ಕಲಬುರಗಿ: ತವರು ಮನೆ ಸೇರಿದ್ದಾಳೆ ಎಂಬ ಕಾರಣಕ್ಕೆ ಪತ್ನಿಯನ್ನು ಗುಂಡಿಕ್ಕಿ ಕೊಂದು ತಲೆ ಮರೆಸಿಕೊಂಡಿದ್ದ ಪಾಪಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ್ ಕೆ ಗ್ರಾಮದಲ್ಲಿ ಬಸವರಾಜ್ ಎಂಬಾತ ಪತ್ನಿಗೆ ಗುಂಡು ಹಾರಿಸಿ (Shoot out) ಕೊಂದು ಹಾಕಿದ್ದ ಪ್ರಕರಣ (Murder case) ಎರಡು ದಿನಗಳ ಹಿಂದೆ ನಡೆದಿತ್ತು. ಇದಾದ ಬಳಿಕ ತಲೆ ಮರೆಸಿಕೊಂಡಿದ್ದ ಪತಿ ಬಸವರಾಜ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಹನಮವ್ವ (36) ಕೊಲೆಯಾದ ದುರ್ದೈವಿಯಾಗಿದ್ದರು. ಪತ್ನಿಯನ್ನು ಬಸವರಾಜ್ ಎಂಬಾತ ಗುಂಡು ಹಾರಿಸಿದ ಪತಿಯಾಗಿದ್ದಾನೆ. ಹೆಂಡತಿಯನ್ಮು ಹತ್ಯೆಗೈದ ಬಳಿಕ ತಲೆ ಮರೆಸಿಕೊಂಡಿದ್ದ ಬಸವರಾಜ್, ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಆದರೆ, ಆರೋಪಿ ಬಂಧನಕ್ಕೆ ಚಿತ್ತಾಪುರ ಪೊಲೀಸರು ಬಲೆ ಬೀಸಿದ್ದರು. ಇನ್ನು ತಾನು ಇಲ್ಲಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಅರಿತ ಬಸವರಾಜ್, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ.
ಇದನ್ನೂ ಓದಿ: Ganesha Chaturthi 2023 : ಕೇರಳ, ಆಂಧ್ರಕ್ಕೆ ಹೋಗಲು ಸಿದ್ಧವಾಗಿದ್ದ ಪಿಒಪಿ ಗಣೇಶ ಮೂರ್ತಿ ಸೀಜ್!
ಅದರಂತೆ ಪುನಃ ತನ್ನ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ತಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
ಏನಿದು ಘಟನೆ?
ಹನಮವ್ವ ಹಾಗೂ ಬಸವರಾಜ್ ಮದುವೆ ಆದಾಗಿಂದಲೂ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಗಂಡನ ಕಿರುಕುಳಕ್ಕೆ ಬೇಸತ್ತ ಹನಮವ್ವ ಕೊನೆಗೆ ತವರು ಮನೆ ಸೇರಿದ್ದಳು. ಆದರೆ, ಆಕೆಗೆ ಮನೆಗೆ ಬರುವಂತೆ ಬಸವರಾಜ್ ಎಷ್ಟೇ ಹೇಳಿದರೂ ಹನಮವ್ವ ಮಾತ್ರ ಒಪ್ಪಲಿಲ್ಲ. ಕಾರಣ, ಆತನ ಕಿರುಕುಳಕ್ಕೆ ರೋಸಿ ಹೋಗಿದ್ದಳು. ತಾನು ಕರೆದರೂ ಬಾರದೇ ಇರುವುದರಿಂದ ಸಿಟ್ಟಿಗೆದ್ದ ಬಸವರಾಜ್ ಬಂದೂಕು ತೆಗೆದುಕೊಂಡು ಹೋಗಿ ಆಕೆ ಮೇಲೆ ಗುಂಡಿನ ದಾಳಿ ನಡೆಸಿ ಸಾಯಿಸಿದ್ದಾನೆ. ಬಳಿಕ ಅಲ್ಲಿಂದ ಕಣ್ಮರೆಯಾಗಿದ್ದ. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು, ಆತನ ಪತ್ತೆಗೆ ಬಲೆ ಬೀಸಿದ್ದರು. ಈಗ ನೇಣು ಬಿಗಿದ ಸ್ಥಿತಿಯಲ್ಲಿ ಬಸವರಾಜ್ ಮೃತದೇಹ ಪತ್ತೆಯಾಗಿದೆ.
ಸಾಲಬಾಧೆಯಿಂದ ಫೋಟೊಗ್ರಾಫರ್ ಆತ್ಮಹತ್ಯೆ
ಯಾದಗಿರಿ ನಗರದ ಹಳೆ ಬಸ್ ನಿಲ್ದಾಣ ಮುಂಭಾಗದ ಆಶ್ರಯ ಲಾಡ್ಜ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೋಟೊಗ್ರಾಫರ್ ರವೀಂದ್ರ (48) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ರಾತ್ರಿ ಸಾವಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ರವೀಂದ್ರ ಚಕ್ರಕಟ್ಟಾ ನಿವಾಸಿಯಾಗಿದ್ದಾರೆ. ಇವರು ಫೋಟೊ ಸ್ಟುಡಿಯೋವನ್ನು (Photo Studio) ಹೊಂದಿದ್ದರು. ಆದರೆ, ಈ ನಡುವೆ ವ್ಯವಹಾರದಲ್ಲಿ ನಷ್ಟವಾಗಿದ್ದಲ್ಲದೆ, ಕೈತುಂಬಾ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲಗಾರರ ಕಾಟ ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.
ಟಿಲ್ಲರ್‌ಗೆ ಕಾರು ಡಿಕ್ಕಿ; ಯುವಕ ಸಾವು
ಮಂಡ್ಯ ನಗರದ ಹೊರ ವಲಯದ ಚಿಕ್ಕ ಮಂಡ್ಯ ಬಳಿಯ ಸರ್ವಿಸ್ ರಸ್ತೆಯಲ್ಲಿ ಟಿಲ್ಲರ್‌ಗೆ ಕಾರು ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಚಿಕ್ಕಮಂಡ್ಯದ ಸುದರ್ಶನ್ (19) ಮೃತ ಯುವಕ ಎಂದು ತಿಳಿದು ಬಂದಿದೆ. ಭತ್ತದ ನಾಟಿ ಮುಗಿಸಿ ವಾಪಸಾಗುವ ವೇಳೆ ಘಟನೆ ನಡೆದಿದೆ.
ಇದನ್ನೂ ಓದಿ: Wild Animal : ಗುಂಡ್ಲುಪೇಟೆಯಲ್ಲಿ ಕಾಣಿಸಿದ ಚಿರತೆ ಮರಿಗಳು; ಸತ್ತರೆ ಜೀವ ಕೊಡುತ್ತೀರಾ ಎಂದ ರೈತರು!
ಟಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದು ಯುವಕನ ಎದೆಗೆ ಹ್ಯಾಂಡಲ್ ಚುಚ್ಚಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಕಾರು ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದೂರು ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ ಡಿಕ್ಕಿ ಹೊಡೆದ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.