Site icon Vistara News

Murder Case : ಮಲಗಿದ್ದ ಕ್ಯಾಶಿಯರ್‌ಗೆ ದೊಣ್ಣೆಯಿಂದ ಹೊಡೆದು ಹತ್ಯೆಗೈದ ಹೌಸ್‌ಕೀಪರ್

Citadel hotel Cashier Death

ಬೆಂಗಳೂರು: ಇಲ್ಲಿನ ಜೀವನ್ ಭೀಮಾನಗರ ಸಿಟಾಡೆಲ್ ಹೋಟೆಲ್‌ (Citadel Hotel) ಕ್ಯಾಶಿಯರ್‌ನ (cashier) ಬರ್ಬರ ಹತ್ಯೆ (Murder case) ಆಗಿದೆ. ಕ್ಯಾಶಿಯರ್ ಸುಭಾಷ್ ಮೃತ ದುರ್ದೈವಿ.

ಹೋಟೆಲ್‌ನ ಸೋಫಾ ಮೇಲೆ ಸುಭಾಷ್‌ ಮಲಗಿದ್ದರು. ಈ ವೇಳೆ ಅಲ್ಲಿಗೆ ಬಂದ ಹೌಸ್‌ಕೀಪರ್‌ ಅಭಿಷೇಕ್‌ ದೊಣ್ಣೆಯಿಂದ ಮನಬಂದಂತೆ ಸುಭಾಷ್‌ಗೆ ಥಳಿಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸುಭಾಷ್‌ ಜೀವ ಬಿಟ್ಟಿದ್ದಾರೆ. ಕಂಠಪೂರ್ತಿ ಕುಡಿದು ಬಂದ ಅಭಿಷೇಕ್‌ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜೆ.ಬಿ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಭೀಮಾಶಂಕರ್ ಗುಳೇದ್, ಬೆಳಗ್ಗೆ 6:45ರ ಸುಮಾರಿಗೆ ಸಿಟಾಡೇಲ್ ಹೋಟೆಲ್ ಮಾಲೀಕರು ಪೊಲೀಸ್ ಠಾಣೆಗೆ ವಿಷಯವನ್ನು ಮುಟ್ಟಿಸಿದ್ದರು. ಮೇಲ್ನೋಟಕ್ಕೆ ಇದು ದರೋಡೆ ಮಾಡಲು ಬಂದು ಹತ್ಯೆ ಆಗಿದೆ ಎಂದು ದೂರು ನೀಡಿದ್ದರು. ಆದರೆ ನಂತರ ತನಿಖೆ ನಡೆಸಿದಾಗ ಅದೇ ಹೋಟೆಲ್‌ನ ಹೌಸ್ ಕೀಪರ್ ಅಭಿಷೇಕ್ ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದು ಕೊಂದೇ ಬಿಟ್ಟಳು

ಕ್ಷುಲ್ಲಕ ಕಾರಣಕ್ಕೆ ಅಪ್ಪನೊಂದಿಗೆ ಕಿರಿಕ್‌ ತಗೆದು ಗಲಾಟೆ ಮಾಡಿಕೊಂಡ ಮಗಳು ಸಿಟ್ಟಿಗೆದ್ದು ಅಪ್ಪನನ್ನು ಕೊಂದು (Murder case) ಹಾಕಿದ್ದಾಳೆ. ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹುಚ್ಚೀರಯ್ಯ (68) ಹತ್ಯೆಯಾದವರು. ಪುಷ್ಪ (30) ತಂದೆಯನ್ನೇ ಹತ್ಯೆ ಮಾಡಿದ ಮಗಳು.

ಮದುವೆ ಆಗಿದ್ದ ಪುಷ್ಪಳ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿತ್ತು. ಹೀಗಾಗಿ ಗಂಡನ ಬಿಟ್ಟು ಹಲವು ವರ್ಷಗಳಿಂದ ತವರು ಮನೆಯಲ್ಲೇ ಇದ್ದಳು. ಈ ನಡುವೆ ಪುಷ್ಪ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಳು ಎನ್ನಲಾಗಿದೆ. ಮೊನ್ನೆ ಮಂಗಳವಾರ ರಾತ್ರಿ (ಜು.18) ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಅಪ್ಪ ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: Self Harming : ನೇಣಿಗೆ ಶರಣಾದ ಗುಡಿಬಂಡೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷ

ಈ ವೇಳೆ ಸಿಟ್ಟಿಗೆದ್ದ ಪುಷ್ಪ ಮನೆಯಲ್ಲಿದ್ದ ಗುದ್ದಲಿ ತೆಗೆದುಕೊಂಡು ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ತೀವ್ರ ರಕ್ತಸ್ರಾವದಿಂದ ಹುಚ್ಚೀರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ತಂದೆಯನ್ನು ಕೊಂದು ಪುಷ್ಪಾ ಪರಾರಿ ಆಗಿದ್ದಾಳೆ. ಮನೆಯಿಂದ ಯಾರು ಹೊರಗೆ ಬಾರದ ಕಾರಣಕ್ಕೆ ಅನುಮಾನಗೊಂಡ ಸ್ಥಳೀಯರು ಮನೆಯೊಳಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಕೂಡಲೇ ಸ್ಥಳೀಯರು ಚನ್ನಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪರಾರಿ ಆಗಿರುವ ಪುಷ್ಪಾಳಿಗಾಗಿ ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version