ಮಂಡ್ಯ: ಪತಿ ಜತೆ ಸೇರಿ ಹೆತ್ತ ತಾಯಿಯನ್ನೆ ಮಗಳು ಕೊಲೆ ಮಾಡಿ ರಾತ್ರೋರಾತ್ರಿ ಶವ ಹೂತಿಟ್ಟಿರುವ ಘಟನೆ ಮಂಡ್ಯದಲ್ಲಿ (Murder Case) ನಡೆದಿದೆ. ಒಂದು ವರ್ಷದ ಬಳಿಕ ತಡವಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪತಿಯ ಮನೆಯಲ್ಲಿ ತಾಯಿಯನ್ನು ಕೊಂದು ಬಳಿಕ ತವರು ಮನೆಯಲ್ಲಿ ಮಣ್ಣು ಮಾಡಿದ್ದಾರೆ. ಮಂಡ್ಯ ತಾಲೂಕಿನ ಹೆಬ್ಬಾಕವಾಡಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಗ್ರಾಮದ ಶಾರದಮ್ಮ(50) ಮೃತ ದುರ್ದೈವಿ. ಶಾರದಮ್ಮ ಮಗಳಾದ ಅನುಷಾ ಹಾಗೂ ಅಳಿಯ ದೇವರಾಜ್ರಿಂದಲೇ ಹತ್ಯೆಯಾಗಿದ್ದಾರೆ. ಶಾರದಮ್ಮನವರು ಮೈಸೂರಿನ ಹಾರೋಹಳ್ಳಿ ನಿವಾಸಿಯಾದ ದೇವರಾಜ್ ಜತೆಗೆ ಮದುವೆ ಮಾಡಿಕೊಟ್ಟಿದ್ದರು. ಒಬ್ಬಳೇ ಮಗಳಾಗಿದ್ದರಿಂದ ಆಗಾಗ ಹಾರೋಹಳ್ಳಿಗೆ ಹೋಗಿ ಬರುತ್ತಿದ್ದರು. ಹೀಗೆ 2022ರ ನವಂಬರ್ನಲ್ಲಿ ಮಗಳ ಮನೆಗೆ ಹೋದಾಗ ಯಾವುದೋ ವಿಚಾರಕ್ಕೆ ತಾಯಿ ಹಾಗೂ ಮಗಳ ನಡುಗೆ ಜಗಳ ನಡೆದಿದೆ. ಆ ಜಗಳದಲ್ಲಿ ಶಾರದಮ್ಮ ಆಕಸ್ಮಿಕವಾಗಿ ಮನೆಯಲ್ಲೇ ಬಿದ್ದು ಮೃತಪಟ್ಟಿದ್ದರು. ಇದರಿಂದ ಗಾಬರಿಗೊಂಡ ಆಕೆ ನಡೆದಿದ್ದ ಎಲ್ಲವೂ ಪತಿ ದೇವರಾಜ್ಗೆ ತಿಳಿಸಿದ್ದಳು.
ಯಾರೊಟ್ಟಿಗೆ ಓಡಿ ಹೋದಳು ಎಂದು ಕಥೆ ಕಟ್ಟಿದ ನೀಚರು
ಈ ವಿಷಯ ಪೊಲೀಸರಿಗೆ ತಿಳಿದರೆ ಜೈಲೇ ಗತಿ ಎಂದು ಯೋಚಿಸಿದ ಅನುಷಾ ಹಾಗೂ ದೇವರಾಜ್ ದಂಪತಿ, ಹಾರೋಹಳ್ಳಿಯಿಂದ ಹೆಬ್ಬಕವಾಡಿಗೆ ರಾತ್ರೋರಾತ್ರಿ ಮೃತದೇಹವನ್ನು ಸಾಗಿಸಿ ಸ್ಮಶಾನದಲ್ಲಿ ಮಣ್ಣು ಮಾಡಿದ್ದರು. ಇದಾದ ಬಳಿಕ ಶಾರದಮ್ಮ ಯಾರದ್ದೊ ಜತೆಯಲ್ಲಿ ಓಡಿ ಹೋಗಿದ್ದಾಳೆ ಎಂದು ಸುದ್ದಿಯನ್ನೂ ಹಬ್ಬಿಸಿದ್ದರು. ಆರೇಳು ತಿಂಗಳು ಸುಮ್ಮನಿದ್ದರು.
ಬಳಿಕ ಅನುಷಾ 2023ರ ಜೂನ್ 22 ರಂದು ವರುಣಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದಳು. ಇಷ್ಟು ದಿನಗಳ ಕಾಲ ಹುಡುಕಿದರೂ ಸಿಗದಿದ್ದಾಗ ಅಳಿಯ-ಮಗಳನ್ನೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಂಡ-ಹೆಂಡತಿ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಆನಂತರ ಕೊಲೆ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಹೊರತೆಗೆಯಲು ಪೊಲೀಸರು ಮುಂದಾಗಿದ್ದಾರೆ. ಹೆಬ್ಬಕವಾಡಿಯ ಸ್ಮಶಾನದಲ್ಲಿ ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ನಿನ್ನೆ ಶನಿವಾರ ರಾತ್ರಿಯಿಂದಲೂ ಮೃತದೇಹಕ್ಕೆ ಹುಡುಕಾಟ ನಡೆಸಿದ್ದಾರೆ. ಮಹಿಳೆಯ ಮೃತದೇಹಕ್ಕಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.