ಬೆಳಗಾವಿ: ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದ ಪೂಲ್ ಬಳಿ ಸೋಮವಾರ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ ಎಂದೇ ಭಾವಿಸಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಅಪಘಾತ ಅಲ್ಲ, ಕೊಲೆ ಎಂಬುದನ್ನು ಸಾಬೀತು ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕೊಲೆಯ (Murder Case) ಹಿಂದೆ ಮೃತನ ಪತ್ನಿ ಹಾಗೂ ಪ್ರಿಯಕರ ಇದ್ದಾರೆಂಬ ಅಂಶವೂ ಬಹಿರಂಗಗೊಂಡಿದೆ.
ಪ್ರಿಯಕರನ ಜತೆ ಸೇರಿ ಗಂಡನ ಕೊಲೆ ಮಾಡಿದ್ದ ಮಹಿಳೆಯನ್ನು ಕಟಕೋಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸೂರು ಗ್ರಾಮದ ಪೂಲ್‌ವೊಂದರಲ್ಲಿ ಅದೇ ಗ್ರಾಮದ ಪಾಂಡಪ್ಪ ಜಟಕನ್ನವರ ಎಂಬುವವರ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಅಪಘಾತವೆಂದೇ ಕಾಣಿಸುತ್ತಿತ್ತು. ಪೊಲೀಸರು ಕೇವಲ ಆರೇ ಗಂಟೆಯಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಹೊಸೂರು ಪೂಲ್ ಬಳಿ ಸೋಮವಾರ (ಸೆ.19) ಪಾಂಡಪ್ಪ ಜಟಕನ್ನವರ (35) ಮೃತದೇಹ ಪತ್ತೆಯಾಗಿತ್ತು. ಅಪಘಾತವಾಗಿದೆ ಎಂದೇ ಬಿಂಬಿಸಲಾಗಿತ್ತು. ಆದರೆ, ತನಿಖೆಗೆ ಇಳಿದ ಪೊಲೀಸರಿಗೆ ಪತ್ನಿ ಹಾಗೂ ಆಕೆಯ ಪ್ರಿಯಕರನಿಂದಲೇ ಪಾಂಡಪ್ಪನ ಕೊಲೆಯಾಗಿರುವುದು ತಿಳಿದು ಬಂದಿತ್ತು.
ಕೃಷಿ ಉಪಕರಣ ಬಳಸಿ ಪತಿಯ ಹತ್ಯೆ
ಹೊಸೂರು ಗ್ರಾಮದ ರಮೇಶ್ ಬಡಿಗೇರ ಜತೆಗೆ ಲಕ್ಷ್ಮಿ ಸಲುಗೆ ಹೊಂದಿದ್ದಳು. ಆಕೆಯ ವರ್ತನೆಗೆ ಪತಿ ಪಾಂಡಪ್ಪ ಜಟಕನ್ನವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಗಂಡ ಹೆಂಡತಿಯರ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಕಳೆದ ಭಾನುವಾರ ರಾತ್ರಿಯೂ ಪಾಂಡಪ್ಪ-ಲಕ್ಷ್ಮಿ ಜಗಳವಾಗಿದ್ದು, ಈ ವಿಷಯವನ್ನು ರಮೇಶ್‌ಗೆ ಮುಟ್ಟಿಸಿದ್ದಳು. ವಿಷಯ ತಿಳಿದ ರಮೇಶ್ ಮನಗೆ ದೌಡಾಯಿಸಿದ್ದಾನೆ. ಆಗ ರಮೇಶ್ ಬಡಿಗೇರ, ಪಾಂಡಪ್ಪ ಮಧ್ಯೆ ಜಗಳ ವಿಕೋಪಕ್ಕೆ ತಿರುಗಿದೆ.
ಹಿಂದಿನಿಂದ ಬಂದ ಲಕ್ಷ್ಮೀ, ಕೃಷಿ ಉಪಕರಣದಿಂದ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪಾಂಡಪ್ಪ ಮೃತಪಟ್ಟಿದ್ದಾರೆ. ಯಾರಿಗೂ ತಿಳಿಯದಂತೆ ಕಿರು ಸೇತುವೆ ಬಳಿ ಮೃತದೇಹವನ್ನು ಆರೋಪಿಗಳು ಬೈಕ್ ಸಮೇತ ಎಸೆದು, ಅಪಘಾತ ಎಂಬಂತೆ ಬಿಂಬಿಸಿದ್ದಾರೆ. ಆದರೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು 6 ಗಂಟೆಯಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ತನಗೆ ಏನೂ ಗೊತ್ತಿಲ್ಲದ ರೀತಿ ಮನೆಗೆ ವಾಪಸ್ ಆಗಿದ್ದ ಲಕ್ಷ್ಮಿ, ಮಾರನೇ ದಿನ ಗಂಡ ಮನೆಗೆ ಮರಳಿಲ್ಲ ಎಂದು ನಾಟಕವಾಡಿದ್ದಳು. ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು. ಪಾಂಡಪ್ಪ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ಬೆಚ್ಚಿಬಿದ್ದ ಹೊಸೂರ ಗ್ರಾಮಸ್ಥರು, ಕಟಕೋಳ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರಿಗೆ ಪಾಂಡಪ್ಪನ ಪತ್ನಿ ನಡವಳಿಕೆಯಲ್ಲಿ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಇದನ್ನೂ ಓದಿ | ಲೇಡಿ ಕಾನ್ಸ್‌ಟೆಬಲ್ ಕೊಲೆಗೆ ಟ್ವಿಸ್ಟ್; ಪೊಲೀಸಪ್ಪನ ಮೇಲೆ ಇಬ್ಬರ ಕಣ್ಣು, ಸುಪಾರಿ ಕೊಟ್ಟವಳು ರಾಣಿ ಕಾನ್ಸ್‌ಟೆಬಲ್