Site icon Vistara News

Karnataka Politics : ಇಲ್ಲ ಇಲ್ಲ ನಾವು ಬಿಜೆಪಿ ಬಿಡೋದಿಲ್ಲ; ನೀವು ಬಂದ್ರೂ ಫಸ್ಟ್‌ ಬೆಂಚ್‌ ಸಿಗೋದಿಲ್ಲ!

Muniratna Parameshwar and shivaram hebbar

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಈಗ “ಆಪರೇಷನ್‌ ಹಸ್ತ” ವಿಚಾರ ಭಾರಿ ಚರ್ಚೆಯಲ್ಲಿದೆ. ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಶಾಸಕರನ್ನು “ಘರ್‌ ವಾಪ್ಸಿ” (Ghar Wapsi) ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸ್ಫೋಟಕ ಹೇಳಿಕೆಯನ್ನೂ ನೀಡಿದ್ದರು. ಇದು ತೀವ್ರ ಚರ್ಚೆಗೂ ಕಾರಣವಾಗಿತ್ತು. ಇವರಲ್ಲಿ ಹೆಚ್ಚಾಗಿ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ (MLA Muniratna) ಹಾಗೂ ಕೆ.ಆರ್.‌ ಪುರಂ ಶಾಸಕ ಬೈರತಿ ಬಸವರಾಜ್‌ (MLA Byrathi Basavaraj) ಹಾಗೂ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ (MLA Shivaram Hebbar) ಅವರಿಗೆ ಗಾಳ ಹಾಕಲಾಗಿತ್ತು ಎನ್ನಲಾಗಿದೆ. ಈಗ ಮುನಿರತ್ನ ಹಾಗೂ ಶಿವರಾಂ ಹೆಬ್ಬಾರ್‌ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಪ್ರತಿಕ್ರಿಯೆ ನೀಡಿ, ಪಕ್ಷ ಬಿಟ್ಟು ಹೋದವರು ವಾಪಸ್‌ ಬರಬಹುದು. ಆದರೆ, ಅವರಿಗೆ ಫಸ್ಟ್‌ ಬೆಂಚ್‌ (First Bench in Congress) ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ, 17 ಜನರಲ್ಲಿ ಯಾರು ಹೋಗ್ತಾರೆ ಗೊತ್ತಿಲ್ಲ, ನಾನಂತೂ ಬಿಜೆಪಿ ಬಿಡಲ್ಲ. ಇನ್ನು ಐದು ವರ್ಷ ಬಿಟ್ಟು ಹೋಗಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋಗೋ ಅವಶ್ಯಕತೆ ಇಲ್ಲ. ನಾನು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದು, ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಾತ್ರ. ಅವರು ಬೆಂಗಳೂರು ಸಚಿವರಾಗಿದ್ದು, ಈ ಸಂಬಂಧ ಭೇಟಿ ಮಾಡಿದ್ದೇನೆ. ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Commission Politics : ಗುತ್ತಿಗೆದಾರರ ಬಿಲ್‌ ಕೊಡದಿದ್ರೆ ಕಾಂಗ್ರೆಸ್‌ಗೆ ಗಂಡಾಂತರ; ಬೆಂಗಳೂರು ಶಾಸಕರ ವಾರ್ನಿಂಗ್!

ಅನುದಾನದ ಕುರಿತು ಪ್ರತಿಕ್ರಿಯೆ ನೀಡಿದ ಮುನಿರತ್ನ, ಮೊದಲು ಅವರ ಪಕ್ಷದವರಿಗೆ ಅನುದಾನ ಕೊಡಲಿ. ಅವರು ಕೆಪಿಸಿಸಿ‌ ಅಧ್ಯಕ್ಷರಾಗಿ ಉತ್ತರ ಕೊಡುತ್ತಾರಾ? ಬೆಂಗಳೂರು ಸಚಿವರಾಗಿ ಉತ್ತರ ಕೊಡುತ್ತಾರಾ ಎಂಬುದನ್ನು ನೋಡಬೇಕು. ಅಲ್ಲದೆ, ಅವರನ್ನು ಭೇಟಿ ಮಾಡಿದ ವಿಚಾರವಾಗಿ ಹೇಳಿಕೆ ನೀಡುತ್ತಿರುವ ಡಿಕೆಶಿ ಯಾರಾದರೂ ಗುಪ್ತವಾಗಿ ಹೋಗಿ ಭೇಟಿ ಮಾಡಿದ್ದಾರಾ? ಬುರ್ಖಾ ಹಾಕ್ಕೊಂಡಿದ್ದರಾ ಎಂಬುದನ್ನು ಅವರೇ ಹೇಳಬೇಕು ಎಂದು ಹೇಳಿದರು.

ಡಿಕೆಶಿ, ಸಿದ್ದರಾಮಯ್ಯ ಆಗಲಿ ನನಗೆ ತೊಂದರೆ ಕೊಡಲೇಬೇಕೆಂದರೆ ಕೊಡಲಿ. ನನ್ನನ್ನು ಜೈಲಲ್ಲಿಟ್ಟು ಕ್ಷೇತ್ರದ ಅಭಿವೃದ್ಧಿ ಮಾಡಲಿ. ರಾಜೀನಾಮೆ ಕೊಟ್ಟರೆ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದರೆ ಅದಕ್ಕೂ ರೆಡಿ. ಡಿಕೆಶಿ, ಸಿದ್ದರಾಮಯ್ಯ, ಡಿ.ಕೆ. ಸುರೇಶ್ ಮೇಲೆ ನನಗೆ ವೈಯಕ್ತಿಕ ದ್ವೇಷ ಇಲ್ಲ. ಬಿಜೆಪಿಯಲ್ಲಿ ನನ್ನನ್ನು ಬಹಳ ಗೌರವಯುತವಾಗಿ ನೋಡಿಕೊಂಡಿದ್ದಾರೆ. ಇಲ್ಲಿವರೆಗೆ ಯಾರನ್ನೂ ಏಕವಚನದಲ್ಲೂ ಮಾತನಾಡಿಸಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಎಲ್ಲ ಶಾಸಕರಿಗೂ ಗೌರವ ಕೊಟ್ಟಿದ್ದಾರೆ ಎಂದು ಮುನಿರತ್ನ ಹೇಳಿದರು.

ಡಿಕೆ ಶಿವಕುಮಾರ್‌ ಅವರನ್ನು ಶಾಸಕ ಎಸ್‌.ಟಿ. ಸೋಮಶೇಖರ್ ಹೊಗಳಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಅವರ ರಾಜಕೀಯ ಗುರು ಡಿಕೆಶಿ ಇರಬಹುದು. ನನಗೆ ರಾಜಕೀಯ ಜೀವನ ಕೊಟ್ಟಿದ್ದು ಬಿ.ಕೆ. ಹರಿಪ್ರಸಾದ್ ಅವರು. ಅವರು ನನ್ನ ಗುರು ಎಂದು ಹೇಳಿದರು.

ಬಿಜೆಪಿಯಲ್ಲಿ ಭವಿಷ್ಯಕ್ಕೆ ಆಧಾರ ಯಾರು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಬಿಜೆಪಿ ಚಿಹ್ನೆಯೇ ಆಧಾರ ಎಂದು ಹೇಳಿದರು.

ಡಿಕೆಶಿಗೆ ಎಚ್ಚರಿಕೆ ಕೊಟ್ಟ ಮುನಿರತ್ನ

ರಾಜರಾಜೇಶ್ವರಿ ನಗರದಲ್ಲಿ ಆಗುವ ಎಫೆಕ್ಟ್ ಎಲ್ಲ ಕಡೆ ಆಗುತ್ತದೆ. ಅಧಿಕಾರಿಗಳು ಏನಾದರೂ ಒಂದು ಕ್ಷೇತ್ರದ ಕಡೆ ವರದಿ ಕೊಟ್ಟರೆ ಎಲ್ಲ ದಾಖಲೆಗಳೂ ಮೇಲೆ ಹೋಗುತ್ತವೆ. ರಾಜರಾಜೇಶ್ವರಿ ನಗರ, ಮಲ್ಲೇಶ್ವರದ‌ ಮೇಲೆ ಟಾರ್ಗೆಟ್ ಮಾಡಲಾಗಿದೆ. ಆರ್.ಆರ್. ನಗರದಲ್ಲಿ ಹಗರಣ ಆಗಿದೆ, ಸರ್ವಜ್ಞ ನಗರದಲ್ಲಿ ಆಗಿಲ್ಲ ಎಂದರೆ ಆಗಲ್ಲ. ಮಲ್ಲೇಶ್ವರದಲ್ಲಿ ಆಗಿದೆ, ಬಿಟಿಎಂನಲ್ಲಿ ಆಗಿಲ್ಲ ಎನ್ನುವುದು ಸರಿಯಲ್ಲ. ಹಾಗೇನಾದರೂ ಮಾಡಿದರೆ ದಾಖಲೆಗಳು ಉನ್ನತ ತನಿಖಾ ಸಂಸ್ಥೆಗಳಿಗೆ ಹೋಗುತ್ತವೆ. ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಮುನಿರತ್ನ ಹೇಳಿದರು.

ಯಾರಾದರೂ ಬಿಜೆಪಿ‌ ಬಿಡುತ್ತೇನೆ ಎಂದರೆ ನಾನು ತಡೆಯಲ್ಲ. ಅವರಿಗೆ ಒಳ್ಳೆಯದಾಗಲಿ ಎಂದರೆ ನಾನೇಕೆ ತಡೆಯಬೇಕು? ಅಲ್ಲಿ ಲಾಸ್ಟ್ ಬೆಂಚ್ ಸಿಗುತ್ತದೆ, ಫರ್ಸ್ಟ್ ಬೆಂಚ್‌ಗೆ ಬರೋಕೆ 85 ವರ್ಷ ಆಗಿರುತ್ತದೆ. ಬೆಂಗಳೂರಿನ ಶೇ.70 ಕಾರ್ಮಿಕರು ವಲಸೆ ಹೋಗಿದ್ದಾರೆ. ಬಿಜೆಪಿ ಸರ್ಕಾರದ ಅನುದಾನ ಬಿಡುಗಡೆ ಮಾಡಿಲ್ಲ. ಈಗಿರುವ ಅಧಿಕಾರಿಗಳೇ ಕಾಮಗಾರಿ ಪ್ರಮಾಣಪತ್ರ ನೀಡಿದ್ದಾರೆ. ಬೇರೆ ದೇಶದಿಂದ ಬಂದವರು ಪ್ರಮಾಣಪತ್ರ ನೀಡಿಲ್ಲ. ಈಗ ಅವರಿಂದಲೇ ತನಿಖೆ ಮಾಡಿಸುತ್ತಿದ್ದಾರೆ. ಬಿಬಿಎಂಪಿಯಲ್ಲಿ ಅನುದಾನ ಇದೆ, ಕೊಡುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಅಭಿವೃದ್ಧಿ ಬೇಕಾಗಿಲ್ಲ. ಟ್ರಾನ್ಸ್‌ಫರ್ ಮಾಡಿಕೊಂಡು ಸುಮ್ಮನಿದ್ದಾರೆ. ಅದಕ್ಕೇ ಅವರು ಒಬ್ಬರೂ ಮಾತಾಡುತ್ತಿಲ್ಲ ಎಂದು ಹೇಳಿದರು.

ಉತ್ತರ ಕೊಡೋ ಅವಶ್ಯಕತೆ ಇಲ್ಲ:‌ ಶಿವಾರಂ ಹೆಬ್ಬಾರ್

ಬಾಂಬೇ ಟೀಮ್ ಕಾಂಗ್ರೆಸ್‌ಗೆ ಮರಳುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ನಾನು ಮಾಧ್ಯಮ ನೋಡಿ ತಿಳಿದುಕೊಂಡೆ. ಯಾಕೆ ಮಾಧ್ಯಮದಲ್ಲಿ ಹೀಗೆ ಬಂದಿದೆ ಗೊತ್ತಿಲ್ಲ. ನಾನು ಯಾವುದೇ ಸಭೆ, ಸಮಾರಂಭ ಅಥವಾ ಚರ್ಚೆ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಅಂತಹ ಪರಿಸ್ಥಿತಿ ಬಂದಾಗ ಕ್ಷೇತ್ರದ ಜನರನ್ನ ಬಿಟ್ಟು ರಾಜಕಾರಣ ಮಾಡೋಕಾಗಲ್ಲ. ಅಂತಿಮವಾಗಿ ನಮ್ಮ ಹಣೆಬರಹ ಬರೆಯೋದು ಕ್ಷೇತ್ರದ ಜನಾನೇ ಆಗಿದ್ದಾರೆ. ಅದು ಅವತ್ತು, ಇವತ್ತು ಅಥವಾ ಮುಂದೇನೂ ಇರಬಹುದು. ಪ್ರಮುಖವಾದ ಯಾವುದೇ ನಿರ್ಣಯವನ್ನು ಕ್ಷೇತ್ರದಲ್ಲಿ ಚರ್ಚೆ ಮಾಡದೇ ಮಾಡೋಕಾಗಲ್ಲ. ನನಗೆ ಅಂತಹ ಕಾಲನಿರ್ಣಯ ಆಗಿಲ್ಲ, ನಿರ್ಮಾಣವೂ ಆಗಿಲ್ಲ. ಹಾಗಾಗಿ ‘ರೇ’ ಅನ್ನೋದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಶಿರಸಿಯಲ್ಲಿ ಹೇಳಿದ್ದಾರೆ.

ಬಂದವರಿಗೆ ಲಾಸ್ಟ್‌ ಬೆಂಚ್‌: ಡಾ. ಜಿ. ಪರಮೇಶ್ವರ್

ಬಿಜೆಪಿಯಿಂದ ಕಾಂಗ್ರೆಸ್‌ಗೆ ಶಾಸಕರು ಬರುತ್ತಾರಾ ಎಂಬ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿ, ಬಿಜೆಪಿ ಶಾಸಕರು ಬರಬಹುದು. ಬಿಜೆಪಿಯಲ್ಲಿ ಬೇಸರ ಆಗಿ, ಸರಿಯಾಗಿ ನಡೆಸಿಕೊಳ್ಳಲಿಲ್ಲ ಅಂತ ಹೇಳಿ ಶಾಸಕರು ಬರಬಹುದು. ಬಿಜೆಪಿಯಿಂದ ಬರುವ ಶಾಸಕರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ. ಈಗಾಗಲೇ ಅಧ್ಯಕ್ಷರು ಈ ಬಗ್ಗೆ ಹೇಳಿದ್ದಾರೆ. ಪರಿಶೀಲನೆ ಮಾಡಿ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಐಡಿಯಾಲಜಿ ನಂಬಿ, ಕಾಂಗ್ರೆಸ್ ಲೀಡರ್‌ಶಿಪ್‌ ಮೇಲೆ ನಂಬಿಕೆ‌ ಇಟ್ಟು ಪಕ್ಷಕ್ಕೆ ಬಂದರೆ ಬರಬಹುದು. ಹಿಂದೆ ಪಕ್ಷ ಬಿಟ್ಟು ಹೋದವರೂ ಬರಬಹುದು. ಪಕ್ಷ ಬಿಟ್ಟು ಹೋಗುವವರು ವಾಪಸ್ ಬಂದಿರೋ ಉದಾಹರಣೆ ಇದೆ. ಆದರೆ ಅವರಿಗೆ ಫಸ್ಟ್ ಬೇಂಚ್ ಸಿಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Shakti Scheme : ಶಕ್ತಿ ಯೋಜನೆ ನಿಲ್ಲಲ್ಲ, ಇನ್ನೂ 10 ವರ್ಷ ಓಡುತ್ತೆ: ಸರ್ಕಾರದ ಸ್ಪಷ್ಟನೆ

ಕ್ಲಾಸ್‌ರೂಂಗೆ ಮಾತ್ರವೇ ಎಂಟ್ರಿ

ತಪ್ಪು ಮಾಡಿದ್ದನ್ನು ಸರಿ ಮಾಡಿಕೊಳ್ಳುತ್ತೇವೆ ಅಂದರೆ ಬರಬಹುದು. ಫಸ್ಟ್ ಬೆಂಚ್ ಮಾತ್ರ ಅವರಿಗೆ ಸಿಗುವುದಿಲ್ಲ. ಆದರೆ, ಅವರಿಗೆ ಕ್ಲಾಸ್ ರೂಂಗೆ ಬರಲು ಅವಕಾಶ ಇದೆ. ಅವರಿಗೆ ಮತ್ತೆ ಫಸ್ಟ್ ಬೆಂಚ್‌ಗೆ ಸಿಗಬೇಕಾದರೆ ತುಂಬಾ ದಿನ ಆಗುತ್ತದೆ ಅಷ್ಟೆ. ನನ್ನ ಜತೆ ಶಾಸಕರು ಚರ್ಚೆ ಮಾಡಿರುವ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಈ ಬಾರಿ ಕರ್ನಾಟಕದ ಜನತೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

Exit mobile version