Site icon Vistara News

Murder Case : ದೀಪಿಕಾ ಕೊಲೆ ಕೇಸ್‌; ದುಡ್ಡು ಕೊಟ್ಟರೂ ಪೊಲೀಸರು ಕೆಲ್ಸ ಮಾಡಲಿಲ್ಲ!

ಮಂಡ್ಯ: ನಾಪತ್ತೆಯಾಗಿದ್ದ ಅತಿಥಿ ಉಪನ್ಯಾಸಕಿ ದೀಪಿಕಾ ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ದೇವಾಲಯ ಇರುವ ಬೆಟ್ಟದ ತಪ್ಪಲಿನಲ್ಲಿ ಶವ ಪತ್ತೆ (Murder Case) ಆಗಿತ್ತು. ಇದೀಗ ಪೊಲೀಸರ ತನಿಖೆ ಕುರಿತು ಮೃತಳ ಕುಟುಂಬಸ್ಥರು ಗಂಭೀರ ಆರೋಪವನ್ನು ಮಾಡಿದ್ದಾರೆ.

ದೀಪಿಕಾ ನಾಪತ್ತೆ ವಿಷಯ ತಿಳಿದಾಗಲೇ ಪೊಲೀಸರು ಅಕ್ಕ-ಪಕ್ಕ ಹುಡುಕಾಟ ನಡೆಸಿದ್ದರೆ ಜೀವಂತವಾಗಿ ನೋಡಬಹುದಿತ್ತು. ಸರ್ಕಲ್‌ ಇನ್‌ಸ್ಪೆಕ್ಟರ್‌ಗೆ 15 ಸಾವಿರ ರೂ. ಹಣ ಕೊಟ್ಟರು, ನಿಯತ್ತಾಗಿ ಕೆಲಸ ಮಾಡಲಿಲ್ಲ. ಭಾನುವಾರ ಅಂತೇಳಿ ತನಿಖೆ ವಿಳಂಬ ಮಾಡಿದರು. ಬಳಿಕ ನಾವೇ ಖುದ್ದು ಬೆಟ್ಟದ ತಪ್ಪಲಿನಲ್ಲಿ ಹುಡುಕಾಡಿದಾಗ ದೀಪಿಕಾಳ ಮೃತದೇಹವು ಪತ್ತೆಯಾಗಿತ್ತು. ಎಲ್ಲವನ್ನೂ ನಾವೇ ಮಾಡುವುದಾದರೆ ಆರಕ್ಷಕರು ಇರುವುದಾದರೂ ಯಾಕೆ? ಕೂಡಲೇ ಅವರನ್ನು ಸಸ್ಪೆಂಡ್‌ ಮಾಡಬೇಕೆಂದು ದೀಪಿಕಾಳ ಅಕ್ಕ ಕಿಡಿಕಾರಿದರು.

ಬೆಟ್ಟದ ಕೆಳಗೆ ಯುವಕನೊಬ್ಬ ಯುವತಿಗೆ ಹೊಡೆದು ಬಡಿದು ಮಾಡುತ್ತಿದ್ದಾರೆ ಎಂದು ಪ್ರವಾಸಿಗರು ವಿಡಿಯೊ ಮಾಡಿ ಪೊಲೀಸರಿಗೆ ಶನಿವಾರವೇ ಕಳಿಸಿದ್ದಾರೆ. ಆಗಲೇ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದ್ದರೆ, ನಡೆಯಬಹುದಾದ ಅನಾಹುತವನ್ನು ತಪ್ಪಿಸಬಹುದಿತ್ತು. ಆದರೆ ಬೇಜವಬ್ದಾರಿ ತೋರಿದರು ಎಂದು ಆರೋಪಿಸಿದ್ದಾರೆ.

ದೀಪಿಕಾಳಿಗೆ ಹಂತಕನ ಲಾಸ್ಟ್‌ ಕಾಲ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ 22 ವರ್ಷದ ನಿತಿನ್‌ ಗೌಡ ಮೇಲೆ ದೀಪಿಕಾ ಪತಿ ಲೋಕೇಶ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಯುವಕ ದೀಪಿಕಾಳನ್ನು ಅಕ್ಕ ಎಂದು ಕರೆಯುತ್ತಿದ್ದನಂತೆ. ದೀಪಿಕಾಳ ಮೃತದೇಹವು ಸಿಕ್ಕಿದ ದಿನದಿಂದ ಆತ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ದೀಪಿಕಾಳಿಗೆ ನಿತಿನ್‌ ನಂಬರ್‌ನಿಂದಲೇ ಲಾಸ್ಟ್‌ ಫೋನ್‌ ಕಾಲ್‌ ಬಂದಿದೆ. ಹೀಗಾಗಿ ಆತನೇ ಕೊಲೆ ಮಾಡಿರಬಹುದೆಂದು ಶಂಕಿಸಿದ್ದಾರೆ. ನಿತಿನ್‌ ಅವರ ತಂದೆಗೆ ಮೆಸೇಜ್‌ ಮಾಡಿದ್ದಾನೆ. ನಾನು ತಪ್ಪು ಮಾಡಿದ್ದೀನಿ, ಕ್ಷಮಿಸಿ ನನ್ನನ್ನು ಹುಡುಕಬೇಡಿ, ಅಕ್ಕಳಿಗೆ ಮದುವೆ ಮಾಡಿ ಎಂದು ಮೆಸೇಜ್‌ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ದೀಪಿಕಾಳಿಗೆ ಲಾಸ್ಟ್‌ ಫೋನ್‌ ಕಾಲ್‌ ಮಾಡಿದ್ದ ನಿತೀನ್‌

ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ನಾ?

ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಪತಿ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿಗಾಗಿ ಹುಡುಕಾಟ ನಡೆಸಿದಾಗ ಬೆಟ್ಟದ ತಪ್ಪಲಿನಲ್ಲಿ ಮಣ್ಣಿನಲ್ಲಿ ಹೂತುಹಾಕಿದಂತೆ ಇತ್ತು. ಕೈಯಲ್ಲೇ ತೆಗೆದುನೋಡಿದಾಗ ಮೊದಲಿಗೆ ಬಟ್ಟೆ ಪತ್ತೆಯಾಗಿತ್ತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದವಿ. ಅವರು ಬಂದು ಮೃತದೇಹವನ್ನು ಹೊರತೆಗೆದರು. ಮುಖವೆಲ್ಲವೂ ಕಲ್ಲಿನಿಂದ ಜಜ್ಜಿದ ಸ್ಥಿತಿಯಲ್ಲಿ ಸಿಕ್ಕಿತ್ತು. ಈ ಘಟನೆಯನ್ನೂ ನೋಡಿದರೆ, ಮೊದಲೇ ಪ್ರಿಪ್ಲ್ಯಾನ್‌ ಮಾಡಿ ಕೊಲೆ ಮಾಡಿದಂತೆ ಕಾಣುತ್ತಿದೆ ಎಂದು ಲೋಕೇಶ್‌ ಮಾಹಿತಿ ನೀಡಿದ್ದಾರೆ.

ಏನಿದು ಘಟನೆ

ಕಳೆದ ಜನವರಿ 20ರ ಶನಿವಾರದಿಂದ ವಿವಾಹಿತೆಯೊಬ್ಬಳು ನಾಪತ್ತೆಯಾಗಿದ್ದಳು. ಇದೀಗ ಜ.23ರಂದು ನಾಪತ್ತೆಯಾದವಳ ಮೃತದೇಹವು ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ದೇವಾಲಯ ಇರುವ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದೆ. ಮಾಣಿಕ್ಯನಹಳ್ಳಿಯ ದೀಪಿಕಾ (28) ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದಳು.

ದೀಪಿಕಾ ಶನಿವಾರ ಮಧ್ಯಾಹ್ನ ತರಗತಿ ಮುಗಿಸಿ ಸ್ಕೂಟರ್‌ನಲ್ಲಿ ವಾಪಸ್ ಮನೆಗೆ ಹೊರಟಿದ್ದರು. ಆದರೆ ಶನಿವಾರ ಸಂಜೆ ವೇಳೆ ಸ್ಕೂಟರ್ ಬೆಟ್ಟದ ತಪ್ಪಲಿನಲ್ಲಿ ನಿಂತಿರುವುದು ಪತ್ತೆಯಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಸ್ಕೂಟರ್‌ ನಿಂತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಕೂಟರ್ ವಶಕ್ಕೆ ಪಡೆದು ಅದರ ನಂಬರ್ ನೆರವಿನಿಂದ ಶಿಕ್ಷಕಿಯ ಊರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಜ.23ರಂದು ಅದೇ ಬೆಟ್ಟದ ತಪ್ಪಲಿನಲ್ಲಿ ಹೂತಿಟ್ಟ ರೀತಿಯಲ್ಲಿ ದೀಪಿಕಾಳ ಶವ ಪತ್ತೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version