Site icon Vistara News

Murder Case : 8 ಹುಡುಗರು, ಒಬ್ಬ ಹುಡುಗಿ; ಏಕಮುಖ ಪ್ರೀತಿಗಾಗಿ ಯುವಕನ ಮರ್ಡರ್‌; ಆದರೆ, ಪ್ರೀತಿಸಿದ್ದುಅವನಲ್ಲ!

Marvesh Murder

ಬೆಂಗಳೂರು: ಎರಡು ದಿನದ ಹಿಂದೆ ಬೆಂಗಳೂರು ಹೊರವಲಯದ ಹೆಣ್ಣೂರಿನಲ್ಲಿ ಮಾರ್ವೇಶ್‌ ಎಂಬ 21 ವರ್ಷದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ (Murder Case). ಇದೀಗ ಆತನ ಕೊಲೆ ನಡೆದಿದೆ ಎಂಬುದು ಬಯಲಾಗಿದೆ. ಆರು ಮಂದಿ ಯುವಕರು ಸೇರಿ ಈ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಯುವಕರೆಲ್ಲರೂ 20ರಿಂದ 21 ವರ್ಷ ವಯಸ್ಸಿನವರು. ಅವರಲ್ಲಿ ಮೂವರು ರೌಡಿ ಶೀಟರ್‌ಗಳು. ಈ ಕೊಲೆ ನಡೆದಿದ್ದು ಒಂದು ಏಕಮುಖ ಪ್ರೇಮ (One sided Love story) ಪ್ರಕರಣಕ್ಕಾಗಿ. ಹುಡುಗಿಯೊಬ್ಬಳನ್ನು ಕಾಡುತ್ತಿದ್ದ ಕಾರಣಕ್ಕೆ. (Love with a girl) ಆದರೆ, ಈ ರೀತಿ ಒನ್‌ ಸೈಡ್‌ ಲವ್‌ ಮಾಡಿದ್ದು ಕೊಲೆಯಾದ ಹುಡುಗನಲ್ಲ! ಏನಿದು ಚಿತ್ರ ವಿಚಿತ್ರ ಕಥೆ ಅಂತೀರಾ? ಈ ವರದಿ ಓದಿ.

ಮಾರ್ವೇಶ್‌ ಹೆಣ್ಣೂರಿನ ಖಾಸಗಿ ಕಾಲೇಜಿನಲ್ಲಿ (Hennur Private College) ಬಿಕಾಂ ಮಾಡುತಿದ್ದವನು. ಎರಡು ದಿನದ ಹಿಂದೆ ಆತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಮೊದಲು ಯಾಕೆ ಸಾವಾಯಿತು ಎನ್ನುವುದು ಸ್ಪಷ್ಟವಾಗಿರಲಿಲ್ಲ. ಬಳಿಕ ಅವನನ್ನು ಆರು ಮಂದಿಯ ತಂಡವೊಂದು ಹೊಡೆದು ಸಾಯಿಸಿದ ಅಂಶ ಹೊರಗೆ ಬಂದಿದೆ. ಪೊಲೀಸರು ಈಗ ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರೀಕಾಂತ್ ಎಂಬವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಒಂದು ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನುವುದು ಬಯಲಾಗಿದೆ. ಆದರೆ, ಅಚ್ಚರಿ ಎಂದರೆ ಈ ಲವ್‌ ಕೇಸಿಗೂ ಕೊಲೆಯಾದ ಮಾರ್ವೇಶ್‌ಗೂ ಸಂಬಂಧವೇ ಇಲ್ಲ. ಯಾರದ್ದೋ ಜಗಳಕ್ಕೆ ಅಮಾಯಕ ಮಾರ್ವೇಶ್‌ ಬಲಿಯಾಗಿದ್ದಾನೆ. ಹಾಗಿದ್ದರೆ ಅವನು ಈ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದ್ದು ಹೇಗೆ?

ಟಾರ್ಗೆಟ್ಟೇ ಬೇರೆ, ಸತ್ತವನೇ ಬೇರೆ!

ನಿಜವೆಂದರೆ ಅಸಲಿ ಟಾರ್ಗೆಟ್ಟೇ ಬೇರೆ, ಕೊಲೆಯಾದವನೇ ಬೇರೆ ಎಂಬ ಕೇಸು ಇದು. ಇತ್ತೀಚೆಗೆ ಒಬ್ಬ ಹುಡುಗಿಗೆ ಒಬ್ಬ ಹುಡುಗ ಮೆಸೇಜ್‌ ಮಾಡುತ್ತಿದ್ದ. ನಿನ್ನನ್ನು ಪ್ರೀತಿಸುತ್ತೇನೆ ಎಂದು ಸತಾಯಿಸುತ್ತಿದ್ದ. ಆದರೆ ಆಕೆಗೆ ಇದು ಇಷ್ಟವಿರಲಿಲ್ಲ. ಆದರೆ, ಈ ಹುಡುಗ ಬಿಡಲಿಲ್ಲ. ಒಮ್ಮೊಮ್ಮೆ ವಿಪರೀತ ಪ್ರೀತಿಯಿಂದ ಇನ್ನು ಕೆಲವೊಮ್ಮೆ ಆಕ್ರೋಶದಿಂದ ಮೆಸೇಜ್‌ ಮಾಡುತ್ತಿದ್ದ.

ನಿಜವೆಂದರೆ ಆ ಹುಡುಗಿ ಇವನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಯಾಕೆಂದರೆ, ಅವಳು ಈಗಾಗಲೇ ಇನ್ನೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಹೀಗಾಗಿ ಇನ್ನು ಮುಂದೆ ಮೆಸೇಜ್‌ ಮಾಡಬೇಡ ಎಂದು ಖಡಾಖಡಿಯಾಗಿ ಹೇಳಿದ್ದಳು. ಆದರೆ, ಈ ಹುಡುಗ ತನ್ನ ಚಾಳಿ ಬಿಡಲಿಲ್ಲ.

ನನ್ನ ಲವರನ್ನು ಕೆಣಕ್ತೀಯಾ.. ಬಿಡಲ್ಲ ನಿನ್ನ!

ಸೋ ಹುಡುಗಿ ಈಗ ಈ ಎಲ್ಲ ವಿಷಯಗಳನ್ನು ತಾನು ಪ್ರೀತಿಸುತ್ತಿದ್ದ ಹುಡುಗನಿಗೆ ತಿಳಿಸಿದಳು. ಆಗ ಆ ಹುಡುಗ ಆಕ್ರೋಶದಿಂದ ಕೆಂಡಾಮಂಡಲನಾದ. ನನ್ನ ಲವರನ್ನು ಕೆಣಕಿದರೆ ಬಿಡುವುದಿಲ್ಲ ಎಂಬ ಸಂದೇಶ ರವಾನಿಸಲು ಮುಂದಾದ. ಆದರೆ, ಆ ಹುಡುಗ ಇವನ ಕೈಗೆ ಸಿಗಲೇ ಇಲ್ಲ.

ಅಷ್ಟು ಹೊತ್ತಿಗೆ ಹುಡುಗಿಯ ಲವರ್‌ ಶ್ರೀಕಾಂತ್‌ ತನ್ನ ಗೆಳೆಯ ರಾಖಿಗೆ ವಿಷಯ ತಿಳಿಸಿದ್ದ. ಬಳಿಕ ಇದು ಇತರ ಗೆಳೆಯರಾದ ಕಾರ್ತಿಕ್, ಅಭಿಷೇಕ್, ನೆಲ್ಸನ್, ಡ್ಯಾನಿಯಲ್‌ಗೆ ಗೊತ್ತಾಯಿತು. ಕಾರ್ತಿಕ್, ಅಭಿಷೇಕ್ ಹಾಗೂ ನೆಲ್ಸನ್ ಸಾಮಾನ್ಯದವರೇನಲ್ಲ. ಇವರು ಕಾಲೇಜು ಡ್ರಾಪೌಟ್ ಆದ ಯುವಕರು. ಜೊತೆಗೆ ಈ ಮೂವರ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಕಾರ್ತಿಕ್ ವಿರುದ್ಧ ರಾಮಮೂರ್ತಿ ನಗರದಲ್ಲಿ ರೌಡಿ ಪಟ್ಟಿ ಸಹ ಇದೆ. ಆತನ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಬಾಂಡ್ ಸಹ ಬರೆಸಿಕೊಳ್ಳಲಾಗಿತ್ತು.

ಇವರೆಲ್ಲ ಜತೆ ಸೇರಿದಾಗ ಲವ್‌ ಕೇಸ್‌ ಬೇರೆಯೇ ತಿರುವು ಪಡೆದುಕೊಂಡಿತ್ತು. ಎಷ್ಟು ಹುಡುಕಿದರೂ ಹುಡುಗಿಗೆ ಕಿರಿಕಿರಿ ಮಾಡುತ್ತಿದ್ದ ಹುಡುಗ ಸಿಗದೆ ಇದ್ದಾಗ ಅವರ ದೃಷ್ಟಿ ಬಿದ್ದಿದ್ದು ಅವನ ಗೆಳೆಯನಾದ ಮಾರ್ವೇಶ್‌ ಮೇಲೆ.

ಮಾರ್ವೇಶ್‌ ಕಾಲೇಜಿನ ಬಳಿ ನಿಂತಿದ್ದಾಗ..

ಅದೊಂದು ದಿನ ಮಾರ್ವೇಶ್‌ ಕಾಲೇಜಿನ ಬಳಿ ಇದ್ದಾಗ ಡ್ಯಾನಿಯಲ್ ಮತ್ತು ರಾಖಿ ಆತನ ಬಳಿ ಗೆಳೆಯನ ಬಗ್ಗೆ ಕೇಳಿದ್ದಾರೆ. ಮಾರ್ವೇಶ್‌ ಫೋನ್‌ ಮಾಡಿದರೂ ಅವನು ಎತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಟ್ರೈ ಮಾಡೋಣ ಎಂದ ಡ್ಯಾನಿಯಲ್‌ ಮತ್ತು ರಾಖಿ ಮಾರ್ವೇಶ್‌ನನ್ನು ತಮ್ಮ ಜತೆ ಕರೆದೊಯ್ದಿದ್ದಾರೆ.

ಒಂದು ರೂಂಗೆ ಕರೆದೊಯ್ದ ಈ ಯುವಕರು ಅಲ್ಲೂ ಕರೆ ಮಾಡುವಂತೆ ಸೂಚಿಸಿದ್ದಾರೆ. ಇಲ್ಲಿಂದ ಕರೆ ಮಾಡಿದರೂ ಮಾರ್ವೇಶ್‌ನ ಗೆಳೆಯ ಎತ್ತಿಲ್ಲ. ಈ ಹಂತದಲ್ಲಿ ಹುಡುಗರು ಮಾರ್ವೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ಸ್ನೇಹಿತನ ಮೇಲೆ ಇದ್ದ ಸಿಟ್ಟನ್ನು ಮಾರ್ವೇಶ್‌ ಮೇಲೆ ತೀರಿಸಿಕೊಂಡಿದ್ದಾರೆ.

ಆ ಕೋಣೆಯಲ್ಲಿ ಅಂತಿಮವಾಗಿ ನಡೆದಿದ್ದೇನು?

ಅಲ್ಲಿಗೆ ಕಾರ್ತಿಕ್, ನೆಲ್ಸನ್, ಅಭಿ ಕೂಡಾ ಬಂದಿದ್ದಾರೆ. ಗೆಳೆಯ ಎಲ್ಲಿದ್ದಾನೆ ಹೇಳು ಎಂದು ಒತ್ತಾಯಿಸಿ ಪಿವಿಸಿ ಪೈಪ್‌ನಿಂದ ಹಲ್ಲೆ ಮಾಡಿದ್ದಾರೆ. ಆದರೆ ತನಗೆ ಗೊತ್ತಿಲ್ಲ ಎಂದು ಮಾರ್ವೇಶ್‌ ಎಷ್ಟು ಹೇಳಿದರೂ ಕೇಳಿಸಿಕೊಳ್ಳಲೇ ಇಲ್ಲ. ಬೇಕಾಬಿಟ್ಟಿ ಹೊಡೆದು ಕೊನೆಗೆ ಆತ ಕುಸಿದುಬಿದ್ದ. ಈ ಹಂತದಲ್ಲಿ ಆತನನ್ನು ಆಸ್ಪತ್ರೆಗೆ ಸೇರಿಸಿ ಈ ಯುವಕರು ಪರಾರಿಯಾಗಿದ್ದಾರೆ.

ಆಸ್ಪತ್ರೆಗೆ ಸೇರಿಸಿದ ಸ್ವಲ್ಪ ಹೊತ್ತಿನಲ್ಲಿ ಮಾರ್ವೇಶ್‌ ಸಾವನ್ನಪ್ಪಿದ್ದಾನೆ. ಆರಂಭದಲ್ಲಿ ಇದೊಂದು ಅನುಮಾನಾಸ್ಪದ ಸಾವೆಂದು ತಿಳಿಯಲಾಗಿತ್ತು. ಆದರೆ, ಘಟನೆಯ ವಿವರಗಳನ್ನು ಪಡೆಯುತ್ತಾ ಹೋದಂತೆ ಐವರು ಯುವಕರು ಮತ್ತು ಒಬ್ಬ ಹುಡುಗಿ ಇದರಲ್ಲಿ ಸಿಕ್ಕಿಬಿದ್ದಿದ್ದಾರೆ. ಅಮಾಯಕ ಪ್ರಾಣ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: Ajay Julie Love: ಜೂಲಿ ಐ ಲವ್‌ ಯು; ಗೆಳತಿಗಾಗಿ ಬಾಂಗ್ಲಾಗೆ ತೆರಳಿದ ಭಾರತದ ಯುವಕ, ಕತೆಯಲ್ಲಿದೆ ಬಿಗ್‌ ಟ್ವಿಸ್ಟ್

Exit mobile version