ಚಿಕ್ಕೋಡಿ: ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ನಡೆದ ಬರ್ಬರ ಹತ್ಯೆ ಪ್ರಕರಣವೊಂದು ಯಾವ ಸಿನಿಮಾಗೂ ಕಡಿಮೆ ಇಲ್ಲ. ಪ್ರೇಯಸಿ ಮನೆಗೆ ಕರೆದಳೆಂದು ಹೋದ ಪ್ರಿಯತಮನನ್ನು ಯುವತಿಯ ಕುಟುಂಬಸ್ಥರು ಹತ್ಯೆ (Murder Case) ಮಾಡಿರುವ ಘಟನೆ ನಡೆದಿದೆ.
ನವೆಂಬರ್ 12 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಹೊರ ವಲಯದ ಶಿಂಗಳಾಪುರ ಬ್ರಿಡ್ಜ್‌ನಲ್ಲಿ ಯುವಕನ ಶವವೊಂದು ಪತ್ತೆಯಾಗಿತ್ತು. ಗೋಕಾಕ್ ಶಹರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ನಿಶ್ಚಿತಾರ್ಥವಾಗಿದ್ದ ಯುವತಿ ಜತೆಗೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಕೊಲೆ ಆಗಿರುವ ವಿಚಾರ ಬಯಲಾಗಿತ್ತು. ಶಿಂಧಿಕುರಬೇಟ ಗ್ರಾಮದ ಸೋಮಲಿಂಗ (22) ಕೊಲೆಯಾದ ಯುವಕ.
ಯುವತಿಯೊಬ್ಬಳೊಂದಿಗೆ ಸೋಮಲಿಂಗ ಪ್ರೇಮಪಾಶಕ್ಕೆ ಸಿಲುಕಿದ್ದ. ಆದರೆ, ಇದೇ ವೇಳೆ ಆಕೆಗೆ ನಿಶ್ಚಿತಾರ್ಥವಾಗಿದೆ. ಆದರೂ ಪ್ರೀತಿ ಮುಂದುವರಿದಿತ್ತು. ಈ ವಿಚಾರ ಅದು ಹೇಗೋ ಯುವತಿಯ ಕುಟುಂಬಸ್ಥರಿಗೆ ತಿಳಿದು ಹೋಗಿತ್ತು. ಮಗಳ ತಲೆಕೆಡಿಸಿದವನಿಗೆ ತಕ್ಕ ಪಾಠ ಕಲಿಸಬೇಕೆಂದುಕೊಂಡ ಪೋಷಕರು ಮಾಸ್ಟರ್ ಪ್ಲ್ಯಾನ್‌ವೊಂದನ್ನು ಮಾಡಿದರು. ಮಗಳನ್ನು ಹೆದರಿಸಿ, ಆಕೆಯಿಂದಲೇ ಸೋಮಲಿಂಗನಿಗೆ ಫೋನ್ ಮಾಡಿಸಿದ್ದರು. ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಕರೆಸಿಕೊಂಡಿದ್ದರು. ಆದರೆ, ಬಳಿಕ ನಡೆದಿದ್ದೇ ದುರಂತ.
ಭಾವಿ ಪತಿಯೂ ಭಾಗಿ
ಪ್ರೀತಿಸಿದ ಹುಡುಗಿ ಕರೆದಳೆಂದು ಆತುರದಲ್ಲಿ ಹೋದವನಿಗೆ ಶಾಕ್ ಕಾದಿತ್ತು. ಅಲ್ಲಿ ಯುವತಿಯ ಮನೆಯವರು ಎದುರಾಗಿದ್ದರು. ಅಲ್ಲದೆ, ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಕೂಡಾ ಇದ್ದ. ಅವರೆಲ್ಲರೂ ಸೇರಿ ಸೋಮಲಿಂಗನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಸಿಮೆಂಟ್ ಕಂಬಕ್ಕೆ ಮೃತದೇಹವನ್ನು ಕಟ್ಟಿ ಘಟಪ್ರಭಾ ನದಿಗೆ ಎಸೆದಿದ್ದಾರೆ. ಸ್ವಲ್ಪ ದಿನದ ಬಳಿಕ ಮೃತ ದೇಹ ತೇಲಿ ದಡವೊಂದಕ್ಕೆ ಬಂದಿತ್ತು. ಅದನ್ನು ಪರಿಶೀಲನೆ ಮಾಡಿದಾಗ ಮೃತನ ಕೈ ಮೇಲೆ Mom-dad ಎಂದು ಬರೆದ ಟ್ಯಾಟೋ, ಕೈಯಲ್ಲಿದ್ದ ಕಡಗ ಕಂಡಿದೆ. ಇದರಿಂದ ಪೊಲೀಸರು ಆ ಯುವಕನ ಗುರುತನ್ನು ಪತ್ತೆ ಹಚ್ಚಿದ್ದರು.
ಪ್ರಕರಣದ ದಿಕ್ಕು ತಪ್ಪಿಸಲು ನಾನಾ ಕಸರತ್ತು
ಹಂತಕರು ಕೊಲೆ ಮಾಡಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಕೊಲೆ ಮಾಡಿ ಬಳಿಕ ಸೋಮಲಿಂಗನ ಮೊಬೈಲ್ ಇಟ್ಟುಕೊಂಡಿದ್ದಾರೆ. ಬೇರೆ ಯುವತಿ ಜತೆಗೆ ಸೋಮಲಿಂಗ ಕಳೆದ ಖಾಸಗಿ ಕ್ಷಣದ ಫೋಟೊವನ್ನು ವಾಟ್ಸ್‌ಆ್ಯಪ್‌ನ ಸ್ಟೇಟಸ್‌ನಲ್ಲಿ ಹಾಕಿದ್ದಾರೆ. ಹೀಗೆ ಸ್ಟೇಟಸ್ ಹಾಕಿ ಮೊಬೈಲ್‌ನ ಬೆಂಗಳೂರು-ಮೀರಜ್ ರೈಲಿನಲ್ಲಿ ಎಸೆದು ಹೋಗಿದ್ದರು.
ಆದರೆ ತನಿಖೆಗಿಳಿದಿದ್ದ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಮೇಲೆ ಮೀರಜ್ ರೈಲಿನಲ್ಲಿ ಮೊಬೈಲ್ ಪತ್ತೆ ಹಚ್ಚಿದ್ದರು. ಈ ವೇಳೆ ಮೊಬೈಲ್ ಕಾಲ್ ಡಿಟೈಲ್ ತೆಗೆದು ಪರಿಶೀಲನೆ ನಡೆಸಿದಾಗ, ಕೊನೆಯ ಫೋನ್ ಕಾಲ್ ಸೋಮಲಿಂಗನ ಪ್ರೇಯಸಿಯಿಂದ ಬಂದಿದ್ದು ಎಂಬುದು ತಿಳಿದು ಬಂದಿದೆ. ಹೀಗಾಗಿ ಯುವತಿಯನ್ನು ಮೊದಲು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಿವಲಿಂಗ ತಳವಾರ್ ಮತ್ತು ಚಿಕ್ಕಪ್ಪ ಸಂತೋಷ್ ತಳವಾರ್ ಹೆಸರನ್ನು ಆಕೆ ಬಾಯಿ ಬಿಟ್ಟಿದ್ದಾಳೆ. ಆಕೆಯ ಹೇಳಿಕೆ ಆಧಾರದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ | Newborn baby found | ಮೂರು ದಿನದ ಹಸುಗೂಸನ್ನು ಪೆಟ್ಟಿಗೆಯಲ್ಲಿಟ್ಟು ಪೊದೆಯಲ್ಲಿ ಇಟ್ಟು ಹೋದರು!