Site icon Vistara News

Murder case : ಸಾಗರಕಟ್ಟೆ ಹಿನ್ನೀರಿನಲ್ಲಿ ತೇಲಿ ಬಂತು ಯುವಕರಿಬ್ಬರ ಮೃತದೇಹ

mysore murder case. dead body found

ಮೈಸೂರು : ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಜೋಡಿ (Murder Case) ಕೊಲೆಯಾಗಿದೆ. ಇಲ್ಲಿನ ಸಾಗರಕಟ್ಟೆ ಹಿನ್ನೀರಿನಲ್ಲಿ ಯುವಕರಿಬ್ಬರ ಮೃತದೇಹಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಸುಮಾರು 25 ರಿಂದ 30 ವರ್ಷ ವಯಸ್ಸಿನ ಯುವಕರನ್ನು ಬೇರೆಲ್ಲೋ ಕೊಲೆಗೈದು, ಬಳಿಕ ಕೆರೆಗೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಪ್ಲಾಸ್ಟಿಕ್‌ ಚೀಲದಲ್ಲಿ ಸುತ್ತಿ ಬಿಸಾಕಿರುವ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಸಿಕ್ಕಿವೆ.

ಓರ್ವನ ಕೈ ಮೇಲೆ ನಾಗರಾಜನ್ VR POSTER 4B LEGEND ಎಂದು ಹಚ್ಚೆ ಇದೆ. ಸದ್ಯ ಎರಡು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಗುರುತು ಪತ್ತೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಸೀಮಾ ಲಾಟ್ಕರ್ ಹಾಗೂ ಅಡಿಷನಲ್ ಎಸ್‌ಪಿ ನಂದಿನಿ ಮತ್ತು ಡಿವೈಎಸ್‌ಪಿ ಕರೀಂರಾವತರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುತ್ತಮುತ್ತಲಿನ ಸಿಸಿ ಟಿವಿ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Child death : ಆಟವಾಡುತ್ತಾ ಸಂಪ್‌ಗೆ ಬಿದ್ದ 5 ವರ್ಷದ ಬಾಲಕಿ ಸಾವು

ಅಣ್ಣನ ಜತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಕೊಂದ ತಮ್ಮ!

ಕೋಲಾರ: ಗಂಡನನ್ನು ಕಳೆದುಕೊಂಡ ಮಹಿಳೆಯೊಬ್ಬರನ್ನು (Widow woman) ಚಾಕುವಿನಿಂದ ಇರಿದು ಕೊಲೆ (Murder Case) ಮಾಡಿದ ಘಟನೆ ಕೋಲಾರ ಜಿಲ್ಲೆಯ (Kolara News) ಕೆಜಿಎಫ್ ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ತೇಜಸ್ವಿನಿ (35) ಕೊಲೆಯಾದ ಮಹಿಳೆ.

ಕೊತ್ತೂರು ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ತೇಜಸ್ವಿನಿಯನ್ನು ಬೇತಮಂಗಲದ ಮುರಳಿ, ರಂಜಿತ್ ಹಾಗೂ ಇತರ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮುರಳಿ ಮತ್ತು ರಂಜಿತ್‌ರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.

ವಿಧವೆಯಾಗಿರುವ ತೇಜಸ್ವಿನಿ ಜತೆಗೆ ಬೇತಮಂಗಲ ಮೂಲದ ಚಲಪತಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕಾಗಿ ಚಲಪತಿಯ ಸಹೋದರ ಮುರಳಿ ಈ ಕೊಲೆಯನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ.

ತೇಜಸ್ವಿನಿ ಮತ್ತು ಚಲಪತಿಗೆ ಇತ್ತೀಚೆಗೆ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ. ಚಲಪತಿ ಯಶಸ್ವಿನಿಗೆ ಆಸರೆಯಾಗಿ ನಿಂತಿದ್ದ. ಆದರೆ, ಅದೇ ವೇಳೆ ಚಲಪತಿ ತನ್ನ ಕುಟುಂಬವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಅವನ ಮನೆಯವರನ್ನು ಕೆರಳಿಸಿತ್ತು. ಹೀಗಾಗಿ ಚಲಪತಿಯ ತಮ್ಮ ಮುರಳಿ ಇಬ್ಬರಿಗೂ ಬುದ್ಧಿ ಹೇಳಿದ್ದ. ಆದರೆ, ಚಲಪತಿಯಾಗಲೀ, ತೇಜಸ್ವಿನಿಯಾಗಲಿ ಅವನ ಮಾತು ಕೇಳಿಸಿಕೊಳ್ಳದೆ ತಮ್ಮ ಅಕ್ರಮ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ.

ಹೀಗಾಗಿ ಮುರಳಿ ತನ್ನ ಸ್ನೇಹಿತರ ಜತೆಗೆ ಬಂದು ತೇಜಸ್ವಿನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬೇತಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Love affair : ಪ್ರಿಯಕರ ಪೊಲೀಸನನ್ನು ಬೆಂಕಿ ಹಚ್ಚಿ ಕೊಂದ ಹೋಂ ಗಾರ್ಡ್‌ ರಾಣಿ; ಹಿಂದಿದೆ 2ನೇ ಲವ್‌ ಸ್ಟೋರಿ!

ಅನೈತಿಕ ಸಂಬಂಧದ ಸಂಶಯ; ಪತಿಯ ಎದೆಗೇ ಚೂರಿ ಹಾಕಿ ಕೊಂದ ಪತ್ನಿ

ಬೆಂಗಳೂರು: ರಾಜಧಾನಿಯಲ್ಲಿ ಪತ್ನಿಯೇ ತನ್ನ ಗಂಡನನ್ನು ಎದೆಗೆ ಚೂರಿ ಹಾಕಿ ಕೊಂದ (Woman kills her husband) ಭಯಾನಕ ಘಟನೆ (Murder Case) ನಡೆದಿದೆ. ಅನೈತಿಕ ಸಂಬಂಧದ (Illicit Relationship) ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಗಳ ಆರಂಭವಾಗಿ ಈ ಕೊಲೆ ನಡೆದಿದೆ. ಹುಳಿಮಾವು ಸಮೀಪದ ಪುಲ್ಲಿಂಗ್ ಪಾಸ್ ಕಾಲೇಜಿನ ಬಳಿ ಈ ಘಟನೆ ನಡೆದಿದೆ. ಉಮೇಶ್ ದಾಮಿ (27) ಎಂಬಾತನನ್ನು ಆತನ ಪತ್ನಿ ಮನಿಷಾ ದಾಮಿ ಕೊಲೆ ಮಾಡಿದ್ದಾಳೆ.

ಉಮೇಶ್‌ ದಾಮಿ ಮತ್ತು ಮನೀಷಾ ಹೊರರಾಜ್ಯದವರು. ಇಲ್ಲಿನ ಕಾಲೇಜಿನಲ್ಲಿ ಸೆಕ್ಯುರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ‌ ಮಾಡುತ್ತಿದ್ದರು. ಕಾಲೇಜು ಆವರಣದಲ್ಲೇ ಅವರ ವಾಸವಿತ್ತು.

ಬುಧವಾರ ರಾತ್ರಿ ಉಮೇಶ್‌ ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿದ್ದ. ಕುಡಿತ ಎಲ್ಲ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದ. ಈ ವೇಳೆ ಮನಿಷಾ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಕಂಡು ಮೊದಲೇ ಮತ್ತಿನಲ್ಲಿದ್ದ ಉಮೇಶನಿಗೆ ಸಿಟ್ಟು ನೆತ್ತಿಗೇರಿದೆ.

ನಿನಗೆ ಯಾರೊಂದಿಗೋ ಅನೈತಿಕ ಸಂಬಂಧವಿದೆ. ಹೀಗಾಗಿ ನೀನು ಅವರ ಜತೆ ಈ ಮಧ್ಯರಾತ್ರಿಯಲ್ಲಿ ಮಾತನಾಡುತ್ತಿದ್ದೀಯಾ, ಯಾರದು ಹೇಳು ಎಂದು ಆತ ಆಕೆಯ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆಗ ಅವರಿಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿದೆ.

ತನ್ನ ಮೇಲೆ ಸಂಶಯ ವ್ಯಕ್ತಪಡಿಸಿದ್ದರಿಂದ ಕೆರಳಿದ ಮನೀಷಾ ಚಾಕು ತೆಗೆದುಕೊಂಡು ಬಂದು ಉಮೇಶ್ ದಾಮಿಗೆ ಇರಿದಿದ್ದಾಳೆ. ನೇರವಾಗಿ ಎದೆಗೇ ಚೂರಿಯಿಂದ ಇರಿದಿದ್ದರಿಂದ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಉಮೇಶ್ ದಾಮಿ.

ಬಳಿಕ ಈ ವಿಷಯ ಹೊರಗಡೆ ತಿಳಿದು ಕೂಡಲೇ ಪೊಲೀಸರು ಆಗಮಿಸಿದರು. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹುಳಿಮಾವು ಪೊಲೀಸರು ಆರೋಪಿ ಮನಿಷಾಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version