ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕು ಕುದುರೆಡುವು ಗ್ರಾಮದಲ್ಲಿ ಪದ ಬಳಕೆ ಹಾಗೂ ಅದರ ಅರ್ಥೈಸುವಿಕೆಯಿಂದ ಆದ ತಪ್ಪು ಕೊಲೆಯಲ್ಲಿ ಅಂತ್ಯವಾಗಿದೆ. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕಟ್ಟಿಗೆಯಿಂದ ಬಲವಾಗಿ ಹೊಡೆದು ಕೊಲೆ (Murder) ಮಾಡಲಾಗಿದೆ.
ತಿಪ್ಪೇರುದ್ರ (70) ಕೊಲೆಯಾದ ದುರ್ದೈವಿ. ನಾಗರಾಜ ಎಂಬಾತ (32) ಕೊಲೆ ಮಾಡಿದ ಆರೋಪಿ. ತಿಪ್ಪೇರುದ್ರ ಹಾಗೂ ನಾಗರಾಜ್ ಇಬ್ಬರ ಮಧ್ಯೆ ಆಗಾಗ ಕುಟುಂಬದ ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು.
ಇದನ್ನೂ ಓದಿ | ಸತೀಶ್ ಜಾರಕಿಹೊಳಿ ಆಪ್ತನ ಮೇಲೆ ಫೈರಿಂಗ್ ಮಾಡಿದವನ ಕೊಲೆ!
ಭಾನುವಾರ ನಾಗರಾಜನ ಮನೆ ಎದರು ತಿಪ್ಪೇರುದ್ರ ಹೋಗುತ್ತಿರುವಾಗ ಆರೋಪಿ ನಾಗರಾಜ್ ಊಟಕ್ಕೆ ಕರೆದಿದ್ದ. ಇದೇ ವೇಳೆ ಮಾತನಾಡಿದ ತಿಪ್ಪೇರುದ್ರ, ನಾಯಿಗಳು ಎಲ್ಲಿಯಾದರೂ ಊಟ ಮಾಡಿಕೊಂಡು ಬಂದಿರುತ್ತವೆ ಬಿಡು ಎಂದಿದ್ದಾನೆ. ಇದರಿಂದ ಕೋಪಿತನಾದ ಆರೋಪಿ ನಾಗರಾಜ್, ತನಗೆ ನಾಯಿ ಎಂದು ತಿಪ್ಪೇರುದ್ರ ಹೇಳಿದ್ದಾನೆಂಬುದಾಗಿ ತಪ್ಪಾಗಿ ಅರ್ಥೈಸಿಕೊಂಡು ಪಕ್ಕದಲ್ಲೇ ಇದ್ದ ಕಟ್ಟಿಗೆಯಿಂದ ಆತನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗಿದೆ. ಬಳಿಕ ಆತನನ್ನು ರಸ್ತೆ ಮೇಲೆ ಎತ್ತಿ ಬಿಸಾಡಿದ್ದಾನೆ. ಇದರಿಂದ ತಿಪ್ಪೇರುದ್ರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಈ ಕುರಿತು ಮೃತ ತಿಪ್ಪೇರುದ್ರ ಕುಟುಂಬಸ್ಥರು ಗುಡಿಕೋಟೆ ಠಾಣೆಗೆ ದೂರು ನೀಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡ ಗುಡೆಕೋಟೆ ಪೊಲೀಸರು ಕೊಲೆ ಆರೋಪಿ ನಾಗರಾಜ್‌ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | ಕಲ್ಲಿನಿಂದ ತಲೆಗೆ ಜಜ್ಜಿ ಹಳೆ ಸ್ನೇಹಿತನ ಕೊಲೆ, 2 ವರ್ಷದ ಹಿಂದೆ ಹೊಡೆದಿದ್ದಕ್ಕೆ ಈಗ ಸೇಡು!