Site icon Vistara News

Murder Case: ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್‌ ಬರ್ಬರ ಹತ್ಯೆ; ಇದು ಕೊಲೆಗೆ ಪ್ರತೀಕಾರ?

Rowdy sheeter

Rowdy sheeter

ರಾಮನಗರ: ಇಲ್ಲಿನ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಕೆರೆ ಬಳಿ ರೌಡಿ ಶೀಟರ್‌ವೊಬ್ಬನನ್ನು (Rowdy sheeter) ಹತ್ಯೆ ಮಾಡಿ ಮೃತದೇಹವನ್ನು ಬಿಸಾಕಿ ಹೋಗಲಾಗಿದೆ. ಬೆಂಗಳೂರಿನ ಯಲಹಂಕ ನಿವಾಸಿ ಸಂತೋಷ್ (35) ಮೃತ ರೌಡಿಶೀಟರ್ ಆಗಿದ್ದಾನೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ ಸಂತೋಷ್, ಈ ಹಿಂದೆ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ. ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿದ್ದ ಎನ್ನಲಾಗಿದೆ. ಕೊಲೆಗೆ ಪ್ರತೀಕಾರವಾಗಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ನಟೋರಿಯಸ್ ರೌಡಿಶೀಟರ್ ಹತ್ಯೆ

ಬೆಂಗಳೂರಿನ ಜಯನಗರ ಪೊಲೀಸ್‌ ಠಾಣೆಯ ರೌಡಿಶೀಟರ್ ಆಗಿದ್ದ ಅಲ್ಯೂಮಿನಿಯಂ ಬಾಬು ಎಂಬುವವನ ಹತ್ಯೆ ಆಗಿದೆ. ತಮಿಳುನಾಡಿನ ಕೃಷ್ಣಗಿರಿ ಸಮೀಪ ಹತ್ಯೆ ನಡೆದಿದೆ. ಸುರೇಶ್ ಬಾಬು ಅಲಿಯಾಸ್ ಅಲ್ಯೂಮಿನಿಯಂ ಬಾಬು ಹತ್ಯೆಗೀಡಾದ ರೌಡಿಶೀಟರ್ ಆಗಿದ್ದಾನೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ನಟೋರಿಯಸ್ ರೌಡಿಯಾಗಿದ್ದ ಅಲ್ಯೂಮಿನಿಯಂ ಬಾಬು ಕೊಲೆ, ಸುಲಿಗೆ, ಬೆದರಿಕೆ ಹಾಗೂ ದರೋಡೆ ಅಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಬೆಂಗಳೂರು ಬಿಟ್ಟು ತಮಿಳುನಾಡು ಕಡೆ ವಾಸ್ತವ್ಯ ಬದಲಿಸಿದ್ದ. ತಿಲಕ್ ನಗರದ ಜಲ್ಲಿ ವೆಂಕಟೇಶ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅಲ್ಯೂಮಿನಿಯಂ ಬಾಬುನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇಗ್ಗಲೂರು ರೈಲ್ವೆ ಹಳಿ

ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

ಆನೇಕಲ್ ತಾಲೂಕಿನ ಇಗ್ಗಲೂರು ರೈಲ್ವೆ ಹಳಿ ಬಳಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬನಹಳ್ಳಿ ನಿವಾಸಿ ಚಿನ್ನಯ್ಯ ಮೃತ ದುರ್ದೈವಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರೈಲ್ವೆ ಹಳಿಯ ಪಕ್ಕದಲ್ಲಿಯೇ ಬಿದ್ದಿದ್ದ ಮೃತದೇಹವನ್ನು ಗ್ರಾಮಸ್ಥರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೈಯ್ಯಪ್ಪನಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

Exit mobile version