ರಾಮನಗರ: ತಾನಾಯಿತು ತನ್ನ ಕೆಲಸ ಆಯಿತು ಎಂದು ಆ ವೃದ್ಧೆ ಇದ್ದಿದ್ದರೆ ಇಂದು ಜೀವಂತವಾಗಿ ಇರುತ್ತಿದ್ದರು. ಜಗಲಿ ಮೇಲೆ ಕುಳಿತು ಪಕ್ಕದ ಮನೆಗೆ ಬಂದವರನ್ನೆಲ್ಲ ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ನೆರೆಮನೆಯ ವ್ಯಕ್ತಿಯೊಬ್ಬ ಕೊಂದೇ (Murder case) ಬಿಟ್ಟಿದ್ದಾನೆ.
ರಾಮನಗರದ ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಲಿಂಗಮ್ಮ (75) ಹತ್ಯೆಯಾದ ವೃದ್ಧೆ. ಮಂಜ (40) ಕೊಲೆ ಮಾಡಿರುವ ಆರೋಪಿ ಆಗಿದ್ದಾನೆ.
ವೃದ್ಧೆ ಶಿವಲಿಂಗಮ್ಮ ಆರೋಪಿ ಮಂಜ ಮನೆ ಪಕ್ಕದಲ್ಲೇ ವಾಸವಿದ್ದರು. ಈ ನಡುವೆ ಮಂಜ ಕೆಲವರ ಬಳಿ ಸಾಲ ಮಾಡಿಕೊಂಡಿದ್ದ. ಹೀಗಾಗಿ ಆತನ ಮನೆ ಬಳಿ ಪದೇ ಪದೆ ಸಾಲಗಾರರು ಬರುತ್ತಿದ್ದರು. ಈ ವೇಳೆ ವೃದ್ಧೆ ಶಿವಲಿಂಗಮ್ಮ ಮಂಜನ ಮನೆಗೆ ಯಾರೇ ಬಂದರೂ ಪ್ರಶ್ನೆ ಮಾಡಿ ಕೇಳುತ್ತಿದ್ದರು. ಇದಕ್ಕೆ ಸಿಟ್ಟಿಗೆದ್ದ ಮಂಜ, ನನ್ನ ಮನೆಗೆ ಬರುವವರನ್ನೆಲ್ಲ ಯಾಕೆ ನೀನು ಕೇಳುವೆ ಎಂದು ಜಗಳ ಆಡಿದ್ದಾನೆ.
ಇಬ್ಬರ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಂಜ, ಶಿವಲಿಂಗಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡಿದ್ದ ಶಿವಲಿಂಗಮ್ಮ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಈಗಾಗಲೇ ಸ್ಥಳಕ್ಕೆ ಬಂಧಿರುವ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಶಿವಮಲಿಂಗಮ್ಮ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಆರೋಪಿ ಮಂಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ