ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಬರ್ತ್ ಡೇ ನೆಪದಲ್ಲಿ ಕರೆಸಿಕೊಂಡು ಕೇಕ್ ಕತ್ತರಿಸಿದ ಕೈಯಲ್ಲೇ ಕೊರಳು ಕೊಯ್ದು ಕೊಲೆ ಮಾಡಿದ ಭಯಾನಕ ಘಟನೆಯೊಂದು ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ (24) ಅವರೇ ಕೊಲೆಯಾದ ಯುವತಿ. ಪ್ರಶಾಂತ್ ಎಂಬ ಆಕೆಯ ಪ್ರೇಮಿಯೇ ಈ ಕೊಲೆಗಾರ.
ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದವರು. ದೂರದಲ್ಲಿ ಸಂಬಂಧಿಕರು. ಕಳೆದ ಆರು ವರ್ಷಗಳಿಂದ ಅವರು ಪ್ರೀತಿಸುತ್ತಿದ್ದರು. ಕಳೆದ ಮಂಗಳವಾರ ನವ್ಯಳ ಹುಟ್ಟು ಹಬ್ಬ ಇತ್ತು. ಅಂದು ಬ್ಯುಸಿ ಇದ್ದೇನೆಂದು ಹೇಳಿ ಆಕೆಯನ್ನು ಭೇಟಿಯಾಗುವುದನ್ನು ತಪ್ಪಿಸಿಕೊಂಡಿದ್ದ ಪ್ರಶಾಂತ್ ಶುಕ್ರವಾರ ರಾತ್ರಿ ಹುಟ್ಟುಹಬ್ಬದ ಸೆಲೆಬ್ರೇಷನ್‌ಗೆ ಸಿದ್ಧತೆ ಮಾಡಿಕೊಂಡಿದ್ದ.
ಅದರಂತೆ ಆಕೆಯನ್ನು ಕರೆಸಿಕೊಂಡಿದ್ದ. ಆಕೆಯ ಹೆಸರು ಬರೆಸಿ ಕೇಕ್ ಕೂಡಾ ತಂದಿಟ್ಟಿದ್ದ. ಪ್ರಿಯಕರ ತನಗಾಗಿ ಬರ್ತ್ ಡೇ ಪಾರ್ಟಿ ಇಟ್ಟುಕೊಂಡಿದ್ದಾನೆ ಎಂದು ಖುಷಿಯಲ್ಲಿ ಆಕೆ ಅಲ್ಲಿಗೆ ಹೋಗಿದ್ದಳು.
ಅದರಂತೆ ಖುಷಿಯಿಂದ ಆಕೆಯನ್ನು ಎದುರುಗೊಂಡ ಆತ ಕೇಕ್ ಕತ್ತರಿಸಿ ಆಕೆಗೆ ತಿನ್ನಿಸಿದ್ದ. ಅದಕ್ಕಿಂತಲೂ ಮೊದಲು ಇಡೀ ಕೋಣೆಯನ್ನು ಅವನು ಹುಟ್ಟುಹಬ್ಬಕ್ಕಾಗಿ ಅಲಂಕರಿಸಿದ್ದ. ಆಕೆ ಸಂಭ್ರಮದಿಂದ ಕೇಕ್ ತಿನ್ನುತ್ತಿದ್ದಂತೆಯೇ ಪ್ರಶಾಂತ್‌ನೊಳಗಿನ ಕ್ರೂರಿ ಎದ್ದು ನಿಂತಿದ್ದ. ಮೊದಲೇ ಪ್ಲ್ಯಾನ್ ಮಾಡಿದ್ದಂತೆ ಆತ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಕೇಕ್ ಕತ್ತರಿಸಿದ ಕೈಯಲ್ಲೇ ಆಕೆಯನ್ನು ಕೊರಳನ್ನು ಕತ್ತರಿಸಿದ ದುಷ್ಟ ಆಕೆಯನ್ನು ರಕ್ತದ ಮಡುವಿನಲ್ಲಿ ಬಿಟ್ಟು ಹೋಗಿದ್ದಾನೆ.
ಆಕೆಯ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಆಕೆ ಶವವಾಗಿ ಬಿದ್ದಿದ್ದಳು. ಇದೀಗ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆರೋಪಿ ಪ್ರಶಾಂತ್‌ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಶಾಂತ್ ಯಾಕೆ ನವ್ಯಳನ್ನು ಕೊಲೆ ಮಾಡಿದ? ಅವನಿಗೆ ಏನಾದರೂ ಸಂಶಯವಿತ್ತಾ? ಅವರ ನಡುವೆ ಜಗಳ ಆಗಿತ್ತಾ ಎನ್ನುವುದು ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಾಗಿದೆ.
ಶರಾವತಿ ಸೇತುವೆಯಿಂದ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ
ಹೊನ್ನಾವರ: ಪಟ್ಟಣದ ಶರಾವತಿ ಸೇತುವೆ ಮೇಲಿಂದ ಇಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ರಾತ್ರಿ ವೇಳೆ ಹಾಗೂ ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಇಬ್ಬರೂ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ. ಇಬ್ಬರು ಪ್ರೇಮಿಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಯುವತಿಯ ಶವವು ಶರಾವತಿ ನದಿಗೆ ಹೊಂದಿಕೊಂಡಿರುವ ಟೊಂಕ ಸಮೀಪ ಸಿಕ್ಕಿದ್ದು, ಇನ್ನೊಬ್ಬರ ಪತ್ತೆ ಕಾರ್ಯ ಮುಂದುವರೆದಿದೆ. ಸೇತುವೆ ಪಕ್ಕ ಇಬ್ಬರ ಚಪ್ಪಲಿ ಹಾಗೂ ಬ್ಯಾಗ್, ಬಸ್ ಪ್ರಯಾಣದ ಟಿಕೇಟ್ ಪತ್ತೆ ಆಗಿವೆ. ಇವರ ಗುರುತು ಮತ್ತಿತರ ವಿವರಗಳು ತಿಳಿದುಬರಬೇಕಿವೆ.
ಸೇತುವೆ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಇನ್ನೊಂದು ಶವದ ಪತ್ತೆ ನಡೆಯುತ್ತಿದೆ. ಸ್ಥಳಕ್ಕೆ ಹೊನ್ನಾವರ ಸಿ.ಪಿ.ಐ. ಮಂಜುನಾಥ ಇ.ಓ, ಪಿಎಸೈ ಪ್ರವೀಣಕುಮಾರ, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ : Murder Case: ಹಣಕಾಸಿನ ವಿಚಾರಕ್ಕೆ ಗಲಾಟೆ; ಮಾವನಿಂದಲೇ ಅಳಿಯನ ಭೀಕರ ಕೊಲೆ