Site icon Vistara News

Murder Case | ಖಾರದ ಪುಡಿ ಎರಚಿ ಸರ್ಕಲ್‌ ಮಧ್ಯದಲ್ಲೇ ಅಕ್ಕಿ ವ್ಯಾಪಾರಿಯ ಬರ್ಬರ ಹತ್ಯೆ

bellary murder

ಬಳ್ಳಾರಿ: ಅಕ್ಕಿ ವ್ಯಾಪಾರಿ ಮಂಜುನಾಥ ಎಂಬುವರ ಮೇಲೆ ನಗರದ ರೇಡಿಯೊ ಪಾರ್ಕ್ ಸರ್ಕಲ್‌ನಲ್ಲಿ ಬುಧವಾರ ಮಧ್ಯರಾತ್ರಿ (೨.೧೫ಕ್ಕೆ) ದಾಳಿ ನಡೆದಿದ್ದು, ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆ (Murder Case) ಮಾಡುತ್ತಿರುವ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಜುನಾಥ್(೪೫) ಕಳೆದ ಹಲವು ವರ್ಷಗಳಿಂದ ಅಕ್ಕಿ ವ್ಯಾಪಾರ ಮತ್ತು ರಿಯಲ್ ಎಸ್ಟೇಟ್ ಮಾಡುತ್ತಿದ್ದರು. ವ್ಯಾಪಾರದ ಕಲಹವೇ ಕೊಲೆಗೆ ಕಾರಣವೆನ್ನಲಾಗುತ್ತಿದೆ. ಆದರೆ ಪೊಲೀಸ್‌ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಾಗಿದೆ.

ಮಂಜುನಾಥ್ ರಾತ್ರಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿರುವಾಗ ಇಬ್ಬರು ವ್ಯಕ್ತಿಗಳು ಬಂದು ಕಣ್ಣಿಗೆ ಕಾರದಪುಡಿ‌ ಎರಚಿದ್ದಾರೆ. ಆಗ ಮಂಜುನಾಥ್‌ ಕಣ್ಣು ಉಜ್ಜಿಕೊಳ್ಳುತ್ತಾ ಗಾಡಿಯಿಂದ ಇಳಿದು ಓಡಲು ಆರಂಭಿಸಿದ್ದಾರೆ. ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ಸಿಸಿ ಟಿವಿಯಲ್ಲಿ ಇರುವುದೇನು?
ಇಬ್ಬರು ವ್ಯಕ್ತಿಗಳು ರೇಡಿಯೋ ಪಾರ್ಕ್ ಸರ್ಕಲ್‌ನಲ್ಲಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ಸಮಯದಲ್ಲಿ ಅಲ್ಲಿಗೆ ಮಂಜುನಾಥನನ್ನು ಓರ್ವ ಮಚ್ಚು ಹಿಡಿದುಕೊಂಡು ಓಡಿಸಿಕೊಂಡು ಬರುತ್ತಾನೆ. ಇದನ್ನು ಕಂಡ ಆ ಇಬ್ಬರು ಭಯದಿಂದ ಸ್ಥಳದಿಂದ ಕಾಲ್ಕೀಳುತ್ತಾರೆ.

ಇಬ್ಬರು ವ್ಯಕ್ತಿಗಳಿಂದ ಕೊಲೆ
ಓಡಿಸಿಕೊಂಡು ಬಂದಿರುವ ವ್ಯಕ್ತಿಯು ಮಂಜನಾಥನ ಕೈ ಹಿಡಿದು ಮಚ್ಚಿನಿಂದ ಹೊಡೆಯಲು ಯತ್ನಿಸುತ್ತಾನೆ. ಆಗ ಮಂಜುನಾಥ್ ಸಹ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇನ್ನೊಬ್ಬ ವ್ಯಕ್ತಿ ಕೂಡಲೇ ಓಡಿ ಬಂದಿದ್ದು, ಬಳಿಕ ಇಬ್ಬರೂ ಸೇರಿ ಮಂಜುನಾಥ್‌ ಮೇಲೆ ಮಚ್ಚಿನಿಂದ ಐದಾರು ಏಟು ಬೀಸುತ್ತಾರೆ. ಈ ವೇಳೆ ತಲೆಗೆ ಸಹ ಮಚ್ಚಿನಿಂದ ಹೊಡೆಯಲಾಗಿದ್ದು, ಕೊಲೆಯಾದ ಬಳಿಕ ದುಷ್ಕರ್ಮಿಗಳಿಬ್ಬರು ಪರಾರಿಯಾಗಿದ್ದಾರೆ. ೧.೪೦ ನಿಮಿಷ ಅವಧಿಯ ದೃಶ್ಯವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸಿಸಿ ಟಿವಿಯ ದೃಶ್ಯವು ಪೊಲೀಸರಿಗೆ ಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ‌ ಸೈದುಲಾ ಅಡಾವತ್ ಮತ್ತು ಡಿವೈಎಸ್ಪಿ ಶೇಖರಪ್ಪ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ್ ಸಂಬಂಧಿ
ಕೊಲೆಯಾದ ವ್ಯಕ್ತಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸಂಬಂಧಿಯಾಗಿದ್ದು, ವಿಮ್ಸ್‌ ಶವಾಗಾರಕ್ಕೆ ಶಾಸಕರು ಭೇಟಿ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಹಿಟ್ನಾಳ್‌, ನನಗೆ ಮಂಜು ಸಂಬಂಧಿಯಾಗಿದ್ದು, ಕೂಡಲೇ ಕೊಲೆ ಮಾಡಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಳಿ ಮಾತನಾಡುವುದಾಗಿ ತಿಳಿಸಿದರು.

ಕೊಲೆಯಾದ ಮಂಜುನಾಥ್‌ ಮೇಲಿತ್ತು ಏಳೆಂಟು ಕೇಸ್
ಬಳ್ಳಾರಿ ನಗರದಲ್ಲಿ ಮಂಗಳವಾರ ರಾತ್ರಿ ಮಂಜುನಾಥ ಕೊಲೆ ಅಕ್ಕಿ, ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರು. ಸಹೋದರ ಅಶೋಕ ಕುಮಾರ್‌ ದೂರು ನೀಡಿದ್ದಾರೆ. ಡಿವೈಎಸ್ಪಿ ಶೇಖರಪ್ಪ ಮತ್ತು ಸಿಪಿಐ ವಾಸುಕುಮಾರ್ ಒಳಗೊಂಡ ತಂಡವನ್ನು ರಚನೆ ಮಾಡಲಾಗಿದೆ. ಬೈಕ್‌ನಲ್ಲಿ ಇಬ್ಬರು ಬಂದು ಕೊಲೆ ಮಾಡಿ, ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ತನಿಖೆ ಮಾಡಲಾಗುತ್ತದೆ. ಕೊಲೆಯಾದ ಮಂಜುನಾಥನ ಮೇಲೆ ಏಳೆಂಟು ಬೇರೆ ಬೇರೆ ಕೇಸ್ ದಾಖಲಾಗಿವೆ ಎಂದು ಸೈದುಲಾ ಅಡಾವತ್ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಒದಿ | ಬಳ್ಳಾರಿಯಲ್ಲಿ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ದಾರುಣ ಸಾವು

Exit mobile version