Site icon Vistara News

Murder Case: ದೇವಸ್ಥಾನದಲ್ಲಿ ಹೆಂಡತಿ ಕಣ್ಣೆದುರಲ್ಲೇ ಗಂಡನ ಬರ್ಬರ ಹತ್ಯೆ: ಅಮಾವಾಸ್ಯೆ ದಿನ ಹರಿದ ನೆತ್ತರು

Murder in temple in front of wife

ಬೆಳಗಾವಿ: ಅಮಾವಾಸ್ಯೆ ದಿನವಾದ ಸೋಮವಾರ (ಜುಲೈ 17) ಮುಂಜಾನೆ ಹೆಂಡತಿಯನ್ನು (Man murdered in front of his wife) ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ ಯುವಕನನ್ನು ಪತ್ನಿಯ ಮುಂದೆಯೇ ಬರ್ಬರವಾಗಿ ಕೊಚ್ಚಿ ಕೊಲೆ (Murder Case) ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ (Belagavi news) ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ (Banasiddeshwara temple) ಸೋಮವಾರ ಮುಂಜಾನೆ ಈ ಘೋರ ಕೃತ್ಯ ನಡೆದಿದೆ. ಶಂಕರ್‌ ಸಿದ್ದಪ್ಪ ಜಗಮುತ್ತಿ ಎಂಬ 25 ವರ್ಷದ ಯುವಕನನ್ನು ಕ್ರೂರಿಯೊಬ್ಬ ಆತನ ಹೆಂಡತಿಯ ಮುಂದೆಯೇ ಕೊಚ್ಚಿ ಕೊಂದಿದ್ದಾನೆ.

ಶಂಕರ್‌ ಸಿದ್ದಪ್ಪ ಜಗಮುತ್ತಿ (25) ಇದೇ ಊರಿನ ನಿವಾಸಿಯಾಗಿದ್ದು, ಬೆಳಗ್ಗೆ ಅಮಾವಾಸ್ಯೆ (Amavasye pooje) ದಿನದ ಪೂಜೆ ಮಾಡಿಸಲೆಂದು ಊರಿನ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಸೋಮವಾರ ಭೀಮನ ಅಮಾವಾಸ್ಯೆಯಾಗಿದ್ದು, ಪತ್ನಿ ಗಂಡನ ಪೂಜೆ ಮಾಡುವ ಕ್ರಮ ಕೆಲವು ಕಡೆ ಇದೆ. ಗಂಡ ಹೆಂಡಿರು ಜತೆಯಾಗಿ ದೇವಸ್ಥಾನಕ್ಕೆ ಹೋದರೂ ಫಲವಿದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಶಂಕರ್‌ ಸಿದ್ದಪ್ಪ ತನ್ನ ಪತ್ನಿ ಪ್ರಿಯಾಂಕಾ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ದೇವಸ್ಥಾನಕ್ಕೆ ಬಂದಿದ್ದರು.

ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನ

ಹೆಂಡತಿಯ ಕಣ್ಣ ಮುಂದೆಯೇ ನಡೆಯಿತು ಭೀಕರ ಕೊಲೆ

ಈ ರೀತಿ ಹೆಂಡತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದು ಬೈಕ್‌ ನಿಲ್ಲಿಸಲೆಂದು ಹೋದಾಗ ದುಷ್ಕರ್ಮಿ ಆತನ ಮೇಲೆ ಭಯಾನಕವಾಗಿ ಹಲ್ಲೆ ಮಾಡಿದ್ದಾನೆ. ಇದೆಲ್ಲವೂ ಆಕೆಯ ಕಣ್ಣ ಮುಂದೆಯೇ ನಡೆದಿದೆ.

ಇವತ್ತು ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಎದ್ದು ನಾನು ಮತ್ತು ಗಂಡ ಬೈಕ್‌ನಲ್ಲಿ ದೇವಸ್ಥಾನಕ್ಕೆ ಬಂದಿದ್ದೆವು. ಅವರು ನನ್ನನ್ನು ದೇವಸ್ಥಾನದ ಮುಂದೆ ಇಳಿಸಿದರು. ನಂತರ ಬೈಕ್‌ ಇಡಲೆಂದು ಪಕ್ಕಕ್ಕೆ ಹೋದರು. ಅವರು ಬೈಕ್‌ ಇಟ್ಟು ಬರುತ್ತಾರೆ ಎಂದು ನೋಡುತ್ತಿದ್ದೆ. ಆದರೆ, ಅಷ್ಟು ಹೊತ್ತಿಗೆ ಯಾರೋ ಒಬ್ಬ ಅವರ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆ ಮಾಡುತ್ತಿರುವುದನ್ನು ನೋಡಿದ ಕೂಡಲೇ ನಾನು ಓಡಿ ಹೋಗಿ ಅವರನ್ನು ಹಿಡಿದುಕೊಳ್ಳುವಷ್ಟರಲ್ಲಿ ಅವರು ಕೆಳಗೆ ಉರುಳಿಬಿದ್ದಿದ್ದರು ಎಂದು ಪತ್ನಿ ಪ್ರಿಯಾಂಕಾ ಘಟನೆಯನ್ನು ವಿವರಿಸಿದ್ದರು.

ಕೊಲೆಯಾದ ಶಂಕರನ ಪತ್ನಿ ಪ್ರಿಯಾಂಕಾ

ಒಬ್ಬನೇ ವ್ಯಕ್ತಿ ಲಾಂಗ್‌ನಿಂದ ಹಲ್ಲೆ ಮಾಡಿ ಓಡಿ ಹೋಗಿದ್ದಾನೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ತಿಳಿಸಿದ್ದಾರೆ.

ಮದುವೆಯಾಗಿ ನಾಲ್ಕು ತಿಂಗಳು, ನಿನ್ನೆಯಷ್ಟೇ ಪತ್ನಿಯ ಬರ್ತ್‌ ಡೇ!

ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ

ಶಂಕರ್‌ ಮತ್ತು ಪ್ರಿಯಾಂಕಾ ಮದುವೆಯಾಗಿ ಜುಲೈ 19ಕ್ಕೆ ನಾಲ್ಕು ತಿಂಗಳಾಗುತ್ತದೆ. ಜುಲೈ 16ರಂದು ಪ್ರಿಯಾಂಕಾ ಹುಟ್ಟುಹಬ್ಬ ಇತ್ತು. ಭಾನುವಾರ ರಾತ್ರಿ ಮನೆಯಲ್ಲಿ ಕುಟುಂಬಿಕರು ಸೇರಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ರಾತ್ರಿ ಹುಟ್ಟುಹಬ್ಬ ಆಚರಿಸಿದ ಬಳಿಕ ಬೆಳಗ್ಗೆ ಬೇಗನೆ ಎದ್ದು ದೇವರ ದರ್ಶನಕ್ಕೆ ಕರೆದುಕೊಂಡು ಬಂದಿದ್ದರು ಶಂಕರ್‌. ʻʻನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನನ್ನು ತುಂಬ ಪ್ರೀತಿ ಮಾಡುತ್ತಿದ್ದಾರೆ. ಅವರ ಮೇಲೆ ಯಾರಿಗೆ ದ್ವೇಷವಿತ್ತು ಎಂದು ಗೊತ್ತಿಲ್ಲʼʼ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದನ್ನೂ ಓದಿ: Attempt Murder Case : ಹೆತ್ತವರಿಂದ ದೂರವಿಟ್ಟು ಡಿವೋರ್ಸ್‌ ಕೊಡದ ಪತ್ನಿಯ ಆ್ಯಕ್ಸಿಡೆಂಟ್‌!

Exit mobile version