ಬೆಂಗಳೂರು: ಸಾಕು ನಾಯಿಯನ್ನು ಕರೆದುಕೊಂಡು ಬಂದು ಮನೆ ಮುಂದೆ ಮಲಮೂತ್ರ ವಿಸರ್ಜನೆ ಮಾಡಿಸಿದ್ದನ್ನು ಆಕ್ಷೇಪಿಸಿದ್ದಕ್ಕೆ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮುನಿರಾಜು (68) ಕೊಲೆಯಾದ ವ್ಯಕ್ತಿ. ಇದೇ ವೇಳೆ ನಡೆಸಲಾದ ಹಲ್ಲೆಯಲ್ಲಿ ಮುರುಳಿ ಎಂಬವರಿಗೂ ಗಂಭೀರ ಗಾಯಗಳಾಗಿವೆ. ಪ್ರಮೋದ್, ರವಿಕುಮಾರ್ ಮತ್ತು ಪಲ್ಲವಿ ಎಂಬ ಕೊಲೆ ಅರೋಪಿಗಳನ್ನು ಬಂಧಿಸಲಾಗಿದೆ.
ಮುನಿರಾಜು ಅವರ ಮನೆ ಮುಂದೆ ಪ್ರಮೋದ್ ಎಂಬಾತ ನಿತ್ಯ ನಾಯಿ ಕರೆದುಕೊಂಡು ಬಂದು ಮಲಮೂತ್ರ ವಿಸರ್ಜನೆ ಮಾಡಿಸಿ ಗಲೀಜು ಮಾಡಿಸುತ್ತಿದ್ದ. ಇದನ್ನು ಮುನಿರಾಜು ಆಕ್ಷೇಪಿಸಿದ್ದರು. ಇದಾದ ನಂತರ ಪ್ರಮೋದ್, ರವಿಕುಮಾರ್ ಎಂಬಾತನನ್ನು ಸೇರಿಸಿಕೊಂಡು ನಾಯಿ ಜೊತೆಗೆ ಬಂದು ಮುನಿರಾಜು ಮನೆ ಮುಂದೆಯೇ ನಿಂತು ಸಿಗರೇಟ್ ಸೇದಿ ಕಿರಿಕ್ ಕೂಡ ಮಾಡುತ್ತಿದ್ದರು.
ಈ ವಿಚಾರಕ್ಕೆ ಮುನಿರಾಜು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರನ್ನೂ ಕರೆಸಿ ಬುದ್ಧಿ ಹೇಳಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಠಾಣೆಗೆ ಹೋಗಿ ಬಂದ ಮರುದಿನ ಮತ್ತೆ ಗಲಾಟೆಯಾಗಿದೆ. ಗಲಾಟೆ ವೇಳೆ ಪ್ರಮೋದ್ ಮತ್ತು ರವಿಕುಮಾರ್ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಹಲ್ಲೆಗೆ ಪ್ರಮೋದ್ ಪತ್ನಿ ಪಲ್ಲವಿ ಸಹ ಸಾಥ್ ನೀಡಿದ್ದಳು.
ಹಲ್ಲೆಯಲ್ಲಿ ಮುನಿರಾಜು ಸಾವಿಗೀಡಾಗಿದ್ದಾರೆ. ಮುರುಳಿ ಎಂಬಾತನಿಗೆ ತೀವ್ರ ಗಾಯವಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Murder Case: ಬೆಂಗಳೂರಿನ ಬಾರ್‌ನಲ್ಲಿ ರೌಡಿ ಶೀಟರ್‌ಗಳ ಗಲಾಟೆ; ಓರ್ವನ ಹತ್ಯೆಯಲ್ಲಿ ಅಂತ್ಯ