼಇನ್ನು 5000 ವರ್ಷಗಳು ಕಳೆದರೂ ಬಾಂಬೆಯನ್ನು ಮಹಾರಾಷ್ಟ್ರ ಪಡೆಯುವುದಿಲ್ಲʼʼ ಎಂದು ಘೋಷಿಸಲಾಯಿತು. ಹರತಾಳ, ಹಿಂಸಾಚಾರ ಸಂಭವಿಸಿತು. ಪೊಲೀಸ್ ಗೋಲಿಬಾರ್‌ನಲ್ಲಿ 15 ಪ್ರತಿಭಟನಾಕಾರರು ಸತ್ತರು.
ಇದೆಲ್ಲದರಿಂದಾಗಿ, ಮುಂಬಯಿಯ ಕುರಿತು ಯಾವುದೇ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿಲ್ಲ. ಬದಲಾಗಿ, ನಗರವನ್ನು ಕೇಂದ್ರದ ಸ್ವಾಧೀನದಲ್ಲಿ ಇಟ್ಟುಕೊಂಡಿತು. 1956ರ ಜನವರಿ 16ರಂದು ರಾಜ್ಯವನ್ನು ಎರಡಾಗಿ ವಿಭಜಿಸಿ ಮಹಾರಾಷ್ಟ್ರ- ಗುಜರಾತ್ ಎಂದು ಮಾಡುವ ಪ್ರಸ್ತಾವ ಇಟ್ಟರು. ಆದರೆ ಮುಂಬಯಿ ನಗರ ಕೇಂದ್ರಾಡಳಿತವಾಗಿ ಮುಂದುವರಿಯಿತು.
ಮರಾಠಿಗರು, ಮರಾಠಿ ರಾಜಕಾರಣಿಗಳು ಇದರ ವಿರುದ್ಧ ದಂಗೆಯೆದ್ದರು. ದೊಡ್ಡ ಪ್ರತಿಭಟನೆಗಳು, ಮುಷ್ಕರಗಳು ನಡೆದವು. ನೂರಾರು ಜನ ಹೋರಾಟಗಳಲ್ಲಿ ಸತ್ತರು. 1959ರವರೆಗೂ ಈ ಚರ್ಚೆ, ವಿವಾದ ತಣ್ಣಗಾಗಲೇ ಇಲ್ಲ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಇದರಿಂದಾಗಿ ಹಿನ್ನಡೆ ಅನುಭವಿಸಿತು. ಇದರಿಂದಾಗಿ 1960ರಲ್ಲಿ ಮರಾಠಿ ಭಾಷಿಕರ ಮಹಾರಾಷ್ಟ್ರ, ಗುಜರಾತಿ ಮಾತಾಡುವವರ ಗುಜರಾತ್ ಪ್ರತ್ಯೇಕವಾದವು. ಮುಂಬಯಿ ಮರಾಠಿಗರ ಪಾಲಿಗೆ ಹೋಯಿತು. ದೊಡ್ಡ ಪ್ರಮಾಣದಲ್ಲಿ ಗುಜರಾತಿ ಉದ್ಯಮಿಗಳು, ಉದ್ಯೋಗಿಗಳು ಮರಾಠಿ ಗೂಂಡಾಗಳ ಭಯದಿಂದ ಮುಂಬಯಿ ತೊರೆದು ಹೊರಟುಹೋದರು.
ಭಾಷಾಂಧತೆಯ ಹೆಚ್ಚಳ
ಗುಜರಾತಿಗಳ ಭಯ ನಿಜವಾಯಿತು. ಮರಾಠಿ ಭಾಷಿಕರ ಹಿಡಿತಕ್ಕೆ ಮುಂಬಯಿ ಸಿಕ್ಕಿದ ಬಳಿಕ, ಅಲ್ಲಿ ಅತಿಯಾದ ಮರಾಠಾವಾದ ಬೆಳೆಯಿತು. ಮೆಟ್ರೋ ನಗರವಾಗಿದ್ದುದರಿಂದ ಇಲ್ಲಿ ಭಾರತದ ನಾನಾ ಕಡೆಯಿಂದ ಬಂದ ಕಾರ್ಮಿಕರು ಬಹಳ ಸಂಖ್ಯೆಯಲ್ಲಿದ್ದರು. ಗುಜರಾತಿಗಳು ದೊಡ್ಡ ಉದ್ಯಮಗಳನ್ನು ಸ್ಥಾಪಿಸಿ ಶ್ರೀಮಂತರಾಗಿದ್ದರು. ಕರ್ನಾಟಕದ ಕರಾವಳಿಯಿಂದ ಬಂದ ಬಂಟರು, ಬ್ರಾಹ್ಮಣರು ಇಲ್ಲಿನ ಹೋಟೆಲ್ ಇಂಡಸ್ಟ್ರಿಯನ್ನು ವಶಪಡಿಸಿಕೊಂಡಿದ್ದರು. ಇದರಿಂದ ಮುಂಬಯಿಯ ಶ್ರೀಸಾಮಾನ್ಯರಿಗೆ ಉದ್ಯೋಗಾವಕಾಶವೇನೋ ಹೆಚ್ಚಾಯಿತು. ಆದರೆ ರಾಜಕೀಯ ಅವಕಾಶ ಹುಡುಕುತ್ತಿದ್ದ ಒಂದಷ್ಟು ಮಂದಿ ಇದನ್ನು ಭಾಷಾ ಮತಾಂಧತೆ ಹಬ್ಬಿಸಲು, ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾದರು. ಬಾಳ್ ಠಾಕ್ರೆ ಅಂಥವರಲ್ಲೊಬ್ಬರು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ| ಬೆಳಗಾವಿಯಲ್ಲ, ಕೇಂದ್ರಾಡಳಿತ ಪ್ರದೇಶ ಮಾಡಬೇಕಾಗಿರುವುದು ಮುಂಬಯಿಯನ್ನು!
ಅಲ್ಲಿಯವರೆಗೂ ಗುಜರಾತಿಗಳನ್ನು ʼಗುಜ್ಜುʼಗಳೆಂದೂ, ದಕ್ಷಿಣ ಭಾರತೀಯರನ್ನೆಲ್ಲ ʼಮದ್ರಾಸಿʼಗಳೆಂದೂ ʼಲುಂಗಿʼಗಳೆಂದೂ ಛೇಡಿಸಲಾಗುತ್ತಿತ್ತು. ʼಮಾರ್ಮಿಕ್ʼ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿದ್ದ ಬಾಳ್ ಠಾಕ್ರೆ 1966ರಲ್ಲಿ ಶಿವ ಸೇನೆ ಸ್ಥಾಪಿಸಿ, ದಕ್ಷಿಣ ಭಾರತೀಯರ ಮೇಲೆ ಹರಿಹಾಯಲು ಆರಂಭಿಸಿದರು. ʼಲುಂಗಿ ಹಠಾವೊ, ಪುಂಗಿ ಬಜಾವೊʼ ಎಂದು ಕರೆ ನೀಡಿದರು. 60 ಮತ್ತು 70ರ ದಶಕದುದ್ದಕ್ಕೂ ಈ ಶಿವಸೇನೆ ದಕ್ಷಿಣ ಭಾರತೀಯರ ವಿರುದ್ಧ ಯುದ್ಧವನ್ನೇ ಸಾರಿತು. ಠಾಕ್ರೆಯ ಈ ಮೇಲ್ಪಂಕ್ತಿಯನ್ನು ಮುಂದಿನ ಎಲ್ಲಾ ಮರಾಠಿ ಜನನಾಯಕರೂ ಅನುಸರಿಸಿದರು.
ದಕ್ಷಿಣದವರೇ ಆಳಿದ್ದರು!
ಸ್ವಾತಂತ್ರ್ಯೋತ್ತರ ಮುಂಬಯಿಯ ಕತೆ ಹೀಗಿದ್ದರೆ, ಸ್ವಾತಂತ್ರ್ಯಪೂರ್ವ ಹಾಗೂ ಬ್ರಿಟಿಷ್ ಪೂರ್ವದಲ್ಲಿ ಉಂಬಯಿ ಸೇರಿದಂತೆ ಇಡೀ ಮಹಾರಾಷ್ಟ್ರ ಪ್ರಾಂತ್ಯವನ್ನು ಆಳಿದವರು ಕನ್ನಡಿಗರು ಸೇರಿದಂತೆ ಹಲವು ದಕ್ಷಿಣ ಭಾರತೀಯ ರಾಜರೇ ಆಗಿದ್ದರು ಎಂದು ಇತಿಹಾಸ ಹೇಳುತ್ತದೆ. ಕ್ರಿಸ್ತಪೂರ್ವ ಎರಡನೇ ಶತಮಾನದಿಂದ ಕ್ರಿಸ್ತಶಕ ಒಂದನೇ ಶತಮಾನದವರೆಗೆ ಕನ್ನಡ ಮೂಲದ ಶಾತವಾಹನರು, ನಂತರ ಕದಂಬ ಚಕ್ರವರ್ತಿಗಳು, ಆರನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಚಾಲುಕ್ಯ ಚಕ್ರವರ್ತಿಗಳು (ಅದರಲ್ಲಿ ಮುಖ್ಯವಾಗಿ ಎರಡನೇ ಪುಲಿಕೇಶಿ), ನಂತರ ಹತ್ತನೇ ಶತಮಾನದವರೆಗೆ ರಾಷ್ಟ್ರಕೂಟ ಮನೆತನದವರು ಮುಂಬಯಿಯನ್ನು ಆಳಿದರು. ನಂತರ ದಕ್ಷಿಣದಿಂದ ಬಂದ ಚೋಳರು 12ನೇ ಶತಮಾನದವರೆಗೆ ಮುಂಬಯಿಯನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ, ನಂತರ ಪ್ರತ್ಯೇಕ ಮರಾಠ ಆಡಳಿತ ಉದಯಿಸಿತು.
ಮುಂಬಯಿಯಲ್ಲಿ ಯಾರಿದ್ದಾರೆ?
2011ರ ಜನಗಣತಿಯ ಪ್ರಕಾರ, ಮುಂಬಯಿಯಲ್ಲಿ ಮರಾಠಿ ಮಾತಾಡುವವರ ಪ್ರಮಾಣ ಶೇ.42 ಮಾತ್ರ. ಉಳಿದವರೆಲ್ಲಾ ಇತರ ಭಾಷಿಕರೇ. ಇದರಲ್ಲಿ ಗುಜರಾತಿಗಳು ಗಣನೀಯವಾಗಿದ್ದರು. ಈಗ ಅವರ ಸಂಖ್ಯೆ ಇಳಿಕೆಯಾಗಿ, ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಬಂದವರ ಸಂಖ್ಯೆ ಹೆಚ್ಚಿದೆ. ಅಂದರೆ ಹಿಂದಿ ಮಾತಾಡುವವರ ಸಂಖ್ಯೆ ಏರಿಕೆಯಾಗಿದೆ. ದಕ್ಷಿಣ ಭಾರತೀಯರ ಪ್ರಮಾಣ ಸುಮಾರು ಶೇ.15ರಷ್ಟಿದೆ. 2001ರ ಜನಗಣತಿಗೆ ಹೋಲಿಸಿದರೆ ಮುಂಬಯಿಯಲ್ಲಿ ಮರಾಠಿ ಮಾತನಾಡುವವರ ಶೇಕಡಾವಾರು ಪ್ರಮಾಣ 2.64ರಷ್ಟು ಕಡಿಮೆಯಾಗಿದೆ. ಆದರೆ ಹಿಂದಿ ಮಾತನಾಡುವವರ ಶೇಕಡಾವಾರು ಪ್ರಮಾಣ 27.24ರಷ್ಟು ಹೆಚ್ಚಾಗಿದೆ. ಆದರೆ, ಮುಂಬಯಿಯ ಹೋಟೆಲ್ ಉದ್ಯಮಿಗಳಲ್ಲಿ ಹೆಚ್ಚಿನವರು ಕನ್ನಡಿಗರು. ಟೆಕ್ಕಿಗಳಲ್ಲಿ ಹೆಚ್ಚಿನವರು ದಕ್ಷಿಣ ಭಾರತೀಯರು. ಬ್ಲೂ ಕಾಲರ್ ಉದ್ಯೋಗಿಗಳಲ್ಲಿ ಹೆಚ್ಚಿನವರು ಉತ್ತರ ಭಾರತೀಯರು.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ʼಮಹಾʼ ಉದ್ಧಟತನಕ್ಕೆ ಒಕ್ಕೊರಲ ಖಂಡನೆ; ಒಂದಿಂಚು ಭೂಮಿಯನ್ನೂ ಬಿಡೆವು ಎಂದ ಕರ್ನಾಟಕ
ಜಿಡಿಪಿ ಕೊಡುಗೆ
33 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು GSDP ಹೊಂದಿದೆ. ಭಾರತದ GDPಯ 14%ರಷ್ಟು ಮಹಾರಾಷ್ಟ್ರದ ಪಾಲು. ಅದರ ನಂತರದ ಸ್ಥಾನಗಳಲ್ಲಿ ತಮಿಳುನಾಡು (8.59%), ಗುಜರಾತ್ (7.92%), ಕರ್ನಾಟಕ (7.87%) ಇವೆ. ಆದರೆ ಮಹಾರಾಷ್ಟ್ರದ ಈ ಜಿಡಿಪಿಗಾಗಿ ದುಡಿಯುತ್ತಿರುವವರು ಮರಾಠಿಗರು ಮಾತ್ರವೇ ಅಲ್ಲ, ದೇಶದ ಎಲ್ಲ ಕಡೆಯಿಂದ ಬಂದ ವಲಸಿಗರ ಕೊಡುಗೆ ಇದರಲ್ಲಿ ಗಣನೀಯವಾಗಿದೆ. ಇತತರ ಪಾತ್ರ ಇಲ್ಲದಿದ್ದಲ್ಲಿ ಮಹಾರಾಷ್ಟ್ರ ಇಂದು ಇಷ್ಟು ಶ್ರೀಮಂತವಾಗಲು ಸಾಧ್ಯವಿರಲಿಲ್ಲ.