ಮಂಡ್ಯ: ಕಳೆದ ಜೂ. 21ರಂದು ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ (Murder Case) ತಂದೆಯಿಂದಲೇ ಇಬ್ಬರು ಮಕ್ಕಳ ಕೊಲೆಯಾದ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಆದರ್ಶ್ (4) ಹಾಗೂ ಅಮೂಲ್ಯ (3) ಹತ್ಯೆಯಾದ ಮಕ್ಕಳು. ಪಾಪಿ ತಂದೆ ಶ್ರೀಕಾಂತ್ ಎಂಬಾತ, ಸುತ್ತಿಗೆಯಿಂದ ಹೊಡೆದು ಮಕ್ಕಳ ಕೊಂದು, ಪತ್ನಿಗೂ ಹಲ್ಲೆ ಮಾಡಿ ಪರಾರಿ ಆಗಿದ್ದ. ಇದೀಗ ಪೊಲೀಸರು ಶ್ರೀಕಾಂತ್‌ನನ್ನು ಬಂಧಿಸಿದ್ದಾರೆ.
ಮೂಲತಃ ಗುಲ್ಬರ್ಗದವರಾಗಿರುವ ಶ್ರೀಕಾಂತ್ ಕುಟುಂಬ ಮರಳಗಾಲದ ವಿರುಪಾಕ್ಷ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಬುಧವಾರ ಮಕ್ಕಳಿಬ್ಬರಿಗೆ ಸುತ್ತಿಗೆಯಿಂದ ಹೊಡೆದು, ಕತ್ತು ಕೊಯ್ದು ಹತ್ಯೆ ಮಾಡಿದ್ದ. ಜತೆಗೆ ಪತ್ನಿ ಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಜೋಡಿ ಕೊಲೆ ಮಾಡಿದ ಶ್ರೀಕಾಂತ್ ತನ್ನ ಹುಟ್ಟುರಾದ ಜೇವರ್ಗಿಗೆ ತೆರಳಿದ್ದ. ಒಂಚೂರು ಪಶ್ಚಾತಾಪ ಪಡದೆ ಕಂಠ ಪೂರ್ತಿ ಕುಡಿದು ಮಲಗಿದ್ದ. ಟಿವಿಯಲ್ಲಿ ಮಕ್ಕಳ ಹತ್ಯೆ ವಿಚಾರ ತಿಳಿದು ಸ್ವತಃ ಶ್ರೀಕಾಂತ್ ಪೋಷಕರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಶ್ರೀಕಾಂತ್‌ನನ್ನು ಬಂಧಿಸಿದ್ದಾರೆ.
ಹೆಂಡ್ತಿ ಫೋನ್‌ನಲ್ಲಿ ಬ್ಯೂಸಿ
ಶ್ರೀಕಾಂತ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹತ್ಯೆಗೆ ಕಾರಣವೇನು ಎಂಬುದನ್ನು ತಿಳಿಸಿದ್ದಾನೆ. ಲಕ್ಷ್ಮಿ ಯಾವಾಗಲು ಮೊಬೈಲ್‌ನಲ್ಲಿ ಯಾರೊಂದಿಗೂ ಗಂಟೆ ಗಟ್ಟಲೇ ಮಾತನಾಡುತ್ತಾ ಇದ್ದಳು. ಹೀಗಾಗಿ ಪತ್ನಿಯ ಶೀಲ ಶಂಕಿಸಿ ಆಗಾಗ ಇಬ್ಬರ ನಡುವೆ ಗಲಾಟೆ ನಡೆಯಿತ್ತಿತ್ತು. ಇಬ್ಬರು ಮಕ್ಕಳು ನನ್ನದಲ್ಲವೆಂದು ಮಕ್ಕಳ ಮೇಲೆ ಸದಾ ಕೆಂಡ ಕಾರುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: Assault Case: ಆಸ್ತಿಯಲ್ಲಿ ಭಾಗ ಬೇಕು ಎಂದವಳ ಅಟ್ಟಾಡಿಸಿ ಮಚ್ಚು ಬೀಸಿದ ಪತಿ
ಕಳೆದ ಬುಧವಾರ ರಾತ್ರಿಯು ಇದೆ ವಿಚಾರಕ್ಕೆ ಗಲಾಟೆ ನಡೆದಿದ್ದು, ಸಿಟ್ಟಿಗೆದ್ದ ಶ್ರೀಕಾಂತ್ ಮಕ್ಕಳ ಕತ್ತನ್ನು ಸೀಳಿ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಹತ್ಯೆ ಮಾಡಲು ಬರೋಬ್ಬರಿ 6 ಬಾರಿ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಲಕ್ಷ್ಮೀ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಪರಾರಿಯಾಗಿದ್ದಾನೆ. ಸದ್ಯ ಶ್ರೀರಂಗಪಟ್ಟಣ ಗ್ರಾಂ ಠಾಣಾ ಪೊಲೀಸರು ಆರೋಪಿಯನ್ನು ಜೇವರ್ಗಿಯಿಂದ ಬಂಧಿಸಿ ಕರೆ ತಂದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ