ಬೆಳಗಾವಿ: ಎಂದಿನಂತೆ ಶಾಲೆಗೆ ಹೋಗಿ ಸಂಜೆಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಆತನನ್ನು ಭೀಕರವಾಗಿ ಕೊಲೆ ಮಾಡಿ ಮುಚ್ಚಂಡಿ ಗ್ರಾಮದ ಹೊರವಲಯದಲ್ಲಿ ಶವ ಬಿಸಾಡಿ ಹೋಗಲಾಗಿದೆ. ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ (Murder Case) ನಡೆದಿದೆ.
ಶಿವಾಜಿ ನಗರ ನಿವಾಸಿ ಪ್ರಜ್ವಲ್ ಶಿವಾನಂದ ಕರಿಗಾರ (16) ಕೊಲೆಯಾದ ಬಾಲಕ. ಪ್ರಜ್ವಲ್ ಬೆನ್ನಿಗೆ ಮಾರಕಾಸ್ತ್ರದಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಬುಧವಾರ ರಾತ್ರಿ ಕೊಲೆ ಮಾಡಿ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ. ಬೆಳಗಾವಿಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಶಾಲಾ ಸಮವಸ್ತ್ರದಿಂದ ಗುರುತು ಪತ್ತೆ ಮಾಡಲಾಗಿದೆ.
ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಅರೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಂತಕರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ | ಚಲಿಸುತ್ತಿದ್ದ ಕಾರಿಗೆ ಅಡ್ಡ ಬಂದ ಕುದುರೆ ಸಾವು: ಅಪಘಾತದಲ್ಲಿ ಕೃಷಿ ಅಧಿಕಾರಿಗೆ ಗಾಯ
ಸಿಸಿ ಕ್ಯಾಮೆರಾದಲ್ಲಿ ಸೆರೆ
ಶಾಲೆ ಹೊರ ಭಾಗದಲ್ಲಿನ ರಸ್ತೆ ಮೇಲಿದ್ದ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪ್ರಜ್ವಲ್ ಯಾರದ್ದೋ ಬೈಕ್ ಮೇಲೆ ಪ್ರಜ್ವಲ್ ಹೋಗಿದ್ದು, ಆತನನ್ನು ಮುಚ್ಚಂಡಿ ಗ್ರಾಮದ ಹೊರ ವಲಯಕ್ಕೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಆತನನ್ನು ಅರೆಬೆತ್ತಲೆಗೊಳಿಸಿ ಎಲ್ಲೆಂದರಲ್ಲಿ ಚಾಕುವಿನಿಂದ ಇರಿದು, ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದುಷ್ಕರ್ಮಿಗಳು ಗೋಕಾಕ್ ಮಾರ್ಗವಾಗಿ ಎಸ್ಕೇಪ್ ಆಗಿದ್ದಾರೆ. ಈಗ ಆರೋಪಿಗಳ ಶೋಧ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.