ವಿಜಯಪುರ: 11 ವರ್ಷಗಳ ಹಿಂದೆ ನಡೆದಿದ್ದ ಮರ್ಯಾದಾ ಹತ್ಯೆಯೊಂದರ (Murder Case) ಪ್ರಕರಣ ಈಗ ಬೆಳಕಿಗೆ ಬಂದಿದೆ. ಸಿನಿಮೀಯ ದಶ್ಯಗಳನ್ನು ನೆನಪಿಸುವಂತಹ ಪ್ರಕರಣವನ್ನು ದೂರಿನ ಆಧಾರದ ಮೇಲೆ ಕ್ಷಿಪ್ರಗತಿಯಲ್ಲಿ ಭೇದಿಸಿ, ಆರೋಪಿಗಳ ಹೆಡೆಮುರಿ ಕಟ್ಟಿ ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಬಸವರಾಜ ಮಮದಾಪುರ ಇವರ ಪುತ್ರಿಯಾದ ಪ್ರಿಯಾಂಕಾ ದಾನೇಶ್ವರಿ ತಮ್ಮ ಸಂಬಂಧಿಕರಲ್ಲಿಯೇ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹುಚ್ಚಪ್ಪಗೌಡ ಪಾಟೀಲ್ ಎನ್ನುವವನೊಂದಿಗೆ 2008ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರದ ದಿನಗಳಲ್ಲಿ ಇಬ್ಬರಲ್ಲಿಯೂ ಮನಸ್ತಾಪ ಉಂಟಾಗಿ ಪದೇಪದೇ ತವರು ಮನೆಗೆ ಪ್ರಿಯಾಂಕಾ ಬರುತ್ತಿದ್ದಳು. ಇತ್ತ ಕಡೆ ಪೋಷಕರೂ ಅವಳ ಮನವೊಲಿಸಿ ಗಂಡನ ಮನೆಗೆ ಬಿಟ್ಟು ಬರುತ್ತಿದ್ದರು. 2011ರ ವರೆಗೂ ಹೀಗೆಯೇ ಮುಂದುವರಿದಿತ್ತು.
ಇನ್ನೊಬ್ಬನ ಜತೆ ಪ್ರೀತಿ
ಪ್ರಿಯಾಂಕ ದಾನೇಶ್ವರಿಗೆ ಗಂಡನ ಜತೆ ಸಂಸಾರ ಮಾಡಲು ಇಷ್ಟವಿರದ ಕಾರಣ ತಾನು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಆದರೆ, ಪೋಷಕರು ಈಗಾಗಲೇ ನಿನಗೆ ಮದುವೆಯಾಗಿದ್ದು, ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಸಂಬಂಧಿಕರು ಬುದ್ಧಿವಾದ ಹೇಳಿ ಮತ್ತೆ ಗಂಡನ ಮನೆಗೆ ಬಿಟ್ಟು ಬರುತ್ತಾರೆ. ಈ ವಿಚಾರ ಗಂಡನ ಮನೆಯವರಿಗೆ ತಿಳಿದು ಬಂದಿರುತ್ತದೆ.
ಇದನ್ನೂ ಓದಿ | ತಮಿಳುನಾಡಿನಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿ ಕೊಚ್ಚಿ ಕೊಲೆ
ನಿಗೂಢವಾಗಿ ನಾಪತ್ತೆ
ಇತ್ತ ಗಂಡನ ಮನೆಯವರು ಪ್ರಿಯಾಂಕಾ ನಾಪತ್ತೆಯಾಗಿದ್ದು, ಅಂಗಡಿಗೆ ಹೋಗಿ ಬರುವನೆಂದು ಹೇಳಿಹೋದವಳು ವಾಪಸ್ ಬಂದಿಲ್ಲ ಎಂದು ಗಂಡನ ಮನೆಯವರು ಆಕೆಯ ತಾಯಿ ಮನೆಗೆ ತಿಳಿಸಿದ್ದಾರೆ. ಈ ಸಂಬಂಧ ಪ್ರಿಯಾಂಕಾ ಪೋಷಕರು ದೂರು ನೀಡಲು ಮುಂದಾದಾಗ ಆಕೆಯ ಗಂಡನ ಮನೆಯವರು ಮರ್ಯಾದೆ ಹೋಗುತ್ತದೆ ಎಂದು ಕಾರಣ ನೀಡಿ ತಡೆದಿದಿದ್ದಾರೆ. ಹೀಗೆ ವರ್ಷಗಳು ಕಳೆದರೂ ಪ್ರಿಯಾಂಕಾ ಸುಳಿವು ಇರಲಿಲ್ಲ. ಸುಮಾರು 11 ವರ್ಷಗಳ ಕಾಲ ತಡೆದರೂ ಪ್ರಿಯಾಂಕಾ ಬಾರದೇ ಇದ್ದಿದ್ದರಿಂದ ಆಕೆ ನಾಪತ್ತೆಯಾಗಿದ್ದಾಳೆ ಎಂದೇ ಬಿಂಬಿಸಲಾಗಿತ್ತು. ಇದಾದ ಮೇಲೂ ಎರಡೂ ಕುಟುಂಬಗಳ ನಡುವೆ ಸಂಬಂಧ ಚೆನ್ನಾಗಿಯೇ ಇತ್ತು. ಯಾವಾಗ 11 ವರ್ಷವಾದರೂ ಮಗಳು ಬರುವದಿಲ್ಲವೋ ಆಗ ಮನೆಯ ಅಕ್ಕಪಕ್ಕದವರ ಮತ್ತು ಸಂಬಂಧಿಗಳ ಒತ್ತಾಸೆ ಮೇರೆಗೆ ಪ್ರಿಯಾಂಕಾ ತಾಯಿ ಮುದ್ದೇಬಿಹಾಳ ಪೊಲೀಸ್ ಠಾಣೆಗೆ (1.06.2021)ರಂದು ದೂರು ನೀಡಿದ್ದಾರೆ.
ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡ ಪೊಲೀಸರು, ಇಂತಹ ಪ್ರಕರಣಗಳಲ್ಲಿ ತನಿಖೆ ನಡೆಸುವಂತೆಯೇ ಕಾರ್ಯನಿರ್ವಹಿಸಿದ್ದಾರೆ. ಆದರೆ, ಎಷ್ಟೇ ಪ್ರಯತ್ನಪಟ್ಟರೂ ಪ್ರಿಯಾಂಕಾ ಪತ್ತೆ ಆಗಿರಲಿಲ್ಲ. ಆದರೆ, ಇದಾಗಿ ಒಂದು ವರ್ಷದ ನಂತರ ಆರೋಪಿಗಳಿಂದಲೇ ಸಿಕ್ಕ ಸುಳಿವಿನ ಮೇರೆಗೆ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಅಸಲಿ ಕಹಾನಿ ಬಯಲು
ಪೊಲೀಸ್ ದೂರು ದಾಖಲಾಗಿ ಒಂದು ವರ್ಷವಾದರೂ ಏನೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಂಡನ ಮನೆಯವರೂ ನಿರಾಳರಾಗಿದ್ದರು. ಒಮ್ಮೆ ಪ್ರಿಯಾಂಕಾ ಗಂಡ ಮತ್ತು ಭಾವ ಆಕೆಯ ಚಿಕ್ಕಪ್ಪನ ಜತೆಗೆ ಮಾತನಾಡುತ್ತಿದ್ದಾಗ ಬಾಯಿ ತಪ್ಪಿ ಆಕೆಯನ್ನು ಕೊಂದಿರುವುದಾಗಿ ಬಾಯಿಬಿಟ್ಟಿದ್ದಾರೆ. ಇದನ್ನು ಕೇಳಿ ಆಘಾತಗೊಂಡ ಪ್ರಿಯಾಂಕಾ ಚಿಕ್ಕಪ್ಪ, ಆಕೆಯ ತಂದೆಗೆ ವಿಷಯ ತಿಳಿಸಿದ್ದಾರೆ. ಹೀಗಾಗಿ ಪ್ರಿಯಾಂಕಾ ತಂದೆ ಪುನಃ ೨೦೨೨ರ ಜುಲೈ ೭ರಂದು ತಮ್ಮ ಮಗಳು ಕೊಲೆಯಾಗಿದ್ದಾಳೆ ಎಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದಾಗ ಇವರ ಸ್ಕೆಚ್ ಬಯಲಾಗಿದೆ. ಬಂಧಿತರ ವಿರುದ್ಧ 120ಬಿ, 302, 201, 506, 34 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರವಾಸದ ನೆಪದಲ್ಲಿ ಕರೆದೊಯ್ದು ಕೊಲೆ
ಪ್ರಿಯಾಂಕಾಳನ್ನು ಪುಸಲಾಯಿಸಿ ದೇವರ ದರ್ಶನಕ್ಕೆ ಎಂದು ಶ್ರೀಶೈಲಕ್ಕೆ ಗಂಡ ಹುಚ್ಚಪ್ಪಗೌಡ ಪಾಟೀಲ್ ಹಾಗೂ ಭಾವ ಸಿದ್ದನಗೌಡ ಪಾಟೀಲ್ 24 ಜುಲೈ 2011ರಂದು ಬಾಡಿಗೆ ಕಾರು ಮಾಡಿಕೊಂಡು ಹೋಗಿರುತ್ತಾರೆ. ದೇವರ ದರ್ಶನ ಪಡೆದು ವಾಪಸ್ ಬರುವಾಗ (25 ಜುಲೈ 2011) ಆಂಧ್ರಪ್ರದೇಶದ ಕೊರಪುರ ಫಾರೆಸ್ಟ್ ಚೆಕ್ ಪೋಸ್ಟ್ ಬಳಿಯ, ಮಂತನಾಲಮ್ ಹಳ್ಳಿಯ ಬ್ರಿಜ್ ಬಳಿ ಆಕೆಯ ಕುತ್ತಿಗೆಗೆ ನೈಲಾನ್ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ದಟ್ಟವಾದ ಕಾಡಿನ ಬ್ರಿಜ್ ಕೆಳಗೆ ಅವಳನ್ನು ವಿವಸ್ತ್ರಗೊಳಿಸಿ ಎಸೆದು ಹೋಗಿರುತ್ತಾರೆ. ಅವಳ ಮೈಮೇಲಿನ ಬಟ್ಟೆಯನ್ನು ನಾರಾಯಣಪುರ ಡ್ಯಾಂನ ಬ್ರಿಜ್‌ನಲ್ಲಿ ಎಸೆದು ಹೋಗಿದ್ದಾಗಿ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ. ಆಕೆ ಇನ್ನೊಬ್ಬನನ್ನು ಪ್ರೀತಿಸುತ್ತಿದ್ದರಿಂದ ವಿಷಯ ತಿಳಿದರೆ ಮರ್ಯಾದೆ ಹೋಗಲಿದೆ ಎಂಬ ಕಾರಣಕ್ಕೆ ಇಂತಹ ಕೃತ್ಯ ಎಸೆಗಿದ್ದು, ಪೋಷಕರು ಮಗಳನ್ನು ಕಳೆದುಕೊಂಡು ನೋವಿನಲ್ಲಿ ಇದ್ದಾರೆ.
ಸಿಬ್ಬಂದಿ ಕಾರ್ಯವೈಖರಿಗೆ ಎಸ್ಪಿ ಮೆಚ್ಚುಗೆ
ಪ್ರಕರಣದಲ್ಲಿ ಕೊಲೆಗೀಡಾದ ಮಹಿಳೆಯ ಮೃತದೇಹ ಪತ್ತೆಯಾಗದಿದ್ದರೂ, ಕೊಲೆ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಪ್ರಶಂಸಿಸಿದ್ದಾರೆ. ಅಲ್ಲದೆ, ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ Honor Killing: ಪಿರಿಯಾಪಟ್ಟಣ ಮರ್ಯಾದೆ ಹತ್ಯೆಗೆ ಸಂಬಧಿಸಿದ ಆಡಿಯೋ ವೈರಲ್