Site icon Vistara News

Murder Case: ಕುಡಿದು ಟೆಕ್ಕಿಗಳ ರಂಪಾಟ; ಸೌಂಡ್‌ ಹೆಚ್ಚಾಯ್ತು ಅಂತ ಪ್ರಶ್ನೆ ಮಾಡಿದವನನ್ನೇ ಬಡಿದು ಕೊಂದರು

Murder Case updates Rampage of Drunken Techies man who questioned him about the noise was beaten to death

ಬೆಂಗಳೂರು: ರಾಜಧಾನಿಯಲ್ಲಿ ಕೆಲವು ಕಡೆ ಟೆಕ್ಕಿಗಳ ಪುಂಡಾಟ ಮಿತಿಮೀರಲಿದ್ದು, ಆಡಿದ್ದೇ ಆಟ ಎಂಬಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಈಗ ಬೆಂಗಳೂರಿನ ಎಚ್‌ಎಎಲ್‌ ಬಳಿಯ ವಿಜ್ಞಾನ ನಗರದಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ ಟೆಕ್ಕಿಗಳ ತಂಡ ದೊಡ್ಡದಾಗಿ ಸೌಂಡ್‌ ಹಾಕಿದ್ದನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಬಡಿದು ಕೊಂದಿರುವ (Murder Case) ಘಟನೆ ನಡೆದಿದೆ.

ಈ ಘಟನೆ ಏಪ್ರಿಲ್‌ 2ರಂದು ರಾತ್ರಿ ನಡೆದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಏ.4) ರಾತ್ರಿ ಮೃತಪಟ್ಟಿದ್ದಾರೆ. ಲಾಯಿಡ್ ನೇಮಯ್ಯ ಹಲ್ಲೆಯಿಂದ ಮೃತಪಟ್ಟಿರುವ ವ್ಯಕ್ತಿ.

ಏನಿದು ಪ್ರಕರಣ?

ಎಚ್‌ಎಎಲ್‌ ಬಳಿಯ ವಿಜ್ಞಾನ ನಗರದಲ್ಲಿ ಟೆಕ್ಕಿಗಳ ತಂಡವೊಂದು ವಾಸವಾಗಿದ್ದು, ಸದಾ ಕಿರಿಕಿರಿ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಎಲ್ಲರೂ ಒಡಿಶಾ ಮೂಲದವರಾಗಿದ್ದು, ರಾತ್ರಿಯಾಗುತ್ತಿದ್ದಂತೆ ಕುಡಿದು ಕುಪ್ಪಳಿಸುವುದಲ್ಲದೆ, ದೊಡ್ಡ ಮಟ್ಟದಲ್ಲಿ ಹಾಡನ್ನು ಹಾಕಿ ಸುತ್ತಮುತ್ತಲ ಜನಕ್ಕೆ ಕಿರಿಕಿರಿಯನ್ನು ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Border Dispute: ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ವಿಮೆ ಜಾರಿ ಮಾಡಬೇಕಾಗುತ್ತದೆ ಹುಷಾರ್‌ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಇದೇ ವೇಳೆ ಏಪ್ರಿಲ್‌ 2ರಂದು ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಟೆಕ್ಕಿಗಳು, ಜೋರಾಗಿ ಹಾಡು ಹಾಕಿದ್ದರು. ಇದಕ್ಕೆ ಲಾಯಿಡ್‌ ನೇಮಯ್ಯ ಅವರು ಸೌಂಡ್ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು. ಮನೆಯಲ್ಲಿ, ಸುತ್ತಮುತ್ತ ವಯಸ್ಸಾದವರು ಇದ್ದಾರೆ ಎಂದು ಹೇಳಿದ್ದರು.

ಇದರಿಂದ ರೊಚ್ಚಿಗೆದ್ದ ಮೂವರು ಯುವಕರ ಗುಂಪು ಸ್ವಲ್ಪ ಸಮಯದ ನಂತರ ಮತ್ತೆ ಮನೆಗೆ ಬಂದು ನೇಮಯ್ಯ ಅವರ ಮನೆಗೆ ನುಗ್ಗಿ ಅವರನ್ನು ಎಳೆದುಕೊಂಡು ಹೊರಬಂದಿದೆ. ಬಳಿಕ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.

ನೇಮಯ್ಯ ಅವರನ್ನು ಎಳೆದಾಡಿ, ನೆಲಕ್ಕೆ ಕೆಡವಿ ಹೊಡೆದಿರುವ ಪುಂಡರು, ಅವರ ಶರ್ಟ್‌ ಅನ್ನು ಹರಿದುಹಾಕಿದ್ದಾರೆ. ಅಲ್ಲದೆ, ಅಲ್ಲಿ ನೇಮಯ್ಯ ಮನೆಯವರು ಬಿಟ್ಟುಬಿಡುವಂತೆ ಕೇಳಿಕೊಂಡರೂ ಬಿಡದೆ, ಹಿಂದಿಯಲ್ಲಿ ನಿಂದಿಸಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ನೇಮಯ್ಯ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

ಆದರೆ, ಈ ವೇಳೆ ಸ್ಥಳೀಯರು ಯಾರೂ ಸಹ ನೆರವಿಗೆ ಬಂದಿಲ್ಲ. ಇದೇ ವೇಳೆ ಮಹಿಳೆಯೊಬ್ಬರು ಮಹಡಿ ಮೇಲಿಂದಲೇ ವಿಡಿಯೊ ಮಾಡಿಕೊಂಡಿದ್ದಾರೆ. ಆಗ ಅವರನ್ನು ಬಿಟ್ಟುಬಿಡಿ, ಇಲ್ಲದಿದ್ದರೆ ಪೊಲೀಸರಿಗೆ ಕರೆ ಮಾಡುತ್ತೇನೆ ಎಂದು ಮಹಿಳೆ ಹೇಳಿದ್ದಾರೆ. ಅದಕ್ಕೆ ಮಹಿಳೆಗೂ ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Kichcha Sudeep: ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ, ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ: ಪ್ರಕಾಶ್‌ ರಾಜ್‌

ಹಲ್ಲೆ ಮಾಡಿ ಬಿಟ್ಟು ಹೋದ ಬಳಿಕ ನೇಮಯ್ಯ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಎಚ್ಎಎಲ್‌ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಹಲ್ಲೆ ಕೇಸ್ ದಾಖಲು ಮಾಡಿಕೊಂಡಿದ್ದರು. ಆದರೆ, ಆರೋಪಿಗಳು ಪರಾರಿಯಾಗಿದ್ದರು. ಆದರೆ, ನೇಮಯ್ಯ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಈಗ ನೇಮಯ್ಯ ಅವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೊಲೆ ಕೇಸ್‌ ದಾಖಲು ಮಾಡಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

Exit mobile version