ಮಂಡ್ಯ: ಇಲ್ಲಿನ ಮದ್ದೂರು ತಾಲೂಕಿನ ದೇವರಹಳ್ಳಿ ಬಳಿ ದೊಣ್ಣೆಯಿಂದ ಹೊಡೆದು ರೌಡಿ ಶೀಟರ್‌ವೊಬ್ಬನನ್ನು ಆತನ ಸ್ನೇಹಿತರೇ ಕೊಲೆ (Murder Case) ಮಾಡಿರುವ ಘಟನೆ ನಡೆದಿದೆ. ದೊಡ್ಡಅರಸಿನಕೆರೆ ಗ್ರಾಮದ ಅರುಣ್ ಅಲಿಯಾಸ್ ಕಪ್ಪೆ (22) ಕೊಲೆಯಾದ ರೌಡಿ ಶೀಟರ್.
ರಾಜಕೀಯ ವೈಷಮ್ಯವೇ ಕೊಲೆಗೆ ಕಾರಣವೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಶನಿವಾರ (ನ.12) ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ನಡೆಸಲು ಅದೇ ಊರಿನ ಕದಲೂರು ಉದಯ್ ಎಂಬಾತನಿಂದ ಅಲ್ಲಿನ ಯುವಕರು ಹಾಗೂ ಅರುಣ್ ಸ್ನೇಹಿತರು ಹಣ ಪಡೆದಿದ್ದರಂತೆ.
ಆದರೆ, ಕಾರ್ಯಕ್ರಮದಲ್ಲಿ ಮದ್ದೂರು ಶಾಸಕ ತಮ್ಮಣ್ಣ ಹಾಗೂ ಜೆಡಿಎಸ್ ವಕ್ತಾರ ಅರವಿಂದ್ ಫೋಟೊ ಹಾಕಿರಲಿಲ್ಲ ಎನ್ನಲಾಗಿದೆ. ಇದನ್ನು ಅರುಣ್ ಪ್ರಶ್ನೆ ಮಾಡಿದ್ದನಂತೆ. ಈ ಪ್ರಶ್ನೆಯೇ ಕೊಲೆಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಕದಲೂರು ಉದಯ್ ಮುಂದೆ ನಿಂತು ಕೊಲೆ ಮಾಡಿಸಿರುವುದಾಗಿ ಆರೋಪಿಸಿದ್ದಾರೆ.
ದೇವರಾಜ್, ದೊಡ್ಡಯ್ಯ, ಬೆಳ್ಳ, ಅಭಿ, ರಾಗೂಳಿಗಾಗಿ ಎಂಬುವವರು ತಲೆ ಮರೆಸಿಕೊಂಡಿದ್ದು, ಇವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಅರುಣ್‌ನನ್ನು ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅರುಣ್ ಮೃತಪಟ್ಟಿದ್ದಾನೆ.
ಇದನ್ನೂ ಓದಿ | Murder Case | ಜಮೀನಿಗಾಗಿ ಯೋಧರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯ