Site icon Vistara News

Murder Case: ಹುಣಸೂರು ಪಟ್ಟಣದಲ್ಲಿ ಜೋಡಿ ಕೊಲೆ, ಕಾವಲುಗಾರರೇ ಮರ್ಡರ್‌

murder at hunsur

#image_title

ಮೈಸೂರು: ಹುಣಸೂರು ಪಟ್ಟಣದಲ್ಲಿ ಇಬ್ಬರು ಕಾವಲುಗಾರರನ್ನು (Security guards murder) ಬರ್ಬರವಾಗಿ ಕೊಲೆ (Murder Case) ಮಾಡಲಾಗಿದೆ. ಹುಣಸೂರಿನ ಸರಸ್ವತಿಪುರಂ ಬಡಾವಣೆಯಲ್ಲಿರುವ ಮಿಸ್ಬಾ ಸಾಮಿಲ್‌ನಲ್ಲಿ ಘಟನೆ ನಡೆದಿದೆ.

ಮರದ ಮಿಲ್‌ನಲ್ಲಿ ನಡೆದ ಈ ಘಟನೆಯಲ್ಲಿ ಕೊಲೆಯಾದವರನ್ನು ನಗರದ ಕಲ್ಕಣಿಕೆ ನಿವಾಸಿ ವೆಂಕಟೇಶ (75), ಷಣ್ಮುಗ (65) ಎಂದು ಗುರುತಿಸಲಾಗಿದೆ. ರಾತ್ರಿ ಯಾವುದೋ ಜಾವದಲ್ಲಿ ಸಾಮಿಲ್‌ ಒಳಗೆ ನುಗ್ಗಿದ ಹಂತಕರು ಈ ಕೊಲೆ ಮಾಡಿದ್ದಾರೆ. ಇಬ್ಬರ ಮೇಲೂ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

ಕೊಲೆಯಾದವರಲ್ಲಿ ವೆಂಕಟೇಶ್‌ ಅವರು ನಿಜವಾದ ಕಾವಲುಗಾರ. ಷಣ್ಮುಖ ಸ್ವಲ್ಪ ಬುದ್ಧಿಮಾಂದ್ಯ ವ್ಯಕ್ತಿಯಾಗಿದ್ದು, ಅಲ್ಲೇ ವೆಂಕಟೇಶ್‌ ಜತೆಯಲ್ಲಿ ಇರುತ್ತಿದ್ದ ಎನ್ನಲಾಗಿದೆ. ಆತನನ್ನು ಎಲ್ಲರೂ ವಾಚ್‌ ಮ್ಯಾನ್‌ ಎಂದೇ ಪರಿಗಣಿಸಿದ್ದರು.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಇದು ಸಾಮಿಲ್‌ನಲ್ಲಿ ಕಳವು ಮಾಡಲು ಬಂದವರ ಕೃತ್ಯವಿರಬಹುದೇ ಅಥವಾ ವೈಯಕ್ತಿಕ ದ್ವೇಷದಿಂದ ನಡೆಸಿರಬಹುದೇ ಎಂಬ ಅವಳಿ ಸಂಶಯಗಳು ಇವೆ.

ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಿದ್ದರೆ ಇಬ್ಬರೂ ಕಾವಲುಗಾರರನ್ನು ಕೊಲೆ ಮಾಡುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧೂರ್ತನ ಅಟ್ಟಹಾಸಕ್ಕೆ ಇಬ್ಬರು ಮಕ್ಕಳ ಮರಣ, ಹೆಂಡತಿ ಗಂಭೀರ

ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ರೌದ್ರಾವತಾರ ತಾಳಿದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಂಡತಿಗೆ ಹೆಂಡತಿಗೆ ಗಂಭೀರ ಗಾಯಗಳಾಗಿವೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲದಲ್ಲಿ ಈ ಘಟನೆ ನಡೆದಿದ್ದು, ಪಾಪಿ ತಂದೆ ತನ್ನಿಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ತೋಟದ ಮನೆಯಲ್ಲಿ ವಾಸವಿದ್ದ ಗುಲ್ಬರ್ಗ ಮೂಲದ ಕುಟುಂಬದೊಳಗಿನ ಕಲಹ ಸಾವಿನಲ್ಲಿ ಅಂತ್ಯವಾಗಿದೆ.

ಅಪ್ಪನಿಂದಲೇ ಕೊಲೆಯಾದ ಪುಟ್ಟ ಮಕ್ಕಳು

ಶ್ರೀಕಾಂತ್‌ ಎಂಬ ದುಷ್ಟನೇ ಈ ಕೊಲೆ ಮಾಡಿದವನು. ಆದರ್ಶ(04), ಅಮೂಲ್ಯ(03) ದಾರುಣ ಸಾವು ಕಂಡ ಕಂದಮ್ಮಗಳು. ಹೆಂಡತಿ ಲಕ್ಷ್ಮಿ(23) ಮಾರಣಾಂತಿಕ ಗಾಯಗಳೊಂದಿಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸುತ್ತಿಗೆಯಿಂದ ಹೆಂಡತಿ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಶ್ರೀಕಾಂತ್‌ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಮಾರಣಾಂತಿಕ ಹಲ್ಲೆಯಿಂದ ಎರಡು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈತನ ಈ ರೌದ್ರಾವತಾರಕ್ಕೆ ಕಾರಣ ಏನು ಎನ್ನುವುದು ಗೊತ್ತಾಗಲಿಲ್ಲ. ಕೌಟುಂಬಿಕ ಕಲಹದ ಹಿನ್ನೆಲೆ ಗೊತ್ತಾಗಬೇಕಾಗಿದೆ. ಆದರೆ, ಅಮಾಯಕ ಪುಟ್ಟ ಮಕ್ಕಳು ಇವರ ಜಗಳದಲ್ಲಿ ಹೆಣವಾಗಿದ್ದಾರೆ.

ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಚಾಕಲೇಟ್‌ ಕೊಡಿಸುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ

ರಾಯಚೂರು: ಚಾಕಲೇಟ್‌ ಕೊಡಿಸುವುದಾಗಿ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ಸಿಂಧನೂರು ತಾಲೂಕಿನ ಆರ್.ಎಚ್ ಕ್ಯಾಂಪ್ 3ರಲ್ಲಿ ಘಟನೆ ನಡೆದಿದೆ. 11 ವರ್ಷದ ಬಾಲಕಿಯ ಮೇಲೆ ಸಪನ್ ಮಂಡಲ್ (52) ಎಂಬ ಕಾಮುಕ ಅತ್ಯಾಚಾರ ಎಸಗಿದ್ದಾನೆ.

ಬಾಲಕಿಯ ಮನೆಯ ಪಕ್ಕದಲ್ಲೇ ವಾಸವಿದ್ದ ಆರೋಪಿ ಚಾಕಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದಿದ್ದ. ಸ್ಕೂಟರ್‌ನಲ್ಲಿ ಕರೆದೊಯ್ದು, ಊರ ಹೊರಗಿನ ಜಮೀನಿನಲ್ಲಿ ಅತ್ಯಾಚಾರ ಎಸಗಿದ್ದ. ಬಾಲಕಿ ಕಣ್ಣೀರು ಹಾಕುತ್ತಾ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ.

ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುವ ಸಂತ್ರಸ್ತ ಬಾಲಕಿಯ ಪೋಷಕರಿಂದ ಸಪನ್ ಮಂಡಲ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲು ಬಳಿಕ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಪ್ರವಾಸಿ ತಾಣ ದೇವರಮನೆ ಗುಡ್ಡದಲ್ಲಿ ಹೆಣ; ಗಾಂಜಾ ಗ್ಯಾಂಗ್‌ನಿಂದ ಕೊಲೆ

Exit mobile version