Site icon Vistara News

Murder Case: ಬೆಂಗಳೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ; ಸ್ನೇಹಿತರಿಂದಲೇ ಕೃತ್ಯ!

Bangalore Murder Case

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಕಂ ಸುಪಾರಿ ಕಿಲ್ಲರ್‌ನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಕಮ್ಮನಹಳ್ಳಿ ಓಯೋ ರೂಂ ಬಳಿ ನಡೆದಿದೆ. ದಿನೇಶ್ ಕೊಲೆಯಾದ ರೌಡಿಶೀಟರ್‌. ಏಳು ಜನ ದುಷ್ಕರ್ಮಿಗಳು, ರೌಡಿಶೀಟರ್‌ನ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಜೊತೆಗೆ ಬಂದಿದ್ದ ಸ್ನೇಹಿತರೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಹಣ ಇಲ್ಲ ಎಂದು ಕಾರ್ಡ್ ಕೊಡುವ ಬಗ್ಗೆ ರಿಸೆಪ್ಷನಿಸ್ಟ್ ಜೊತೆ ಸ್ನೇಹಿತರು ಮಾತು ಕತೆ ನಡೆಸುತ್ತಿದ್ದರು. ಈ ವೇಳೆ ಸೋಫಾದಲ್ಲಿ ಕೂತಿದ್ದ ದಿನೇಶ್ ಮೇಲೆ ಏಕಾಏಕಿ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ, ಕೇವಲ ಮೂರು ನಿಮಿಷದಲ್ಲಿ ಕೊಂದು ಹಂತಕರು ಪರಾರಿಯಾಗಿದ್ದಾರೆ.

ಎಣ್ಣೆ ಏಟಲ್ಲಿ ಲಾಂಗ್‌ನಿಂದ ಸ್ನೇಹಿತನ ಕತ್ತು ಸೀಳಿ ಕೊಂದ; ಸಿಕ್ಕಿ ಬಿದ್ದಿದ್ದು ಹೇಗೆ?

ಬೆಂಗಳೂರು: ಹೋಳಿ ಹಬ್ಬದ ಪಾರ್ಟಿಯಲ್ಲಿ ಎಣ್ಣೆ ಕುಡಿದಿದ್ದ ಇಬ್ಬರು ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗೋವಿಂದ ಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ ಮಾಡಿದ ಬಳಿಕ ಸ್ವತಃ ಹಂತಕನೇ ಪೊಲೀಸ್‌ ಠಾಣೆಗೆ ತೆರಳಿ, ಯಾರೋ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾನೆ.

ಗೋರಕ್‌ಪುರ ಮೂಲಕದ ರಾಜಕುಮಾರ್ (36) ಕೊಲೆಯಾದ ವ್ಯಕ್ತಿ. ಕಿಶನ್ ಕುಮಾರ್ ಆರೋಪಿಯಾಗಿದ್ದಾನೆ. ಇಬ್ಬರು ಉತ್ತರ ಪ್ರದೇಶದಿಂದ ಬಂದು ನಾಗವಾರದಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು.

ಮಹಾದೇವ ಎಂಬ ಪೈಂಟಿಂಗ್ ಮೆಸ್ತ್ರಿ ಬಳಿ ರಾಜಕುಮಾರ್ ಕೆಲಸ ಮಾಡುತ್ತಿದ್ದ. ಆತನ ರೂಮ್‌ನಲ್ಲೆ ಆರೋಪಿ ಸಂಜಯ್ ಅಲಿಯಾಸ್ ಕಿಶನ್ ವಾಸವಿದ್ದ. ಹೋಳಿ ಹಬ್ಬದ ಪಾರ್ಟಿಯಲ್ಲಿ ಇಬ್ಬರು ಕುಡಿದು, ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಕಿಶನ್‌ ಲಾಂಗ್‌ನಿಂದ ರಾಜಕುಮಾರ್‌ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ | Assault Case: ಒಳಗೆ ಸೇರಿದರೆ ಗುಂಡು, ಆಟೋ ಚಾಲಕ ಬೆಂಡು! ಬೀದಿಯಲ್ಲಿ ತುಂಡುಡುಗೆ ಯುವತಿಯ ನಡುರಾತ್ರಿ ಡ್ರಾಮಾ

ನಂತರ ಸ್ನೇಹಿತನ ಶವವನ್ನು ನಾಶ ಮಾಡಲು ಮುಂದಾಗಿದ್ದ ಕಿಶನ್, ಕೊನೆಗೆ ತಾನೇ ಪೋಲಿಸ್ ಬಳಿ ಬಂದು ದೂರು ನೀಡಿದ್ದ. ನನ್ನ ಸ್ನೇಹಿತನನ್ನು ಯಾರೋ ಕೊಲೆ ಮಾಡಿದ್ದಾ ಎಂದು ಹೇಳಿದ್ದ. ಆದರೆ, ಪೊಲೀಸರ ವಿಚಾರಣೆ ವೇಳೆ ಕಿಶನ್ ಕೂಡ ಕುಡಿದಿರುವುದು ತಿಳಿದುಬಂದಿದೆ. ಬಳಿಕ ಕೊಲೆಯಾದ ಸ್ಥಳಕ್ಕೆ ಬಂದು ನೋಡಿದಾಗ ಪಾರ್ಟಿ ಮಾಡಿದ ವೇಳೆ ನಡೆದ ಜಗಳದಿಂದ ಕೊಲೆ ನಡೆದಿರುವುದು ಗೊತ್ತಾಗಿದೆ. ಆಗ ಕಿಶನ್ ಹಾಗೂ ಮತ್ತೊಬ್ಬನನ್ನು ತೀವ್ರ ವಿಚಾರಣೆ ಮಾಡಿದಾಗ ಕೊಲೆ ವಿಚಾರ ಬಯಲಾಗಿದೆ.

ಮಹಿಳೆಯನ್ನು ಮನಬಂದಂತೆ ಥಳಿಸಿದ ಬಿಎಂಟಿಸಿ ಕಂಡಕ್ಟರ್ ಅರೆಸ್ಟ್

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಕೇಳಿದ ಮಹಿಳೆಯನ್ನು ಕಂಡಕ್ಟರ್‌ ಮನಬಂದಂತೆ ಥಳಿಸಿರುವ ಘಟನೆ (Assault Case) ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಈ ಬಗ್ಗೆ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಅಮಾನತಾಗಿದ್ದ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನ್ಜಿಲಾ ಇಸ್ಮಾಯಿಲ್ ಹಲ್ಲೆಗೊಳಗಾದ ಮಹಿಳೆ. ನಿರ್ವಾಹಕ ಹೊನ್ನಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಹೊರಟಿದ್ದ ಮಹಿಳೆ, ಬಿಳೇಕಳ್ಳಿ ಬಳಿ ಟಿಕೆಟ್ ಕೇಳಿದ್ದಾಳೆ. ಆ ವೇಳೆ ಕಂಡಕ್ಟರ್ ಕೊಟ್ಟಿರಲಿಲ್ಲ. ಮತ್ತೆ ಡೈರಿ‌ ಸರ್ಕಲ್ ಬಳಿ ಟಿಕೆಟ್ ಕೇಳಿದಾಗ ಗಲಾಟೆಯಾಗಿದೆ. ಈ ವೇಳೆ ಮಹಿಳೆ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸುವ ಮೂಲಕ ಕಂಡಕ್ಟರ್ ಅಟ್ಟಹಾಸ ಮೆರೆದಿದ್ದಾನೆ.

ಇದನ್ನೂ ಓದಿ | Self Harming: ಐಪಿಎಲ್‌ ಬೆಟ್ಟಿಂಗ್‌ನಲ್ಲಿ 1.5 ಕೋಟಿ ಕಳೆದುಕೊಂಡ ಪತಿ; ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಬಿಳೆಕಳ್ಳಿ ಬಳಿ ಬಸ್ ಹತ್ತಿದ್ದ ಮಹಿಳೆಗೆ ಟಿಕೆಟ್ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ಕಂಡಕ್ಟರ್ ಹೇಳಿದ್ದಾನೆ. ಆದರೆ ಎರಡು ಬಸ್ ಸ್ಟಾಪ್ ಹೋದರೂ ಆಧಾರ್ ಕಾರ್ಡ್ ತೋರಿಸಿರಲಿಲ್ಲ. ಸ್ಟೇಜ್ ಮುಕ್ತಾಯ ಆಗುತ್ತೆ ಬೇಗ ಆಧಾರ್ ಕಾರ್ಡ್ ತೋರಿಸಿ, ಇಲ್ಲದಿದ್ದರೆ ಹಣ ಕೊಟ್ಟು ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ಹೇಳಿದ್ದಾನೆ. ಇದರಿಂದ ಮಹಿಳೆ ಕೆಂಡಾಮಂಡಲರಾಗಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಕಂಡಕ್ಟರ್‌ಗೆ ಮಹಿಳೆ ಕಪಾಳ ಮೋಕ್ಷ ಮಾಡಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ಕಂಡಕ್ಟರ್, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ.

ಘಟನೆ ಸಂಬಂಧ ಐಪಿಸಿ 354A ಅಡಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಬೆನ್ನಲ್ಲೇ ಹಲ್ಲೆ ಮಾಡಿದ ನಿರ್ವಾಹಕ ಬಸವರಾಜ್‌ನ ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿತ್ತು. ಡಿಪೋ ನಂಬರ್ 34ಕ್ಕೆ‌ ಸೇರಿದ ಬಸ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಹೀಗಾಗಿ ಕರ್ತವ್ಯದಲ್ಲಿದ್ದ ವೇಳೆ ಕಂಡಕ್ಟರ್‌ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Exit mobile version