Site icon Vistara News

Murder Case : ಕುಡಿದು ತಾಯಿಗೆ ಥಳಿಸಿದ ಮಗನನ್ನು ಬಾರಿಗೇ ಹೋಗಿ ಪೆಟ್ರೋಲ್‌ ಹಾಕಿ ಸುಟ್ಟ ಅಪ್ಪ

Murder at doddaballapura

ದೊಡ್ಡಬಳ್ಳಾಪುರ: ಕಣ್ಣ ಮುಂದೆ ಬೆಳೆದ ಮಕ್ಕಳೇ (Drunkard children) ಕುಡಿದು ಬಂದು ಮನೆಯಲ್ಲಿ ನಿತ್ಯ ಗಲಾಟೆ ಮಾಡುತ್ತಿದ್ದರೆ ಹೆತ್ತವರಿಗೆ ಅದೆಷ್ಟು ಸಂಕಟವಾಗಲಿಕ್ಕಿಲ್ಲ ಹೇಳಿ? ಇವತ್ತೂ ಕುಡಿದು ಬಂದರೆ ಕತ್ತಿಯಿಂದ ಕಡಿದು ಕೊಲ್ಲುತ್ತೇನೆ, (Murder Case) ಹುಟ್ಟಿಸಿದ್ದೂ ನಾನೇ, ಕೊಂದಿದ್ದೂ ನಾನೇ ಅಂತ ಆಗಿ ಹೋಗಲಿ, ಜೈಲಿಗಾದರೂ ಹೋಗಲು ರೆಡಿ ಇದ್ದೇನೆ, ನಿನ್ನ ಕಾಟ ಒಂದು ತಪ್ಪಿದರೆ ಸಾಕು ಎಂದು ಅದೆಷ್ಟೋ ತಂದೆ/ತಾಯಿ ಹೇಳುವುದನ್ನು (Parents Concern) ನಾವು ಕೇಳಿಯೇ ಇದ್ದೇವೆ. ಹಾಗಂತ ಹೇಳಿದವರೆಲ್ಲ ಹೀಗೆ ಮಾಡುತ್ತಾರೆ ಎಂದಲ್ಲ. ಅವರು ಕೊಡುವ ಕಷ್ಟ, ಮಾಡುವ ಅಪಮಾನ, ನೋವಿನಿಂದ, ಸಂಕಟದಿಂದ ಇಂಥ ಮಾತುಗಳನ್ನು ಹೇಳುತ್ತಾರೆ.

ಆದರೆ, ಕೆಲವೊಬ್ಬರು ಮಕ್ಕಳ ಈ ಕಾಟ ತಾಳಲಾಗದೆ ಹತಾಶರಾಗಿ ಹೇಳಿದಂತೆ ಮಾಡುವುದೂ ಇದೆ. ದೊಡ್ಡಬಳ್ಳಾಪುರದ (Doddaballapura News) ಈ ವ್ಯಕ್ತಿಯೊಬ್ಬರು ಆ ಸಾಲಿಗೆ ಸೇರುತ್ತಾರೆ. ಅವರು ತಮ್ಮ ಕುಡುಕ ಮಗನಿಗೆ (Drunkard Son) ಪೆಟ್ರೋಲ್‌ ಹಾಕಿ ಸುಟ್ಟು ಕೊಂದೇ (murder by pouring petrol) ಬಿಟ್ಟಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದಾರೆ ಜಯರಾಮಯ್ಯ (58). ಅವರ ಮಗ ಆದರ್ಶ. ವಯಸ್ಸು 28 ಆಗಿದ್ದರೂ ಯಾವುದೇ ಜವಾಬ್ದಾರಿ ಇಲ್ಲ. ದಿನ ನಿತ್ಯವೂ ಕುಡಿತವೇ ಸಂಗಾತಿ. ಕುಡಿಯುವುದಷ್ಟೇ ಅಲ್ಲ, ಕಂಡ ಕಂಡವರ ಜತೆ ಜಗಳ ಮಾಡುವುದು, ಹೊಡೆದಾಡುವುದು ನಡೆದಿತ್ತು. ಸಾಲದ್ದಕ್ಕೆ ಮನೆಗೆ ಬಂದರೂ ನೆಮ್ಮದಿ ಇಲ್ಲ. ಮನೆಯಲ್ಲಿ ನಿತ್ಯವೂ ಗಲಾಟೆ ಮಾಡುತ್ತಿದ್ದ.

ತಂದೆಯನ್ನು ಕಂಡರೆ ಮೊದ ಮೊದಲು ಸ್ವಲ್ಪ ಹೆದರಿಕೆ ಇತ್ತು. ಅವರ ಎದುರಿನಲ್ಲಿ ಹೆಚ್ಚು ಬಾಲ ಬಿಚ್ಚುತ್ತಿರಲಿಲ್ಲ. ಆದರೆ, ಇತ್ತೀಚೆಗೆ ತಂದೆಯನ್ನೂ ಕ್ಯಾರೇ ಅನ್ನುತ್ತಿರಲಿಲ್ಲ. ಸಾಕಷ್ಟು ಬುದ್ಧಿಮಾತು ಹೇಳಿದರೂ ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. ತಲೆಗೆ ಹಾಕಿಕೊಂಡವನಂತೆ ನಟಿಸಿದರೂ ಸಂಜೆ ಕುಡಿದ ಬಳಿಕ ಎಲ್ಲವೂ ವಾಪಸ್‌ ಮೊದಲಿನ ಸ್ಥಿತಿಗೇ ಬಂದಿರುತ್ತಿತ್ತು.

ಹಣ ಕೊಟ್ಟಿಲ್ಲವೆಂದು ತಾಯಿಗೆ ಥಳಿಸಿದ್ದ

ಕುಡಿತಕ್ಕೆ ಹಣ ಹೊಂದಿಸಲು ಆಗಾಗ ತಾಯಿಯ ಬಳಿ ಗೋಗರೆಯುತ್ತಿದ್ದ. ತಾಯಿ ಅವನ ಕಿರಿಕಿರಿ ತಾಳಲಾರದೆ ಕೆಲವೊಮ್ಮೆ ಹಣ ಕೊಡುತ್ತಿದ್ದರು. ಆದರೆ, ಅವನಿಗೆ ಹಣ ಹೊಂದಿಸಲು ಅವರ ಕೈಯಲ್ಲಾದರೂ ಹಣ ಬೇಕಲ್ಲ. ಈ ನಡುವೆ, ಜಯರಾಮಯ್ಯ ಅವರು ಕೂಡಾ ಮಗನಿಗೆ ಹಣ ಕೊಡಬೇಡ ಎಂದಿದ್ದರು.

ಈ ನಡುವೆ, ಕೆಲವು ದಿನದ ಹಿಂದೆ ತಾಯಿ ಬಳಿ ಹೋಗಿ ಮಗ ಹಣ ಕೇಳಿದ್ದ. ಮಗ ಕುಡಿದೇ ಹಾಳಾಗುತ್ತಾನೆ ಎಂಬ ಬೇಸರ ಮತ್ತು ಹಣ ಕೊಡಬೇಡಿ ಎಂಬ ಮಾತು, ಜತೆಗೆ ಕೈಯಲ್ಲಿ ಹಣವೂ ಇಲ್ಲದ ಎಲ್ಲ ಕಾರಣ ಸೇರಿ ಅವರು ಹಣ ಕೊಟ್ಟಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆದರ್ಶ ತಾಯಿಗೇ ಥಳಿಸಿದ್ದ.

ಇದು ಜಯರಾಮಯ್ಯ ಅವರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಹೆಂಡತಿಯನ್ನು ಮನ ಬಂದಂತೆ ಥಳಿಸಿದ ಮಗನ ಕ್ರೌರ್ಯಕ್ಕೆ ಒಂದು ಪಾಠ ಕಲಿಸಲೇಬೇಕು ಎಂದು ಹೊರಟಿದ್ದಾರೆ. ತಾಯಿಗೆ ಥಳಿಸಿ ಹೋದ ಮಗ ಎಲ್ಲಿದ್ದಾನೆ ಎಂದು ಹುಡುಕಿಕೊಂಡು ಅವನು ಸಾಮಾನ್ಯವಾಗಿ ಕುಡಿಯುವ ಬಾರ್‌ಗೇ ಹೋಗಿದ್ದಾನೆ.

ಅಲ್ಲಿ ಮಗನನ್ನು ಕರೆದು ಎರಡು ಚೆನ್ನಾಗಿ ಬಿಗಿದಿದ್ದಾನೆ. ನಿನ್ನ ತಾಯಿಯನ್ನೇ ಹೊಡೆಯುತ್ತೀಯಾ, ನನ್ನ ಹೆಂಡತಿಯ ಮೇಲೆ ಕೈ ಮಾಡುತ್ತೀಯಾ ಅಂತ ಸಿಟ್ಟಿನಿಂದ ಕೇಳುತ್ತಾ ತನ್ನ ಆಕ್ರೋಶವನ್ನೆಲ್ಲ ಹೊರಹಾಕಿದ್ದಾನೆ. ಅಪ್ಪನ ಆಕ್ರೋಶ ಮತ್ತು ನೋವಿನ ಹೊಡೆತಗಳು ಎಷ್ಟೊಂದು ತೀವ್ರವಾಗಿತ್ತು ಎಂದರೆ ಕುಡುಕ ಮಗ ಅಲ್ಲೇ ಸತ್ತು ಬಿದ್ದಿದ್ದಾನೆ.

ಇದನ್ನೂ ಓದಿ: Triple Murder: ಪತ್ನಿಯ ಅಕ್ರಮ ಸಂಬಂಧ, ಪತ್ನಿ ಸೇರಿ ಇಬ್ಬರು ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ತಂದೆ

ಮಗ ಸತ್ತು ಬಿದ್ದರೂ ಅಪ್ಪನ ಸಿಟ್ಟು ಇನ್ನೂ ಇಳಿದಿಲ್ಲ. ನನ್ನ ಹೆಂಡತಿಗೆ ಹೊಡೆದ ನೀನು ಜೀವಂತ ಉಳಿಯುವುದಲ್ಲ, ಸುಟ್ಟು ಭಸ್ಮವಾಗಬೇಕು ಎಂದು ಹೇಳಿದ ಜಯರಾಮಯ್ಯ ಅವರು ಮಗ ಆದರ್ಶನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಬಿಟ್ಟಿದ್ದಾರೆ. ಮಗನ ಶವ ಧಗಧಗಿಸುವುದನ್ನು ನೋಡಿ ಒಂದು ರೀತಿಯ ವಿಕ್ಷಿಪ್ತ ಸುಖವನ್ನು ಅನುಭವಿಸಿದ ಜಯರಾಮಯ್ಯ ಅವರಿಗೆ ಬಳಿಕ ಜ್ಞಾನೋದಯವಾಗಿದೆ.

ಈ ಘಟನೆಗೆ ಸಂಬಂಧಿಸಿ ದೊಡ್ಡಬೆಳವಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಥ ದುಷ್ಟ ಮಕ್ಕಳಿಗೆ ಇಂಥಹುದೇ ಶಿಕ್ಷೆ ಆಗಬೇಕು ಎಂದು ಜನರು ಮಾತನಾಡಿಕೊಂಡರೂ ಕಾನೂನು ಪ್ರಕಾರ ಅವರು ಮಾಡಿರುವುದು ಅಪರಾಧವಾಗಿರುವುದರಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Exit mobile version