Site icon Vistara News

Murder Case | ಲವರ್‌ ಜತೆ ಸೇರಿ ಪತಿ ಮುಗಿಸಲು ಸುಪಾರಿ ಕೊಟ್ಟವಳು ಅರೆಸ್ಟ್‌; ಸತ್ತಿದ್ದು ಮಾತ್ರ ಪ್ರಿಯಕರ!

Murder Case

ಬೆಂಗಳೂರು: ಅಫೇರ್‌ಗೋಸ್ಕರ ಪತಿಯನ್ನೇ ಮುಗಿಸಲು ಪ್ರಿಯಕರನ ಜತೆಗೂಡಿ ಸುಪಾರಿ (Murder Case) ನೀಡಿದ್ದ ಪ್ರಕರಣದಲ್ಲಿ ಆಕೆ ಸಹಿತ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ. ಸುಪಾರಿ ನೀಡಿದ್ದ ಪ್ರಿಯಕರ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಸುಪಾರಿ ಪ್ರಕರಣ ಬೆಳಕಿಗೆ ಬಂದಿದೆ.

ಪ್ರೀತಿಸುವ ಪತಿ ಇದ್ದರೂ ಈಕೆಗೆ ಇನ್ನೊಬ್ಬನ ಮೇಲೆ ಪ್ರೇಮಾಂಕುರವಾಗಿದೆ. ತಮ್ಮ ಪ್ರೀತಿಗೆ ಪತಿ ಅಡ್ಡಿಯಾಗುತ್ತಾನೆಂದು ತಿಳಿದ ಅನುಪಲ್ಲವಿ ಎಂಬಾಕೆ ಪ್ರಿಯಕರ ಹಿಮಂತ್‌ ಎಂಬಾತನ ಜತೆ ಸೇರಿ ಪತಿ ನವೀನ್‌ ಕುಮಾರ್‌ ಕೊಲೆಗೆ ಜುಲೈ 26ರಂದು ಸುಪಾರಿ ಕೊಟ್ಟಿದ್ದಳು. ಆದರೆ, ಪತಿಯ ಅದೃಷ್ಟ ಚೆನ್ನಾಗಿತ್ತು, ಇವರಿಬ್ಬರ ಅದೃಷ್ಟ ಕೆಟ್ಟಿತ್ತು. ಸುಪಾರಿ ಪಡೆದವರು ಮಾಡಿದ ಕಿತಾಪತಿಯಿಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ. ಆತ್ಮಹತ್ಯೆಯ ಕೇಸ್‌ ಹಿಂದೆ ಬಿದ್ದ ಪೊಲೀಸರಿಗೆ ಆತನ ಸಿಮ್‌ ಇಲ್ಲದ ಮೊಬೈಲ್‌ ಸಿಕ್ಕಿತು. ಒಂದೊಂದೇ ಎಳೆ ಬಿಡಿಸುವತನಕ ಈ ಸುಪಾರಿ ಪ್ರಕರಣ ಬಿಚ್ಚಿಕೊಂಡಿತ್ತು. ಈಗ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಹರೀಶ್‌ ಹಾಗೂ ನಾಗರಾಜ್‌ ಎಂಬಿಬ್ಬರಿಗೆ ಸುಪಾರಿ ಕೊಡಲಾಗಿತ್ತು. ಅದರಂತೆ ಆರೋಪಿಗಳು ನವೀನ್‌ನನ್ನು ಅಪಹರಣ ಮಾಡಿದ್ದರು. ನಂತರ ತಮಿಳುನಾಡಿನ ವಿರೂದ್ ನಗರಕ್ಕೆ ಕರೆದೊಯ್ದು ನವೀನ್‌ ಅವರನ್ನು ಕೊಲೆ ಮಾಡಲು ಆರೋಪಿಗಳು ಪ್ಲ್ಯಾನ್‌ ಹಾಕಿಕೊಂಡಿದ್ದರು. ಆರೋಪಿಗಳು ತಮಿಳುನಾಡಿನಲ್ಲಿಯೇ ನವೀನ್‌ರ ಕೊಲೆ ಮಾಡಬೇಕು ಎಂದು ತಮಿಳುನಾಡಿನ ಮುಗಿಲನ್ ಹಾಗೂ ಕಣ್ಣನ್ ಎಂಬುವರನ್ನು ಕರೆಸಿಕೊಂಡಿದ್ದರು. ಆದರೆ, ಇವರಿಗೆ ನವೀನ್‌ ಕೊಲೆ ಮಾಡಲು ಧೈರ್ಯ ಸಾಲಲಿಲ್ಲ. ಕೊನೆಗೆ ನವೀನ್‌ ಕೊಲೆಗೆ ಮಾಸ್ಟರ್‌ ಪ್ಲ್ಯಾನ್‌ ಮಾಡಿದರು.

ಇದನ್ನೂ ಓದಿ | Murder Case | ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದವರು ನಾಲ್ಕು ತಿಂಗಳ ಬಳಿಕ ಸೆರೆ

ಪ್ರಿಯಕರ ಹಿಮಂತ್‌

ಕೊಲೆ ಪ್ಲ್ಯಾನ್‌ ಕೈಬಿಟ್ಟ ಹಂತಕರು:

ನವೀನ್‌ರನ್ನು ಕೊಲೆ ಮಾಡಲು ಹಂತಕರು ಭಯಗೊಂಡಿದ್ದಾರೆ. ಈ ಕಾರಣದಿಂದ ಅವರಿಗೆ ಕಂಠಪೂರ್ತಿ ಕುಡಿಸಿ ಮಲಗಿಸಿದ್ದಾರೆ. ಬಳಿಕ ನವೀನ್‌ ಮೈಮೇಲೆ ಟೊಮೆಟೊ ಸಾಸ್‌ ಚೆಲ್ಲಿ ಫೋಟೊ ತೆಗೆದುಕೊಂಡಿದ್ದಾರೆ. ಬಳಿಕ ಈ ಫೋಟೊವನ್ನು ಸುಪಾರಿ ಕೊಟ್ಟಿದ್ದ ಅನುಪಲ್ಲವಿಯ ಪ್ರಿಯಕರ ಹಿಮಂತ್‌ಗೆ ಕಳುಹಿಸಿದ್ದಾರೆ. ಈ ಫೋಟೊ ನೋಡಿ ಹೆದರಿದ ಹಿಮಂತ್‌, ಕೊಲೆ ಪ್ರಕರಣ ತನ್ನ ಕೊರಳಿಗೆ ಉರುಳಾಗುತ್ತದೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಹಿಮಂತ್‌ ಮಿಸ್ಸಿಂಗ್‌ ಕೇಸ್‌ ಪೀಣ್ಯದಲ್ಲಿ ದಾಖಲಾಗಿತ್ತು. ಆದರೆ, ಆತ್ಮಹತ್ಯೆ ಪ್ರಕರಣ ಬಾಗಲಗುಂಟೆ ಠಾಣೆಯಲ್ಲಿ ದಾಖಾಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೀಣ್ಯ ಇನ್ಸ್‌ಪೆಕ್ಟರ್ ಧರ್ಮೇಂದ್ರ ತನಿಖೆ ನಡೆಸಿದಾಗ ಅನುಪಲ್ಲವಿಯ ಕರಾಳ ಸತ್ಯ ಬೆಳಕಿಗೆ ಬಂದಿದೆ.

ಅನುಪಲ್ಲವಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಇಡೀ ವೃತ್ತಾಂತ ಗೊತ್ತಾಗಿದೆ. ಅನುಪಲ್ಲವಿ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Family suicide: ಆತ್ಮಹತ್ಯೆ ಮಾಡಿಕೊಂಡ ಮಹೇಶ್‌ ಮೇಲೆ ಕೊಲೆ ದೂರು, ಅಂಬರೀಷ್‌ ಅಭಿಮಾನಿಯ ಆಘಾತಕಾರಿ ಸಾವು

Exit mobile version