Site icon Vistara News

Murder Case:‌ ಡಿ.ಜೆ.ಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ

Kapil murdered

ಬೆಂಗಳೂರು: ನಗರದ ಅಮೃತಹಳ್ಳಿಯಲ್ಲಿ ಜೋಡಿ ಕೊಲೆ ನಡೆದ ಬೆನ್ನಲ್ಲೇ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ, ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ (Murder Case) ಮಾಡಿರುವ ಘಟನೆ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ, ರೌಡಿಶೀಟರ್ ಕಪಿಲ್ ಮೃತ. ಡಿ.ಜೆ. ಹಳ್ಳಿ ಕೆ.ಎಚ್.ಬಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಬೈಕ್‌ನಲ್ಲಿ ನಾಲ್ಕೈದು‌ ದುಷ್ಕರ್ಮಿಗಳು ಬಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಪಿಲ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮೃತಪಟ್ಟಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮೃತ ರೌಡಿಶೀಟರ್ ಕಪಿಲ್‌, 2014ರಲ್ಲಿ ನಕ್ರ ಬಾಬುವಿನ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಡಿ.ಜೆ. ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಡಿಸಿಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ರಾತ್ರಿ ಎಂಟು ಗಂಟೆ ಸುಮಾರಿಗೆ ಸ್ನೇಹಿತರನ್ನು ನೋಡಲು ಡಿ.ಜೆ.ಹಳ್ಳಿಗೆ ಕಪಿಲ್ ಬಂದಿದ್ದ. ಈ ವೇಳೆ ಎರಡು ಬೈಕ್‌ಗಳಲ್ಲಿ ಹೆಲ್ಮೆಟ್ ಹಾಗೂ ಪುಲ್ ಓವರ್ ಧರಿಸಿ ದುಷ್ಕರ್ಮಿಗಳು ಬಂದಿದ್ದರು. ಬೈಕ್‌ವೊಂದರ ನಂಬರ್ ಪ್ಲೇಟ್ ಮೇಲೆ ಅನುಮಾನ ಪಟ್ಟ ಕಪಿಲ್‌, ನಂಬರ್ ಪ್ಲೇಟ್ ನೋಡುವಂತೆ ಸ್ನೇಹಿತನನ್ನು ಕಳುಹಿಸಿದ್ದಾನೆ. ಸ್ನೇಹಿತ ಹೋಗುತ್ತಿದ್ದಂತೆ ಕಪಿಲ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸುಮಾರು ನೂರು ಮೀಟರ್ ಅಟ್ಟಿಸಿಕೊಂಡು ಹೋಗಿ ಕಪಿಲ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕಪಿಲ್‌, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Hunting Animals : ಕಾಡು ಪ್ರಾಣಿಗಳನ್ನು ಬೇಟೆಯಾಡಿ ಖಾದ್ಯ ತಯಾರಿ ವೇಳೆ ದಾಳಿ; ಮೂವರು ಎಸ್ಕೇಪ್‌, ಮಾಂಸ ವಶಕ್ಕೆ

ಕಚೇರಿಗೆ ನುಗ್ಗಿ ಎಂಡಿ, ಸಿಇಒರನ್ನೇ ಕೊಂದು ಹಾಕಿದ ಮಾಜಿ ಉದ್ಯೋಗಿ!

ಕೊಲೆಯಾದ ಫಣೀಂದ್ರ ಹಾಗೂ ಹಂತಕ ಫೆಲಿಕ್ಸ್‌

ಬೆಂಗಳೂರು: ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಜೋಡಿ ಕೊಲೆಯಾಗಿದೆ. ಏರೋನಿಕ್ಸ್ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಮಾಜಿ ಉದ್ಯೋಗಿಯೊಬ್ಬ ಎಂಡಿ ಮತ್ತು ಸಿಇಒರನ್ನೇ ಬರ್ಬರವಾಗಿ (Double Murder) ಹತ್ಯೆಗೈದಿದ್ದಾನೆ. ಕಂಪೆನಿಯ ಎಂಡಿ ಫಣೀಂದ್ರ ಸುಬ್ರಮಣ್ಯ, ಸಿಇಒ ವಿನು ಕುಮಾರ್ ಹತ್ಯೆಯಾದ ದುರ್ದೈವಿಗಳು. ಮಾಜಿ ಉದ್ಯೋಗಿ ಫೆಲಿಕ್ಸ್ ಹಂತಕನಾಗಿದ್ದಾನೆ.

ಹಂತಕ ಫೆಲಿಕ್ಸ್‌ ಏರೋನಿಕ್ಸ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಪ್ರತ್ಯೇಕವಾಗಿ ಕಂಪನಿ ತೆರೆದಿದ್ದ. ಆದರೆ ಎಂಡಿ ಫಣೀಂದ್ರ, ಸಿಇಒ ವಿನು ಕುಮಾರ್ ಬ್ಯುಸಿನೆಸ್‌ಗೆ ಅಡ್ಡ ಬರುತ್ತಾರೆ ಎಂದು ಭಾವಿಸಿದ್ದ. ತನ್ನ ಹೊಸ ಬ್ಯುಸಿನೆಸ್‌ಗೆ ಅಡ್ಡಿಯಾಗಿರುವ ಇವರಿಬ್ಬರನ್ನು ಕೊಂದು ಹಾಕುವ ನಿರ್ಧಾರಕ್ಕೆ ಬಂದಿದ್ದ.

ಇದನ್ನೂ ಓದಿ | Assault case : ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಕೈ ಕಟ್‌ ಮಾಡಿದ ಗೆಳೆಯರು

ಮಂಗಳವಾರ (ಜು.11) ಸಂಜೆ 4 ಗಂಟೆ ಸುಮಾರಿಗೆ ಕಚೇರಿಗೆ ನುಗ್ಗಿದ ಫೆಲಿಕ್ಸ್‌ ತಲ್ವಾರ್‌ನಿಂದ ಫಣೀಂದ್ರ, ವಿನುಕುಮಾರ್ ಮೇಲೆ ದಾಳಿ ಮಾಡಿದ್ದಾನೆ. ಮನಬಂದಂತೆ ಇಬ್ಬರ ಮೇಲೂ ಎರಗಿ ಹತ್ಯೆ ಮಾಡಿ ಪರಾರಿ ಆಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪರಾರಿ ಆಗಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Exit mobile version