ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದ್ಯಾ ಎಂಬ ಅನುಮಾನಗಳು ಮೂಡುತ್ತಿವೆ. ಪುಂಡರು ಹಾಡಹಗಲೇ ಯಾರ ಭಯವಿಲ್ಲದೆ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದಾರೆ. ಈ ನಡುವೆ ದಿನಕ್ಕೊಂದು ಅಪರಿಚಿತ ಶವ (Dead body Found) ಪತ್ತೆಯಾಗುತ್ತಿದೆ. ಇಲ್ಲಿನ ಆರ್‌ಎಂಸಿ ಯಾರ್ಡ್ ಎಂ.ಕೆ ಎಂಟರ್ ಪ್ರೈಸಸ್ ಕಟ್ಟಡದ ಹಿಂಭಾಗದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಹೊಟ್ಟೆ, ಎದೆಭಾಗ, ಕೈ-ಕಾಲುಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಹತ್ಯೆ (Murder Case) ಮಾಡಿದ್ದಾರೆ.
ಉತ್ತರ ಪ್ರದೇಶ ಮೂಲದ ಸಜ್ಜನ್ ಸಿಂಗ್ (33) ಎಂಬಾತ ಪರಿಚಯಸ್ಥರಿಂದಲೇ ಹತ್ಯೆ ಆಗಿರಬಹುದೆಂದು ಶಂಕಿಸಲಾಗಿದೆ. ಹತ್ಯೆಕೋರರು ಹಾಗೂ ಕೊಲೆಯಾದವನು ಎಲ್ಲರೂ ಉತ್ತರ ಪ್ರದೇಶ ಮೂಲದವರಾಗಿದ್ದು, ಆರ್‌ಎಂಸಿ ಯಾರ್ಡ್‌ನಲ್ಲಿ ಕೂಲಿ ಕೆಲಸವನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ.
ಇವರುಗಳ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ರಾತ್ರಿ ಕೂಡ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ, ಕತ್ತು ಕೂಯ್ದು ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ಮರಳಿನ ರಾಶಿಯೊಳಗೆ ಶವ ಪತ್ತೆ!
ಬೆಂಗಳೂರಿನ ಲಗ್ಗೆರೆಯ ಮುಖ್ಯ ರಸ್ತೆಯ ಜೆ ಸಿ ನಗರದಲ್ಲಿ ಅಪರಿಚಿತ ವ್ಯಕ್ತಿಯ ಶವ (Dead Body Found) ಪತ್ತೆಯಾಗಿದೆ. ಎಂ ಸ್ಯಾಂಡ್ ರಾಶಿಯೊಳಗೆ ಶವವನ್ನು ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಸುಮಾರು 35-40 ಆಸುಪಾಸಿನ ವ್ಯಕ್ತಿಯ ಮೃತದೇಹವು ಎಂ ಸ್ಯಾಂಡ್ ನೊಳಗೆ ಇತ್ತು. ಇದನ್ನು ಬೀದಿ ನಾಯಿಯೊಂದು ಪತ್ತೆ ಮಾಡಿದೆ.
ರಸ್ತೆ ಬದಿಯಲ್ಲಿ ಎಂ ಸ್ಯಾಂಡ್ ರಾಶಿಯನ್ನು ಹಾಕಲಾಗಿತ್ತು. ಬೀದಿ ನಾಯಿಯೊಂದು ಕಲ್ಲು ಪುಡಿ ರಾಶಿಯನ್ನು ಕೆದರಲು ಮುಂದಾಗಿದೆ. ಈ ವೇಳೆ ವ್ಯಕ್ತಿಯೊಬ್ಬನ ಮೃತದೇಹವು ಪತ್ತೆಯಾಗಿದೆ. ಕೂಡಲೇ ಸ್ಥಳೀಯರನ್ನು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆ ಕಟ್ಟಿಸಲು ಎಂ ಸ್ಯಾಂಡ್ ತರಿಸಲಾಗಿತ್ತು. ಕಳೆದ ಮೂರು ದಿನಗಳ ಹಿಂದಷ್ಟೇ ಎಂ ಸ್ಯಾಂಡ್ ಲೋಡ್ ಬಂದಿತ್ತು. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿ ಶವವನ್ನು ಎಂ ಸ್ಯಾಂಡ್ ಲೋಡ್‌ನ ಮಧ್ಯ ಭಾಗದಲ್ಲಿಟ್ಟು ಹೋಗಿದ್ದಾರೆ. ಮನೆ ಕಟ್ಟಿಸುತ್ತಿರುವ ಮಾಲೀಕನನ್ನು ಪೊಲೀಸರು ಸಂಪರ್ಕಿಸಿದ್ದು, ಆತ ತಮಿಳುನಾಡಿಗೆ ಹೋಗಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಹಾಗೂ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ರವಾಸಿದ್ದಾರೆ. ವ್ಯಕ್ತಿ ಗುರುತು ಪತ್ತೆಯಾಗಿಲ್ಲ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ