ಬೆಂಗಳೂರು ಗ್ರಾಮಾಂತರ: ಇಲ್ಲಿನ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ ಅನೈತಿಕ ಸಂಬಂಧದ ವಿಚಾರಕ್ಕೆ ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಪ್ರದೀಪ್ (27) ಹತ್ಯೆಯಾದವನು. ಗ್ರಾಮದ ವಿವಾಹಿತೆ ಜತೆಗೆ ಪ್ರದೀಪ್ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಈ ವಿಚಾರವಾಗಿ ಮಾತುಕತೆ ನಡೆಸಲೆಂದು ಕರೆಯಲಾಗಿತ್ತು. ಈ ವೇಳೆ ಕೈ ಕಾಲುಗಳನ್ನು ಕಟ್ಟಿ, ಬಳಿಕ ಕೊಚ್ಚಿ ಕೊಲೆ ಮಾಡಿ ಹಂತಕರು ಪರಾರಿ ಆಗಿದ್ದಾರೆ.
ಎರಡು ಕಡೆಯವರು ಇದೇ ವಿಚಾರವಾಗಿ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ಮಾಡಿದ್ದರಂತೆ. ಆದರೂ ಪ್ರದೀಪ್ ವಿವಾಹಿತಯೊಂದಿಗೆ ಸಂಬಂಧವನ್ನು ಮುಂದುವರಿಸಿದ್ದ ಎನ್ನಲಾಗಿದೆ. ಹೀಗಾಗಿ ವಿವಾಹಿತೆಯ ಪತಿ ವೆಂಕಟೇಶ್ ಮತ್ತು ಕೋಳಿ ನಾಗೇಶ್ ಎಂಬುವವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾತ್ರಿ ಖಾಸಗಿ ಬಡಾವಣೆಯಲ್ಲಿ ಮಾತನಾಡಲು ಕರೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಹಂತಕರಿಂದ ತಪ್ಪಿಸಿಕೊಂಡ ಪ್ರದೀಪ್ ಒಂದು ಕಿ.ಮೀವರೆಗೂ ಓಡಿ ಬಂದಿದ್ದಾನೆ. ಆದರೂ ಬಿಡದೆ ಅಟ್ಟಾಡಿಸಿಕೊಂಡು ಬಂದು ಕೈ ಕಾಲು ಕಟ್ಟಿ ಬಳಿಕ ಕೊಂದು ಹಾಕಿದ್ದಾರೆ. ಸದ್ಯ ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.
ರಾಡ್‌ನಿಂದ ಹೊಡೆದು ಮಹಿಳೆಯ ಹತ್ಯೆ
ಮೈಸೂರಿನ ಸಿದ್ದಲಿಂಗಪುರ ಗ್ರಾಮದಲ್ಲಿ ಮಹಿಳೆಯೊಬ್ಬಳು ಹತ್ಯೆಯಾಗಿದ್ದಾಳೆ. ಮಮತಾ (32) ಕೊಲೆಯಾದ ದುರ್ದೈವಿ. ಮೋಹನ (26) ಎಂಬಾತ ಹತ್ಯೆ ಮಾಡಿದವನು.
ಪತಿಯಿಂದ ದೂರ ಇದ್ದ ಮಮತಾಳ ಜತೆ ಮೋಹನ ಸಂಬಂಧ ಬೆಳೆಸಿದ್ದ. ಸಿದ್ದಲಿಂಗಪುರ ಗ್ರಾಮದಲ್ಲಿ ಬೇಕರಿ ಇಟ್ಟುಕೊಂಡಿದ್ದ ಮೋಹನನಿಗೆ ಮಮತಾ ಸಾಥ್ ನೀಡಿದ್ದಳು. ನಿನ್ನೆ ಬುಧವಾರ ಸಂಜೆ ಏಕಾಏಕಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ.
ಈ ವೇಳೆ ಸಿಟ್ಟಾದ ಮೋಹನ ಕಬ್ಬಿಣದ ರಾಡ್‌ನಿಂದ ಮಮತಾಳಿಗೆ ಹೊಡೆದು ಕೊಂದಿದ್ದಾನೆ. ಕೃತ್ಯ ಎಸಗಿ ಮೋಹನ್ ನಾಪತ್ತೆ ಆಗಿದ್ದಾನೆ. ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ.
ʻಹೇ ಚೈಲ್ಡ್ʼ ಎಂದು ಕರೆದಿದ್ದಕ್ಕೆ ಮಾರಣಾಂತಿಕ ಹಲ್ಲೆ
ಚೈಲ್ಡ್ ಎಂದು ಕರೆದಿದ್ದಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರವಿ ಎಂಬಾತನ ಮೇಲೆ 20ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ. ಸ್ಥಳೀಯ ಮುಖಂಡ ಶೇಖರ್ ರೆಡ್ಡಿ ಗ್ಯಾಂಗ್‌ನಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಕಳೆದ ಮೇ 12ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶೇಖರ್ ರೆಡ್ಡಿ ಪುತ್ರ ಅಕ್ಷಯ್ ರೆಡ್ಡಿಯನ್ನು ರವಿ ಎಂಬಾತ ಚೈಲ್ಡ್ ಎಂದು ಕರೆದಿದ್ದಾನೆ. ಇದರಿಂದ ಸಿಟ್ಟಿಗೆದ್ದು 20 ಜನರ ತಂಡದಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರವಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇತ್ತ ಶೇಖರ್ ರೆಡ್ಡಿ ಕುಟುಂಬಸ್ಥರು ದೂರು ದಾಖಲಿಸದಂತೆ ರವಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇತ್ತ ರವಿ ದೂರು ನೀಡಲು ಮುಂದಾದರೆ, ಪರಪ್ಪನ ಅಗ್ರಹಾರ ಪೊಲೀಸರು ರವಿ ಮೇಲೆಯೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೂರು ದಾಖಲಿಸದೇ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎಂದು ರವಿ ಆರೋಪಿಸಿದ್ದಾರೆ.
ಇದನ್ನೂ ಓದಿ: Murder Case: ಕಾಂಗ್ರೆಸ್ ಕಾರ್ಯಕರ್ತನ ಅಟ್ಟಾಡಿಸಿ, ಕಲ್ಲು ಎತ್ತಿಹಾಕಿ ಕೊಂದ ಹಂತಕರು
ಸದ್ಯ ಪರಪ್ಪನ ಅಗ್ರಹಾರ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ರವಿ ಪೊಲೀಸ್ ಆಯುಕ್ತರು ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಹೀಗಾಗಿ ಪರಪ್ಪನ ಅಗ್ರಹಾರ ಪೊಲೀಸರು ಪ್ರತಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ