ವಿಜಯಪುರ: ತಾಲೂಕಿನ ಅರಕೇರಿ ಗ್ರಾಮದ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಲ್ಲಿಯೇ ಬರ್ಬರವಾಗಿ ಹತ್ಯೆಗೈದು (Murder Case) ಪರಾರಿಯಾಗಿದ್ದಾರೆ.
55 ವರ್ಷದ ಪರಸಪ್ಪ ಗುಂಡಕರಜಗಿ ಹತ್ಯೆಯಾಗಿರುವ ದುರ್ದೈವಿ. ಇವರು ಬಸವನಬಾಗೇಬಾಡಿ ತಾಲೂಕಿನ ಕಾಮನಕೇರಿ ನಿವಾಸಿಯಾಗಿದ್ದಾರೆ. ಅರಕೇರಿ ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ.
ಪರಸಪ್ಪ ಅವರು ಕೆಲವು ದಿನಗಳಿಂದ ಅಮೋಘಸಿದ್ದ ಮಂದಿರದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಇದ್ದರು. ಇವರಿಗೆ ಮೇಲ್ನೋಟಕ್ಕೆ ಯಾರ ಮೇಲೂ ದ್ವೇಷ ಇರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಏಕಾಏಕಿ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದರ ಹಿಂದೆ ಯಾರಿದ್ದಾರೆ? ಯಾವ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂಬ ಬಗ್ಗೆ ವಿಚಾರ ತಿಳಿದುಬಂದಿಲ್ಲ.
ಇದನ್ನೂ ಓದಿ: ಎಸ್.ಎಸ್. ಮಲ್ಲಿಕಾರ್ಜುನ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ ಕಾಡು ಪ್ರಾಣಿಗಳಲ್ಲಿ ಎರಡು ಸಾವು
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಜನರ ಬಳಿ ವಿಚಾರಣೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಚಹರೆ ಪತ್ತೆಗೆ ಮುಂದಾಗಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.