Site icon Vistara News

Murder case: ವಿಕೋಪಕ್ಕೆ ತಿರುಗಿದ ಕೌಟುಂಬಿಕ ಕಲಹ; ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಕೊಂದ ಪತಿ

mandya murder case

mandya murder case

ಮಂಡ್ಯ: ಪತಿಯೊಬ್ಬ ಪತ್ನಿಯನ್ನೇ ಬರ್ಬರವಾಗಿ ಹತ್ಯೆ (murder case) ಮಾಡಿರುವ ಘಟನೆ ಶುಕ್ರವಾರ ಮಂಡ್ಯದ ಯಲಿಯೂರು ಗೇಟ್ ಬಳಿ ನಡೆದಿದೆ. ಮನುಜ (30) ಮೃತ ದುರ್ದೈವಿ ಆಗಿದ್ದು, ರಾಮಚಂದ್ರ (38) ಹತ್ಯೆ ಮಾಡಿದ ಆರೋಪಿ ಆಗಿದ್ದಾನೆ.

ಮನುಜ ಹಾಗೂ ರಾಮಚಂದ್ರ ದಂಪತಿ ನಡುವೆ ಕೌಟುಂಬಿಕ ವಿಷಯಕ್ಕೆ ಸಂಬಂಧಪಟ್ಟಂತೆ ಆಗಾಗ ಗಲಾಟೆ ನಡೆಯುತ್ತಿತ್ತು. ಶುಕ್ರವಾರವೂ (ಮೇ 5) ಬೆಳಗ್ಗೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಜಗಳ ಅತಿರೇಕಕ್ಕೆ ತಿರುಗಿದ್ದು, ರಾಮಚಂದ್ರ ಸಿಟ್ಟಿಗೆದ್ದವನೇ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಪತ್ನಿ ಕೊಲೆಗೈದ ಆರೋಪಿ ರಾಮಚಂದ್ರನನ್ನು ಬಂಧಿಸಿದ್ದಾರೆ. ಇತ್ತ ಮನುಜ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಚೂರಿ ಇರಿತದಿಂದ ಗಂಭೀರ ಗಾಯ

ಗದಗ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ (knife attack) ಇರಿಯಲಾಗಿದ್ದು, ಗಂಭೀರಗೊಂಡು ಸಾವು ಬದುಕಿನ ನಡುವೆ ಸೆಣಸುತ್ತಿದ್ದಾರೆ.

ಗದಗನ ಎಸ್‌ಬಿಎಸ್ ಗಾರ್ಡನ್ ಬಳಿಯ 76ನೇ ಫ್ಲಾಟ್‌ನಲ್ಲಿ ಘಟನೆ ನಡೆದಿದೆ. ಕೆಂಚಪ್ಪ ಲಕ್ಕುಂಡಿ (32) ಎಂಬಾತ, ಇಮಾಮಸಾಬ್ ಖಾಗದಗಾರ್ (48) ಎಂಬುವವರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ದೇಹದ 6 ಕಡೆಗಳಲ್ಲಿ ಚಾಕುವಿನಿಂದ ಇರಿಯಲಾಗಿದೆ.

ಹೊಟ್ಟೆಗೆ ಚಾಕು ಇರಿತದಿಂದ ಕರುಳು ಹೊರಗೆ ಬಂದಿದೆ. ಗಾಯಾಳುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಕೆಂಚಪ್ಪನನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Karnataka Election : ಬಿಜೆಪಿಯವರು ಕರೆದಿಲ್ಲ, ಕರೆದಿದ್ದರೆ ಅವರ ಪ್ರಚಾರಕ್ಕೂ ಹೋಗ್ತಿದ್ದೆ ಎಂದ ಶಿವಣ್ಣ

ವಿಜಯಪುರದಲ್ಲಿ ಬೈಕ್‌ಗೆ ಲಾರಿ ಡಿಕ್ಕಿ, ಬೈಕ್ ಸವಾರ ಸಾವು

ವಿಜಯಪುರ: ನಿಯಂತ್ರಣ ತಪ್ಪಿದ ಲಾರಿ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿಯಾದ ಪರಿಣಾಮ (Road Accident) ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಈ ದುರ್ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಬಳಿ ನಡೆದಿದೆ. ಲಾರಿ ಚಾಲಕನ ನಿಯಂತ್ರಣ ತಪ್ಪಿ ಜೋರಾಗಿ ಬಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಮಲಕಾರಿ ಖಂಡಪ್ಪ ತೋರತೆ (33) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಝಳಕಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version