Site icon Vistara News

Murder Case: ಮದ್ಯ ವ್ಯಸನಿ ಮಹಿಳೆಯಿಂದ ಯುವಕನ ಕೊಲೆ; ಮೊಬೈಲ್‌ ಕೇಳಿದಳು, ಕೊಡದೆ ಇದ್ದಾಗ ಇರಿದೇ ಬಿಟ್ಟಳು!

murder-case: Drunkard woman kills man for not giving her Mobile

murder-case: Drunkard woman kills man for not giving her Mobile

ಬೆಳಗಾವಿ: ಮದ್ಯ ವ್ಯಸನ ಎಂಥಾ ಕೃತ್ಯಗಳನ್ನು ಮಾಡಿಸಿಬಿಡುತ್ತದೆ, ಕುಡುಕರು ಅದೆಷ್ಟು ಅಪಾಯಕಾರಿಗಳು ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಅದರಲ್ಲೂ ಕುಡಿದು ದಾಂಧಲೆ ಎಬ್ಬಿಸೋದು ಬರೀ ಪುರುಷರಷ್ಟೇ ಅಲ್ಲ, ಮಹಿಳೆಯರು ಕೂಡಾ ಅಷ್ಟೇ ಡೇಂಜರಸ್‌ ಎನ್ನುವುದಕ್ಕೂ ಇದು ನಿದರ್ಶನ. ಬೆಳಗಾವಿಯ ಚವ್ಹಾಟ್‌ ಗಲ್ಲಿಯಲ್ಲಿ ಕುಡಿದು ಮತ್ತೇರಿದ್ದ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ (Murder Case) ಮಾಡಿದ್ದಾಳೆ. ಭಾನುವಾರ ರಾತ್ರಿ ಜಯಶ್ರೀ ಪವಾರ್‌ (40) ಎಂಬ ಮಹಿಳೆ 25 ವರ್ಷದ ನಾಗರಾಜ್ ರಾಗಿ ಪಾಟೀಲ್ ಎಂಬ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಳೆ.

ಏನಾಯಿತು ಅಲ್ಲಿ, ಆಕೆ ಕೊಲೆ ಮಾಡಿದ್ದೇಕೆ?

ನಾಗರಾಜ್ ರಾಗಿ ಪಾಟೀಲ್ ಎಂಬ ಈ ಯುವಕ ಬೆಳಗಾವಿ ತಾಲೂಕಿನ ತಾರಿಹಾಳ ನಿವಾಸಿ. ಮಹಾರಾಷ್ಟ್ರದ ಕರಾಡ್‌ನಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ನಾಗರಾಜ್ ಅವರು ಸ್ವಗ್ರಾಮ ತಾರಿಹಾಳದಲ್ಲಿ ನಡೆಯುತ್ತಿರುವ ರಾಮೇಶ್ವರ ದೇವರ ಜಾತ್ರೆಗೆ ಆಗಮಿಸಿದ್ದರು. ಹಬ್ಬ, ಜಾತ್ರೆಯ ನಿಮಿತ್ತ ತಮಗೆ ಮತ್ತು ಮನೆಯವರಿಗೆ ಬಟ್ಟೆ ಖರೀದಿಸಲೆಂದು ನಾಗರಾಜ್‌ ಅವರು ತಮ್ಮ ಸ್ನೇಹಿತನನ್ನು ಕರೆದುಕೊಂಡು ಬೆಳಗಾವಿ ನಗರಕ್ಕೆ ಬಂದಿದ್ದರು.

ಬಟ್ಟೆ ಖರೀದಿ ಪ್ರಕ್ರಿಯೆಯ ನಡುವೆ ಚವ್ಹಾಟ್‌ ಗಲ್ಲಿ ಕಾರ್ನರ್‌ನಲ್ಲಿ ನಾಗರಾಜ್ ಸ್ನೇಹಿತನ ಜೊತೆ ನಿಂತಿದ್ದರು. ಆಗ ಅಲ್ಲಿಗೆ ಬಂದವಳೇ ಜಯಶ್ರೀ. ಜಯಶ್ರೀ ಪರವಾರ್‌ ಕಂಗ್ರಾಳಿ ಕೆ.ಎಚ್. ಗ್ರಾಮದ ನಿವಾಸಿ. ಆಕೆ ಮದ್ಯವ್ಯಸನಿಯಾಗಿದ್ದು ಬೆಳಗಾವಿಯ ಗಲ್ಲಿಗಳಲ್ಲಿ ಸುತ್ತುತ್ತಿರುತ್ತಾಳೆ.

ಕುಡಿತದ ಮತ್ತಿನಲ್ಲೇ ತೇಲಾಡುತ್ತಿದ್ದ ಜಯಶ್ರೀ ನಾಗರಾಜ್‌ ಮತ್ತು ಆತನ ಸ್ನೇಹಿತ ನಿಂತಿದ್ದಲ್ಲಿಗೆ ಬಂದಿದ್ದಳು. ಬಂದು ಮೊಬೈಲ್‌ ಕೊಡುವಂತೆ ನಾಗರಾಜನನ್ನು ಕೇಳಿದಳು. ಆಗ ನಾಗರಾಜ್‌ ಕೈಯಲ್ಲಿದ್ದ ಮೊಬೈಲನ್ನು ಜೇಬಿನಲ್ಲಿಟ್ಟುಕೊಂಡು ಮೊಬೈಲ್‌ ಕೊಡುವುದಿಲ್ಲ ಎಂದು ಹೇಳಿದ.

ನಿನಗ್ಯಾಕೆ ಮೊಬೈಲ್‌ ಕೊಡಬೇಕು ಎಂದು ನಾಗರಾಜ ಕೇಳುತ್ತಿದ್ದಂತೆಯೇ ಜಯಶ್ರೀ ಪವಾರ್‌ ಒಮ್ಮೆಗೇ ತಾನು ಹಿಡಿದುಕೊಂಡಿದ್ದ ಚೂರಿಯಿಂದ ನಾಗರಾಜನ ಎದೆಗೇ ನೇರವಾಗಿ ಚುಚ್ಚಿಬಿಟ್ಟಳು. ಮತ್ತು ಅಲ್ಲಿಂದ ಓಡಿ ಹೋದಳು.

ಜತೆಗಿದ್ದ ಸ್ನೇಹಿತ ಕೂಡಲೇ ಗಾಯಾಳು ನಾಗರಾಜ್‌ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಾಗರಾಜ್ ಸಾವನ್ನಪ್ಪಿದ್ದಾರೆ.

ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮಾರುತಿ ಪವಾರ್‌ಳನ್ನು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ : Murder Case: ಮೈದುನ ಜತೆಗೆ ತನ್ನ ಸಹೋದರಿ ಮದುವೆಗೆ ಒಪ್ಪದ ಹೆಂಡತಿ, ಆಕೆಯನ್ನೇ ಕೊಲೆ ಮಾಡಿದ ಪತಿ

Exit mobile version