Site icon Vistara News

Student murder | ಶಿಕ್ಷಕನ ಕ್ರೌರ್ಯಕ್ಕೆ ವಿದ್ಯಾರ್ಥಿ ಬಲಿ: ಹದಲಿ ಶಾಲೆಗೆ ಕಾಲಿಡಲು ಭಯಪಡುತ್ತಿರುವ ಮಕ್ಕಳು

Hadli murder

ಗದಗ: ಪುಟ್ಟ ಬಾಲಕನೊಬ್ಬನ ಮೇಲೆ ಅಮಾನುಷವಾಗಿ ದಾಳಿ ನಡೆಸಿ ಕೊಂದೇ ಹಾಕಿದ ಶಿಕ್ಷಕನ ಕ್ರೌರ್ಯಕ್ಕೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಪ್ರಾಥಮಿಕ ಶಾಲೆ ನಲುಗಿದೆ. ಇಲ್ಲಿನ ಪರಿಸ್ಥಿತಿ ಎಷ್ಟು ಭಯಾನಕವಾಗಿದೆ ಎಂದರೆ ಅಲ್ಲಿನ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಹೀಗಾಗಿ ಮಂಗಳವಾರ ಇಲ್ಲಿ ಶಾಲೆಯ ಬೀಗವೇ ತೆಗೆದಿಲ್ಲ. ಈ ಶಾಲೆಯಲ್ಲಿ 1 ರಿಂದ 7 ತರಗತಿವರೆಗೆ ಒಟ್ಟು 427 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಉತ್ತಮ ಶಾಲೆ ಎಂಬ ಹೆಸರೂ ಇದೆ. ಆದರೆ, ನಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ ಪೋಷಕರು.

ಹದಲಿ ಶಾಲೆಯ ಅತಿಥಿ ಶಿಕ್ಷನಾಗಿ ಕೆಲಸ ಮಾಡುತ್ತಿರುವ ಮುತ್ತಪ್ಪ ಹಡಗಲಿ ಎಂಬಾತ ಅದೇ ಶಾಲೆಯ ೪ನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಕ್ರೂರವಾಗಿ ಕೊಂದು ಹಾಕಿದ ಘಟನೆ ಸೋಮವಾರ ನಡೆದಿತ್ತು. ಬಾಲಕ ತರಗತಿಯಲ್ಲಿದ್ದಾಗ ಮುತ್ತಪ್ಪ ಹಡಗಲಿ ಯಾವುದೋ ಕಾರಣಕ್ಕೆ ಆತನಿಗೆ ಹೊಡೆದಿದ್ದಾನೆ. ಆಗ ಆತ ಪಕ್ಕದ ಕೋಣೆಯಲ್ಲಿದ್ದ ಅಮ್ಮನ ಬಳಿ ಓಡಿ ಹೋಗಿದ್ದ.

ಭರತ್‌ನ ಅಮ್ಮ ಗೀತಾ ಬಾರಕೇರಿ ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿ. ಆಕೆ ಕ್ಲಾಸಿನಿಂದ ಹೊರಬಂದು ಯಾಕೆ ಹೊಡೆಯುತ್ತೀರಿ ಎಂದು ಕೇಳಿದ್ದೇ ತಡ, ಮುತ್ತಪ್ಪ ಹದಲಿ ಹುಡುಗನನ್ನು ಹಿಡಿದು ಇನ್ನಷ್ಟು ಬಾರಿಸಿದ್ದಾನೆ. ಜತೆಗೆ ಗೀತಾ ಅವರ ಮೇಲೆ ಶಲಾಕೆಯಿಂದ ಹೊಡೆದಿದ್ದಾನೆ. ಅಷ್ಟಕ್ಕೇ ನಿಲ್ಲದೆ ಆತ ಭರತ್‌ನನ್ನು ಕೈಯಿಂದ ಎತ್ತಿ ಮೇಲಿನ ಕಟ್ಟಡದಿಂದ ಕೆಳಗಿನ ಕಟ್ಟಡದ ಜಗಲಿಗೆ ಎಸೆದಿದ್ದಾನೆ. ಆಗ ಬಾಲಕನ ತಲೆ ನೆಲಕ್ಕೆ ಬಡಿದು ಹುಡುಗ ಪ್ರಾಣ ಕಳೆದುಕೊಂಡಿದ್ದಾನೆ.

ಬಾಲಕನ ತಾಯಿ ಗೀತಾ ಬಾರಕೇರಿ ಮಾತ್ರವಲ್ಲ, ಇನ್ನೊಬ್ಬ ಸಹಶಿಕ್ಷಕರ ಮೇಲೂ ಮುತ್ತಪ್ಪ ಹಲ್ಲೆ ಮಾಡಿದ್ದಾನೆ. ಹಲ್ಲೆ ಘಟನೆ ಬೇರೆ ತಿರುವು ಪಡೆದುಕೊಂಡಿರುವುದನ್ನು ಅರ್ಥ ಮಾಡಿಕೊಂಡ ಮುತ್ತಪ್ಪ ಅಲ್ಲಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದು, ಬಂಧನವೂ ಆಗಿದೆ ಎಂಬ ಸುದ್ದಿ ಇದೆ. ಗೀತಾ ಬಾರಕೇರಿ ಮತ್ತು ಇನ್ನೊಬ್ಬ ಶಿಕ್ಷಕರು ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜತೆಯಾಗಿ ಕೆಲಸಕ್ಕೆ ಸೇರಿದ್ದರು
ನಿಜವೆಂದರೆ, ಮುತ್ತಪ್ಪ ಹದಲಿ ಮತ್ತು ಗೀತಾ ಬಾರಕೇರಿ ಜತೆಯಾಗಿ ಉದ್ಯೋಗಕ್ಕೆ ಜಾಯಿನ್‌ ಆಗಿದ್ದರು. ಅತಿಥಿ ಶಿಕ್ಷಕಿ ಹುದ್ದೆ ಪಡೆಯುವಲ್ಲಿ ಮುತ್ತಪ್ಪ ಬೆಂಬಲವಾಗಿ ನಿಂತಿದ್ದ ಎನ್ನಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ವೈಮನಸ್ಸು ಮೂಡಿತ್ತು ಎನ್ನಲಾಗಿದೆ. ಅದೇ ಕಾರಣವಾಗಿ ಮುತ್ತಪ್ಪ ಗೀತಾ ಅವರ ಮಗನ ಮೇಲೆ ದ್ವೇಷ ಸಾಧಿಸುತ್ತಿದ್ದನಾ? ಅದನ್ನು ಗೀತಾ ಪ್ರಶ್ನಿಸಿದಾಗ ಮುತ್ತಪ್ಪನ ಆಕ್ರೋಶ ನೆತ್ತಿಗೇರಿ ಕೊಲೆಗೆ ಕಾರಣವಾಯಿತೇ ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ.

ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವರು
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ನಡೆಸಿದ ಅಮಾನವೀಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತಿಥಿ ಶಿಕ್ಷಕಿ ಗೀತಾ ಯಲ್ಲಪ್ಪ ಅವರ ಆರೋಗ್ಯವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ‌ ಸಚಿವರಾದ ಬಿ.ಸಿ. ನಾಗೇಶ್ ಅವರು ವಿಚಾರಿಸಿದರು.

‘ಶಾಲೆಯಲ್ಲಿ ನಡೆದಿರುವ ಈ ಘಟನೆ ಅತ್ಯಂತ ದುರಾದೃಷ್ಟಕರ. ಶಾಲೆಯ ಆವರಣದಲ್ಲಿ ಇಂತಹ ಘಟನೆಗಳನ್ನು ಊಹಿಸಲು ಅಸಾಧ್ಯ. ಘಟನೆಯಿಂದ ಆತಂಕಗೊಂಡಿರುವ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಕೌನ್ಸಿಲಿಂಗ್ ಮಾಡಿ ಧೈರ್ಯ ತುಂಬಲಾಗುತ್ತದೆ. ಘಟನೆಗೆ ಕಾರಣ ಏನು ಎಂಬುದು ಆರೋಪಿಯ ಬಂಧನದ ಬಳಿಕ ತಿಳಿದು ಬರಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಬಿ.ಸಿ. ನಾಗೇಶ್ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ | Student death | ಅತಿಥಿ ಶಿಕ್ಷಕನ ಹುಚ್ಚಾಟ: ಮನ ಬಂದಂತೆ ಥಳಿಸಿದ್ದರಿಂದ ಬಾಲಕ ಸಾವು, ಶಿಕ್ಷಕಿಯಾದ ತಾಯಿಗೂ ಹೊಡೆತ

Exit mobile version