Site icon Vistara News

Murder Case | ಪತ್ನಿಯ ಅನುಮಾನಿಸಿ ಕೊಚ್ಚಿ ಕೊಂದ; ತಾನೂ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ

hasan murder ೪

ಬೇಲೂರು: ಪತ್ನಿ ಬೇರೊಬ್ಬನೊಂದಿಗೆ ಸದಾ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಯಾರ ಬಳಿ ಮಾತನಾಡುತ್ತಿರುವೆ ಎಂದು ಕೇಳಿದರೆ ವಾಪಸ್‌ ಬೈಯುತ್ತಿದ್ದಳು, ಸರಿಯಾಗಿ ಊಟ, ತಿಂಡಿ ಕೊಡುತ್ತಿರಲಿಲ್ಲ ಎಂಬ ಕಾರಣ ನೀಡಿದ ಪತಿಯೊಬ್ಬ ಆಕೆ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ಕೊಲೆ (Murder Case) ಮಾಡಿದ್ದು, ತಾನೂ ಕತ್ತು ಕೊಯ್ದುಕೊಂಡ ಘಟನೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿ ತಟ್ಟೆಕೆರೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ತಟ್ಟೆಕೆರೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಪ್ರೇಮಾ (40) ಕೊಲೆಯಾದವರು. ಪತಿ ಶಾಂತೋಜಿರಾವ್ (43) ಪತ್ನಿಯನ್ನು ಕೊಲೆ ಮಾಡಿ ತಾನೂ ಕತ್ತು ಕೊಯ್ದುಕೊಂಡಿದ್ದಾನೆ. ಸದ್ಯ ಆತನಿಗೆ ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಈತನಿಗೆ ಅನುಮಾನ ಪಡುವುದೇ ಕಾಯಿಲೆಯಾಗಿತ್ತು ಎಂದು ಹೇಳಲಾಗಿದ್ದು, ಮನೆ ಬಿಟ್ಟು ಹೋಗಿ 2 ವರ್ಷದ ಬಳಿಕ ಮನೆಗೆ ವಾಪಸಾಗಿದ್ದ.

ಪತ್ನಿ ಪ್ರೇಮಾ ಜತೆ ಶಾಂತೋಜಿರಾವ್

ಸದಾ ಫೋನ್‌ನಲ್ಲಿ ಮಾತನಾಡುತ್ತಿದ್ದಳೆಂದು ಆರೋಪ
ನನ್ನ ಪತ್ನಿ ಯಾವಾಗಲೂ ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಳು. ಕೇಳಿದರೆ ನನಗೆ ತಿರುಗಿ ಬೈಯ್ಯುತ್ತಿದ್ದಳು. ಊಟ-ತಿಂಡಿಯನ್ನು ಸರಿಯಾಗಿ ಕೊಡುತ್ತಿರಲಿಲ್ಲ. ಅದಕ್ಕಾಗಿ ಕೊಲೆ ಮಾಡಿದೆ ಎಂದಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾನೆ. ಶಾಂತೋಜಿರಾವ್‌ಗೆ ಕೊಲೆಯಾದ ಪ್ರೇಮ ಎರಡನೇ ಪತ್ನಿಯಾಗಿದ್ದಾರೆ. ಪ್ರೇಮ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Murder Case | ಖಾರದ ಪುಡಿ ಎರಚಿ ಸರ್ಕಲ್‌ ಮಧ್ಯದಲ್ಲೇ ಅಕ್ಕಿ ವ್ಯಾಪಾರಿಯ ಬರ್ಬರ ಹತ್ಯೆ

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತಟ್ಟೆಕೆರೆ ಗ್ರಾಮದ ಶಾಂತೋಜಿರಾವ್ ಆಟೋ ಚಾಲಕನಾಗಿದ್ದು, ಎರಡನೇ ಮದುವೆಯಾಗಿದ್ದನು. ಮೊದಲ ಪತ್ನಿ ಜತೆ ಕೆಲ ವರ್ಷಗಳ ಸಂಸಾರ ನಡೆಸಿದ್ದು, ನಂತರದಲ್ಲಿ ಪತ್ನಿ ಮೇಲೆ ಸದಾ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದರಿಂದ ಪ್ರತಿನಿತ್ಯ ಕುಟುಂಬದಲ್ಲಿ ಜಗಳ ನಡೆಯುತ್ತಿದ್ದು, ಕುಟುಂಬಸ್ಥರು ಅನೇಕ ಬಾರಿ ರಾಜಿ ಸಂಧಾನ ನಡೆಸಿ ಬುದ್ಧಿ ಹೇಳಿದ್ದರೂ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಹೀಗಾಗಿ ಮೊದಲ ಪತ್ನಿ ಈತನನ್ನು ತೊರೆದು ತನ್ನ ಮಕ್ಕಳೊಂದಿಗೆ ಬೇರೆಯಾಗಿದ್ದರು.

ನಂತರ ಅಂಗನವಾಡಿ ಶಿಕ್ಷಕಿ ಪ್ರೇಮಾ ಜತೆ ಎರಡನೇ ವಿವಾಹವಾಗಿದ್ದ ಶಾಂತೋಜಿರಾವ್ ಆಕೆಯ ಜತೆಗೂ ಇದೇ ಚಾಳಿ ಮುಂದುವರಿಸಿದ್ದ. ಪ್ರೇಮಾರಿಗೆ ಯಾವುದೇ ಫೋನ್ ಬಂದರೂ ಫೋನ್ ಮಾಡಿರುವುದು ಯಾರು? ಎಂದೆಲ್ಲ ಪ್ರಶ್ನಿಸಿ ಅನುಮಾನ ವ್ಯಕ್ತಪಡಿಸುತ್ತಿದ್ದ. ಇಲ್ಲಸಲ್ಲದ ಆರೋಪ ಮಾಡಿ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಪ್ರೇಮಾ ರೋಸಿ ಹೋಗಿದ್ದರು. ಇದೇ ವಿಚಾರಕ್ಕೆ ಕೌಟುಂಬಿಕ ಕಲಹ ತಾರಕಕ್ಕೇರಿ ಶಾಂತೋಜಿರಾವ್ ಮನೆ ಬಿಟ್ಟು ಹೋಗಿದ್ದ.

ಎರಡು ವರ್ಷಗಳ ಬಳಿಕ ವಾಪಸ್‌
ಮನೆ ಬಿಟ್ಟು ತೆರಳಿದ್ದ ಶಾಂತೋಜಿರಾವ್‌ 2 ವರ್ಷ ಕಾಲ ಅತ್ತ ಸುಳಿದಿರಲಿಲ್ಲ. ಕಳೆದ ತಿಂಗಳು ಮಹಾಲಯ ಅಮಾವಾಸ್ಯೆ ದಿನದಂದು ಶಾಂತೋಜಿರಾವ್‌ ಮನೆಗೆ ವಾಪಸ್ ಬಂದಿದ್ದನು. ಎಲ್ಲರೂ ಚೆನ್ನಾಗಿರೋಣ, ಒಟ್ಟಿಗೆ ಬಾಳೋಣ ಎಂದು ಮತ್ತೆ ಸಂಸಾರ ಶುರು ಮಾಡಿದ್ದ. ಪತಿ ವಾಪಸ್ ಬಂದಿದ್ದಕ್ಕೆ ಪ್ರೇಮ ಖುಷಿಯಾಗಿದ್ದರು. ಆದರೆ ಶಾಂತೋಜಿರಾವ್ ಆಟೋ ಓಡಿಸುವುದನ್ನು ಬಿಟ್ಟು ಮನೆಯಲ್ಲಿಯೇ ಇದ್ದ. ಅಲ್ಲದೇ ಪುನಃ ಪತ್ನಿ ಮೇಲೆ ಅನುಮಾನ ಪಡಲು ಶುರು ಮಾಡಿದ್ದ. ಗುರುವಾರ ಪ್ರೇಮಾ ಬಿಕ್ಕೊಡಿಯಲ್ಲಿ ಮೀಟಿಂಗ್ ಮುಗಿಸಿ ಮನೆಗೆ ಬಂದಿದ್ದರು. ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ಪ್ರೇಮಾ ಮಂಚದ ಮೇಲೆ ಮಲಗಿದ್ದ ವೇಳೆ ಶಾಂತೋಜಿರಾವ್‌ ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಚಾಕುವಿನಿಂದ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ನೋಡಿದ ಮಕ್ಕಳು ಹೆದರಿದ್ದು, ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿ ಶಾಂತೋಜಿರಾವ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | Death Note | ಪತಿಯ ಕೊಲೆಗೆ ನ್ಯಾಯ ಕೊಡಿಸಲಾಗದೆ ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ನೋವು ತೋಡಿಕೊಂಡ ಪುಷ್ಪಾ

Exit mobile version