ಮಂಡ್ಯ: ಅಕ್ಕ ಅಕ್ಕ ಎಂದು ಕರೆಯುತ್ತಿದ್ದವನೇ ಹುಟ್ಟು ಹಬ್ಬದ ನೆಪದಲ್ಲಿ ಕರೆಸಿಕೊಂಡು ಅತಿಥಿ ಉಪನ್ಯಾಸಕಿ ದೀಪಿಕಾಳನ್ನು ಹತ್ಯೆ ಮಾಡಿದ್ನಾ (Murder case) ಎಂಬ ಅನುಮಾನಗಳು ಮೂಡಿವೆ. ಹತ್ಯೆ ದಿನ ದೀಪಿಕಾ ಮತ್ತು ಹಂತಕನ ನಡುವೆ ಜಗಳ ನಡೆದಿತ್ತು (mandya school teacher) ಎನ್ನಲಾಗಿದೆ.
ಜಗಳ ನಡೆಯುವ ದೃಶ್ಯವನ್ನು ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ಪ್ರವಾಸಿಗರಿಂದ ವಿಡಿಯೋ ಸೆರೆಹಿಡಿದಿದ್ದಾರೆ. ಬಳಿಕ ಮೇಲುಕೋಟೆ ಪೊಲೀಸರಿಗೆ ವಿಡಿಯೋ ಸಮೇತ ಮಾಹಿತಿ ನೀಡಿದ್ದಾರೆ. ಆ ದಿನ ಯುವಕನ ಹುಟ್ಟು ಹಬ್ಬ ಇತ್ತು. ಹುಟ್ಟು ಹಬ್ಬದ ನೆಪದಲ್ಲಿ ದೀಪಿಕಾಳನ್ನು ಕರೆಸಿ ಹತ್ಯೆ ಮಾಡಿದ್ನಾ ಎಂಬ ಅನುಮಾನವಿದೆ. ಸದ್ಯ ಅಲ್ಲಿ ಜಗಳ ಮಾಡುತ್ತಿದ್ದವರು ಇವರೇನಾ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೃತದೇಹ ಸಿಕ್ಕಿದ ದಿನದಿಂದ ಯುವಕ ನಾಪತ್ತೆ!
ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ 22 ವರ್ಷದ ಯುವಕನ ಮೇಲೆ ದೀಪಿಕಾ ಪತಿ ಲೋಕೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಯುವಕ ದೀಪಿಕಾಳನ್ನು ಅಕ್ಕ ಎಂದು ಕರೆಯುತ್ತಿದ್ದನಂತೆ. ದೀಪಿಕಾಳ ಮೃತದೇಹವು ಸಿಕ್ಕಿದ ದಿನದಿಂದ ಆತ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ನಾನು ದೀಪಿಕಾ ಪ್ರೀತಿಸಿ ಮದುವೆ ಆದವರು, ನಮಗೆ 8 ವರ್ಷದ ಒಬ್ಬ ಮಗನಿದ್ದಾನೆ. ನಮ್ಮಿಬ್ಬರಿಗೆ ಯಾವುದಕ್ಕೂ ಕೊರತೆ ಇರಲಿಲ್ಲ. ನನ್ನ ಪತ್ನಿ ದೀಪಿಕಾ ನನ್ನ ಹಾಗೂ ಮಗುವನ್ನು ಬಿಟ್ಟು ಒಂದು ಗಂಟೆಯೂ ಇರುತ್ತಿರಲಿಲ್ಲ. ಊರಲ್ಲಿ 22 ವರ್ಷದ ಯುವಕನ ಪರಿಚಯ ಇತ್ತು. ಆತ ದೀಪಿಕಾನ ಅಕ್ಕ ಅಕ್ಕ ಎಂದು ಕರೆಯುತ್ತಿದ್ದ. ಆಕೆ ಶಾಲೆಗೆ ಯಾವಾಗಲೂ ಬಸ್‌ನಲ್ಲೇ ಹೋಗಿ ಬರುತ್ತಿದ್ದಳು. ಆದರೆ ಘಟನೆ ದಿನ ಅಂದು ಬಸ್ ಮಿಸ್ ಆಗಿತ್ತು. ಹೀಗಾಗಿ ಸ್ಕೂಟರ್‌ನಲ್ಲಿ ತೆರಳಿದ್ದಳು.
ಜನವರಿ 20ರ ಶನಿವಾರ ಮಧ್ಯಾಹ್ನ 12.30ರ ವೇಳೆ ಶಾಲೆ ಮುಗಿಸಿ ಹೊರ ಬಂದಿದ್ದಾಳೆ. ಆ ವೇಳೆ ಆಕೆಯ ಫೋನ್ ಕಾಲ್‌ವೊಂದು ಬಂದಿದೆ. ಫೋನ್‌ನಲ್ಲಿ ಮಾತಾಡಿಕೊಂಡು ಹೊರ ಬಂದಿದ್ದಾಳೆ. ಹೊರ ಬಂದು ಒಂದು ಗಂಟೆ ವೇಳೆಗೆ ನಾನು ಫೋನ್ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ದೀಪಿಕಾ ಮೃತ ದೇಹ ಸಿಕ್ಕಿದ ದಿನದಿಂದ ಆ ಯುವಕ ನಾಪತ್ತೆಯಾಗಿದ್ದಾನೆ. ಆ ಯುವಕ ನನ್ನ ಹುಡುಕಬೇಡಿ ಅಕ್ಕಗೆ ಒಳ್ಳೆ ಕಡೆ ಮದುವೆ ಮಾಡಿ ಎಂದು ತಂದೆಗೆ ಹೇಳಿದ್ದಾನಂತೆ. ನಾನು ಏನೇ ಮಾಡಿದರೂ ನಮ್ಮ ಅಪ್ಪ ಬಿಡಿಸಿಕೊಂಡು ಬರುತ್ತಾರೆ ಎಂಬ ಧಿಮಾಕಿದೆ. ದೀಪಿಕಾಗೆ ಕೊನೆಯದಾಗಿ ಫೋನ್ ಮಾಡಿದ್ದು ಆ ಯುವಕನೇ ಆಗಿದ್ದರೆ, ಆತನನ್ನ ಹಿಡಿದು ಶಿಕ್ಷಿಸಬೇಕು. ನನ್ನ ಹಾಗೂ ಮಗು ಜೀವನ ಹಾಳು ಮಾಡಿದ ಆತನಿಗೆ ಜೀವಾವಧಿ ಶಿಕ್ಷೆ ಆಗಬೇಕು ಲೋಕೇಶ್ ಒತ್ತಾಯಿಸಿದರು.
ಏನಿದು ಘಟನೆ
ಕಳೆದ ಜನವರಿ 20ರ ಶನಿವಾರದಿಂದ ವಿವಾಹಿತೆಯೊಬ್ಬಳು ನಾಪತ್ತೆಯಾಗಿದ್ದಳು. ಇದೀಗ ಜ.23ರಂದು ನಾಪತ್ತೆಯಾದವಳ ಮೃತದೇಹವು ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ದೇವಾಲಯ ಇರುವ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದೆ. ಮಾಣಿಕ್ಯನಹಳ್ಳಿಯ ದೀಪಿಕಾ (28) ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದಳು.
ದೀಪಿಕಾ ಶನಿವಾರ ಮಧ್ಯಾಹ್ನ ತರಗತಿ ಮುಗಿಸಿ ಸ್ಕೂಟರ್‌ನಲ್ಲಿ ವಾಪಸ್ ಮನೆಗೆ ಹೊರಟಿದ್ದರು. ಆದರೆ ಶನಿವಾರ ಸಂಜೆ ವೇಳೆ ಸ್ಕೂಟರ್ ಬೆಟ್ಟದ ತಪ್ಪಲಿನಲ್ಲಿ ನಿಂತಿರುವುದು ಪತ್ತೆಯಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಸ್ಕೂಟರ್ ನಿಂತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಕೂಟರ್ ವಶಕ್ಕೆ ಪಡೆದು ಅದರ ನಂಬರ್ ನೆರವಿನಿಂದ ಶಿಕ್ಷಕಿಯ ಊರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಜ.23ರಂದು ಅದೇ ಬೆಟ್ಟದ ತಪ್ಪಲಿನಲ್ಲಿ ಹೂತಿಟ್ಟ ರೀತಿಯಲ್ಲಿ ದೀಪಿಕಾಳ ಶವ ಪತ್ತೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ