ಬೆಂಗಳೂರು: ದಾರಿಯಲ್ಲಿ ತಮ್ಮ ಪಾಡಿಗೆ ತಾವೆಂಬಂತೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ನಾಯಿ ವಿಚಾರವಾಗಿ ಚಾಕು ಇರಿದಿರುವ (stabbing a senior citizen) ಘಟನೆ ನಡೆದಿದೆ. ಅದೂ ಸಹ ತಪ್ಪು ಕಲ್ಪನೆಯಿಂದ ನಡೆದ ದುಷ್ಕೃತ್ಯ ಎಂಬುದು ತನಿಖೆ ವೇಳೆ ಬಯಲಿಗೆ ಬಂದಿದೆ. ಶ್ವಾನದ ಮಾಲೀಕ (owner of the dog) ತನ್ನ ಮೇಲೆ ನಾಯಿಯನ್ನು ಛೂಬಿಟ್ಟಿದ್ದಾನೆಂದು ಭಾವಿಸಿದ ವ್ಯಕ್ತಿಯು ದಾರಿಯಲ್ಲಿ ಹೋಗುತ್ತಿದ್ದ ವೃದ್ಧನನ್ನು ನಿಂದಿಸಿ ಚಾಕುವಿನಿಂದ ಇರಿದು ಹಲ್ಲೆ (Murder Attempt) ಮಾಡಿದ್ದಾನೆ. ಈಗ ಹಲ್ಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರಂನ 17ನೇ ಕ್ರಾಸ್‌ನಲ್ಲಿ (Malleswaram 17th Cross) ಈ ಘಟನೆ ನಡೆದಿದ್ದು, ದಿನಗೂಲಿ ಕಾರ್ಮಿಕ ಎಚ್.ರಾಜು (62) ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ. ರಾಜಾಜಿನಗರ ನಿವಾಸಿ ಬಾಲಸುಬ್ರಹ್ಮಣ್ಯ ಎಂಬುವವರು ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಲಸುಬ್ರಹ್ಮಣ್ಯ ಅವರ ದೂರಿನ ಮೇರೆಗೆ ಪೊಲೀಸರು ರಾಜು (57) ಎಂಬಾತನನ್ನು ಬಂಧಿಸಿದ್ದಾರೆ.
ಏನಿದು ಘಟನೆ?
ಆಗಸ್ಟ್ 21ರಂದು ರಾತ್ರಿ 8.30ರ ಸುಮಾರಿಗೆ ಮಲ್ಲೇಶ್ವರದ 17ನೇ ಕ್ರಾಸ್‌ನ ಪಾದಚಾರಿ ಮಾರ್ಗದಲ್ಲಿ ರಾಜು ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯೊಂದು ಏಕಾಏಕಿ ಬೊಗಳಿ ಹಿಂಬಾಲಿಸಿದೆ. ಇದರಿಂದ ರಾಜು ಗಾಬರಿಗೊಂಡಿದ್ದಾನೆ. ತಿರುಗಿ ನೋಡಿದರೆ ಆ ನಾಯಿ ಬಾಲಸುಬ್ರಹ್ಮಣ್ಯ ಅವರ ಹಿಂದೆ ನಡೆದುಕೊಂಡು ಬರುತ್ತಿತ್ತು. ಹಾಗಾಗಿ ಅದು ಅವರದ್ದೇ ನಾಯಿ ಎಂದು ರಾಜು ಭಾವಿಸಿದ್ದಾನೆ. ಆದರೆ, ಆ ನಾಯಿ ಆತನತ್ತ ನೋಡಿ ಬೊಗಳಲು ಪ್ರಾರಂಭಿಸಿದೆ. ಇದರಿಂದ ಗಾಬರಿಗೊಂಡ ರಾಜು ಅಲ್ಲಿಂದ ಓಡಲು ಪ್ರಾರಂಭಿಸಿದ. ನಾಯಿ ಸಹ ಆತನನ್ನು ಬೆನ್ನಟ್ಟಿಕೊಂಡು (dog walking behind man) ಬಂದಿದೆ ಎಂದು ವಿಚಾರಣೆ ವೇಳೆ ರಾಜು ಹೇಳಿದ್ದಾನೆ.
ನಾಯಿ ತನ್ನನ್ನು ಬೆನ್ನಟ್ಟಿ ಬರುತ್ತಿದ್ದಂತೆ ನಾನು ಸಹ ವೇಗವಾಗಿ ಓಡಿ ತಪ್ಪಿಸಿಕೊಂಡೆ. ಹೀಗಾಗಿ ಎದುರಿನ ಪಾದಚಾರಿ ಮಾರ್ಗಕ್ಕೆ ಓಡಿದೆ. ಆ ವೇಳೆ ನಾಯಿ ಸಹ ಕಣ್ಮರೆಯಾಯಿತು. ಆದರೆ, ಇದು ಬಾಲಸುಬ್ರಹ್ಮಣ್ಯ ಅವರ ನಾಯಿಯಾಗಿದ್ದು, ನನ್ನ ಮೇಲೆ ಛೂ ಬಿಟ್ಟಿದ್ದಾರೆ ಎಂದು ಭಾವಿಸಿ ನಾನು ಕೋಪಗೊಂಡೆ. ಹಾಗಾಗಿ ಚಾಕುವಿನಿಂದ ಅವರ ಮೇಲೆ ಹಲ್ಲೆ ಮಾಡಿದೆ ಎಂದು ರಾಜು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಬಾಲಸುಬ್ರಹ್ಮಣ್ಯ ಹೇಳಿದ್ದೇನು?
ಇತ್ತ ರಾಜುವಿನಿಂದ ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಲಸುಬ್ರಹ್ಮಣ್ಯ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ರಾಜು ನನ್ನ ಬಳಿ ಬಂದು ನಾಯಿಯ ವಿಷಯವಾಗಿ ಕೂಗಲು ಪ್ರಾರಂಭ ಮಾಡಿದನು. ಆದರೆ, ಆತನ ಮಾತುಗಳು ನನಗೆ ಸರಿಯಾಗಿ ಅರ್ಥ ಆಗಲೇ ಇಲ್ಲ. ಕೊನೆಗೆ ಆಗ ಇದ್ದಕ್ಕಿದ್ದಂತೆ ಚಾಕುವನ್ನು ಹೊರಗೆ ತೆಗೆದು ನನಗೆ ಇರಿದನು. ಮೊದಲು ನನ್ನ ದವಡೆಗೆ ಇರಿದನು. ನಾನು ಸಹಾಯಕ್ಕಾಗಿ ಕಿರುಚಿದೆ. ಆದರೆ, ಆತ ನನ್ನ ಮೇಲೆ ಮತ್ತಷ್ಟು ದಾಳಿ ಮಾಡಿದ. ಈ ವೇಳೆ ನನ್ನ ಬಲಗೈ ಮತ್ತು ಬೆರಳಿಗೆ ಇರಿದಿದ್ದಾನೆ” ಎಂದು ತಿಳಿಸಿದ್ದಾರೆ.
ನನ್ನ ಕೂಗು ಕೇಳಿ ಜನರು ಜಮಾಯಿಸಿದಾಗ ರಾಜು ಅಲ್ಲಿಂದ ಓಡಿಹೋದನು. ಕೆಲವರು ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದರು ಎಂದು ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.
ಇದನ್ನೂ ಓದಿ: CM Siddaramaiah : ಕಾಂಗ್ರೆಸ್ ಸರ್ಕಾರಕ್ಕಿಂದು 100 ದಿನ; ಗ್ಯಾರಂಟಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ ರಾಜುವಿನ ಚಹರೆಯನ್ನು ಪತ್ತೆ ಮಾಡಿದರು. ಬಳಿಕ ಆತನ ಬಂಧನಕ್ಕೆ ತಂಡ ರಚಿಸಿ, ಪತ್ತೆ ಮಾಡಿ ಬಂಧಿಸಿದ್ದಾರೆ. ಆದರೆ, ಬಾಲಸುಬ್ರಹ್ಮಣ್ಯ ಅವರು ಆ ನಾಯಿ ತಮ್ಮದಲ್ಲ, ಬೀದಿ ನಾಯಿ ಇರಬಹುದು. ರಾಜು ತಪ್ಪಾಗಿ ತಿಳಿದುಕೊಂಡು ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.