ಬೆಳಗಾವಿ: ಬೆಳಗಾವಿ ಜಿಲ್ಲೆಯ (Belagavi news) ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ (Banasiddeshwara temple) ಸೋಮವಾರ ಹೆಂಡತಿಯ ಕಣ್ಣೆದುರೇ ಗಂಡನನ್ನು ಬರ್ಬರವಾಗಿ ಕೊಲೆ (Husbands murder in front of wife) ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಪೊಲೀಸ್ ತನಿಖೆ ಸಾಗುತ್ತಿರುವ ದಾರಿ ನೋಡಿದರೆ ಜತೆಗಿದ್ದ ಹೆಂಡತಿಯೇ ಕೊಲೆಗೆ ಮುಹೂರ್ತವಿಟ್ಟಂತೆ ಕಾಣಿಸುತ್ತಿದೆ. ಯಾಕೆಂದರೆ, ಆಕೆಯ ಗಂಡನನ್ನು ಕೊಂದವನು ಸ್ವತಃ ಆಕೆಯ ಮಾಜಿ ಪ್ರಿಯಕರ!
ಹೌದು. ಅಮಾವಾಸ್ಯೆ ದಿನವಾದ ಸೋಮವಾರ (ಜುಲೈ 17) ಮುಂಜಾನೆ ದೇವಸ್ಥಾನಕ್ಕೆ ಬಂದಿದ್ದ ಶಂಕರ್ ಸಿದ್ದಪ್ಪ ಜಗಮುತ್ತಿ ಎಂಬ 25 ವರ್ಷದ ಯುವಕನ ಕೊಲೆಯ ತನಿಖೆ ಈಗ ಆತನ ಮುಂದೆ ಕೊರಳೊಡ್ಡಿ ಕರಿಮಣಿ ಸರ ಕಟ್ಟಿಸಿಕೊಂಡಿದ್ದ ಪತ್ನಿ ಪ್ರಿಯಾಂಕಾಳ ಕೊರಳಿಗೆ ಬರುವಂತೆ ಕಾಣುತ್ತಿದೆ.
ದೇವಸ್ಥಾನದ ಮುಂದೆ ಆ ಕೊಲೆ ನಡೆದಿದ್ದು ಹೀಗೆ!
ಪ್ರಿಯಾಂಕಾ ಮತ್ತು ಶಂಕರ ಸಿದ್ದಪ್ಪನಿಗೆ ಮದುವೆಯಾಗಿ ಜುಲೈ 19ಕ್ಕೆ ಮೂರು ತಿಂಗಳು. ಈ ನಡುವೆ ಭಾನುವಾರ (ಜುಲೈ 16)ದಂದು ಪ್ರಿಯಾಂಕಾಳ ಹುಟ್ಟುಹಬ್ಬವಿತ್ತು. ಶಂಕರನೇ ಮುಂದೆ ನಿಂತು ಹುಟ್ಟುಹಬ್ಬದ ಸಂಭ್ರಮ ಆಚರಿಸಿದ್ದ. ಬೆಳಗ್ಗೆ ಎದ್ದು ಅವರಿಬ್ಬರೂ ಬೈಕ್‌ನಲ್ಲಿ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ.
ಶಂಕರ ಪ್ರಿಯಾಂಕಾಳನ್ನು ದೇವಸ್ಥಾನದ ಮುಂದೆ ಇಳಿಸಿ ಬೈಕ್ ಪಾರ್ಕ್ ಮಾಡಲೆಂದು ಹೋಗಿದ್ದ. ಅಷ್ಟು ಹೊತ್ತಿಗೆ ಯಾರೋ ಒಬ್ಬ ಆತನ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಪ್ರಿಯಾಂಕಾ ಓಡಿ ಹೋಗಿ ಗಂಡನನ್ನು ಹಿಡಿದುಕೊಂಡಿದ್ದಾಳೆ. ಆದರೆ ಲಾಂಗ್ ಹೊಡೆತಕ್ಕೆ ಶಂಕರ ಅಲ್ಲೇ ಹೆಣವಾಗಿದ್ದಾನೆ.
ಪೊಲೀಸರ ಎಂಟ್ರಿ ಕೊಟ್ಟ ಟ್ವಿಸ್ಟ್
ಸಾವಿರಾರು ಜನರು ಭಕ್ತಿಯಿಂದ ಆರಾಧನೆ ಮಾಡುವ, ಪ್ರತಿನಿತ್ಯ ನೂರಾರು ಮಂದಿ ಬಂದು ಪೂಜಿಸುವ ದೇವಸ್ಥಾನದ ಮುಂದೆ ನಡೆದ ಭೀಕರ ಕೊಲೆಯಿಂದ ಇಡೀ ಗ್ರಾಮವೇ ನಡುಗಿ ಹೋಗಿತ್ತು. ಕೊಲೆಗಾರ ಯಾರು ಎನ್ನುವ ಬಗ್ಗೆ ಜನ ಬಾಯಿಗೊಂದು ಮಾತನಾಡುತ್ತಿದ್ದರು. ಕೊನೆಗೆ ಪೊಲೀಸರು ಎಂಟ್ರಿ ಕೊಟ್ಟರು.
ಘಟನೆಯ ಬಗ್ಗೆ ಪ್ರಿಯಾಂಕಾಳಿಂದ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರಿಗೆ ಕೊಲೆ ಮಾಡಿದ್ದು ಯಾರು ಎನ್ನುವುದು ಸ್ಪಷ್ಟವಾಗಿ ಹೋಗಿತ್ತು. ದೇವಸ್ಥಾನದ ಮುಂದೆ ಲಾಂಗ್ ಬೀಸಿ ಪ್ರಾಣವನ್ನು ಉರುಳಿಸಿ ಪರಾರಿಯಾಗಿದ್ದ ಕಿರಾತಕನನ್ನು ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಬಂಧಿಸಿ ಕರೆತಂದಿದ್ದರು. ಅವನು ಹೇಳಿದ ಕಥೆ ಕೇಳಿದ ಮೇಲೆ ಘಟನೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಹಾಗಿದ್ದರೆ ಕೊಲೆಗಾರ ಯಾರು?
ಪ್ರಿಯಾಂಕಾ ಮತ್ತು ಶಂಕರ ದೇವಸ್ಥಾನಕ್ಕೆ ಬರುವುದನ್ನು ಕಾದು ಕುಳಿತು, ಶಂಕರ ಬೈಕ್ ನಿಲ್ಲಿಸುವತ್ತ ಹೋಗುವ ಸಮಯವನ್ನು ಸಾಧಿಸಿ ಮಚ್ಚು ಬೀಸಿ ಕೊಲೆ ಮಾಡಿದವನು ಬೇರೆ ಯಾರೂ ಅಲ್ಲ. ಅವನು ಶ್ರೀಧರ ಅರ್ಜುನ ತಳವಾರ. 22 ವರ್ಷದ ಈ ಹುಡುಗನಿಗೆ ಶಂಕರನ ಮೇಲೆ ಯಾಕಿಷ್ಟು ದ್ವೇಷ ಎಂದು ವಿಚಾರಿಸಿದಾಗ ಅಲ್ಲೊಂದು ಪ್ರೇಮಕಥೆ ಹೊರಬಂತು.
ಶ್ರೀಧರ ಮತ್ತು ಪ್ರಿಯಾಂಕಾ ಮಧ್ಯೆ ಇತ್ತು ಪ್ರೇಮ
ಕೊಲೆಯ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಶ್ರೀಧರ ತನ್ನ ಮತ್ತು ಪ್ರಿಯಾಂಕಾಳ ನಡುವೆ ಇದ್ದ ಪ್ರೇಮ ಕತೆಯನ್ನು ಬಿಚ್ಚಿಟ್ಟಿದ್ದಾಣೆ. ಅವರಿಬ್ಬರು ಒಂದೇ ಊರಿನವರಾಗಿದ್ದು, ಆರನೇ ಕ್ಲಾಸಿನಲ್ಲಿದ್ದಾಗಲೇ ಇಬ್ಬರ ನಡುವೆ ಸ್ನೇಹ ಹುಟ್ಟಿತ್ತು. ಬಳಿಕ ಅದು ಪ್ರೇಮವಾಗಿ ಬದಲಾಗಿತ್ತು.
ಈ ನಡುವೆ ಮನೆಯವರು ಪ್ರಿಯಾಂಕಾಳ ವಿವಾಹವನ್ನು ಶಂಕರ್ ಜತೆಗೆ ನಿರ್ಧರಿಸಿದ್ದರು. ಪ್ರಿಯಾಂಕಾಳಿಗೂ ಶ್ರೀಧರನ ಮೇಲೆ ಮನಸ್ಸಿದ್ದರೂ ಮನೆಯವರ ಮಾತನ್ನು ಮೀರಲಾಗದೆ ಮದುವೆಗೆ ಒಪ್ಪಿದ್ದಳು.
ಈ ನಡುವೆ, ಪ್ರಿಯಾಂಕಾಳನ್ನು ಮದುವೆ ಮಾಡಿಕೊಳ್ಳಬೇಡ, ಅವಳು ನನಗೆ ಬೇಕು ಎಂದು ಎಂದು ಶ್ರೀಧರ ಶಂಕರ್ ಮುಂದೆ ಮನವಿ ಮಾಡಿದ್ದ ಎನ್ನಲಾಗಿದೆ. ಆದರೆ, ಶ್ರೀಧರನ ಮಾತನ್ನು ಧಿಕ್ಕರಿಸಿ ಶಂಕರ ಪ್ರಿಯಾಂಕಾಳನ್ನು ವರಿಸಿದ್ದ. ಆವತ್ತಿನಿಂದಲೇ ಶ್ರೀಧರ ಕತ್ತಿ ಮಸೆಯುತ್ತಿದ್ದ.
ಭಾನುವಾರ ಬೆಳಗ್ಗೆ ಶಂಕರ ದೇವಸ್ಥಾನಕ್ಕೆ ಬರುವ ಸಮಯವನ್ನೇ ಕಾದು ಕುಳಿತು ಶ್ರೀಧರ ಬರ್ಬರವಾಗಿ ಕೊಲೆ ಮಾಡಿದ್ದಾನೆ. ತನ್ನ ಪ್ರೇಯಸಿಯನ್ನು ಮದುವೆಯಾದ ದ್ವೇಷವನ್ನು ತೀರಿಸಿಕೊಂಡಿದ್ದಾನೆ.
ಹಾಗಿದ್ದರೆ ಮಾಹಿತಿ ಕೊಟ್ಟದ್ದು ಯಾರು?
ಪ್ರಿಯಾಂಕಾಳ ಗಂಡ ಶಂಕರ್ ಸೋಮವಾರ ಬೆಳಗ್ಗೆ ಇಷ್ಟೇ ಹೊತ್ತಿಗೆ ದೇವಸ್ಥಾನಕ್ಕೆ ಬರುತ್ತಾನೆ ಎಂಬ ಮಾಹಿತಿಯನ್ನು ಶ್ರೀಧರನಿಗೆ ಕೊಟ್ಟಿದ್ದು ಯಾರು? ಅವನು ಅಷ್ಟೇ ಹೊತ್ತಿಗೆ ಅಲ್ಲಿ ಕಾದು ನಿಲ್ಲಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ ಎಲ್ಲವೂ ಪ್ರಿಯಾಂಕಾ ಸುತ್ತಲೇ ಸುತ್ತತೊಡಗಿದಂತೆ ಕಾಣುತ್ತಿದೆ. ಶ್ರೀಧರರನನ್ನು ಬಿಟ್ಟು ಶಂಕರನನ್ನು ಮದುವೆಯಾದ ಬಳಿಕ ಪ್ರಿಯಾಂಕಾ ತನ್ನ ಹಳೆಯ ಪ್ರಿಯಕರನ ಜತೆಗೆ ಕನೆಕ್ಷನ್ ಹೊಂದಿದ್ದಳಾ? ಅಥವಾ ಶ್ರೀಧರ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಾ? ಎಂಬ ಪ್ರಶ್ನೆಗಳೊಂದಿಗೆ ತನಿಖೆ ಮುಂದುವರಿದಿದೆ.
ಒಂದು ಮೂಲದ ಪ್ರಕಾರ, ಶ್ರೀಧರ ತನ್ನ ಮತ್ತು ಪ್ರಿಯಾಂಕಾ ನಡುವಿನ ಸಂಬಂಧದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಜತೆಗೆ ಮೂರು ದಿನಗಳ ಹಿಂದೆಯೇ ತಾನು ಮತ್ತು ಪ್ರಿಯಾಂಕಾ ಸೇರಿ ಈ ಕೊಲೆಗೆ ಸಂಚು ರೂಪಿಸಿದ್ದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದು ನಿಜವೇ? ಪ್ರಿಯಾಂಕಾ ಬೆದರಿಕೆಗೆ ಒಳಗಾಗಿ ಏನಾದರೂ ಮಾಹಿತಿ ಹಂಚಿಕೊಂಡರೇ ಅಥವಾ ಗಂಡನ ಕೊಲೆಗೆ ತಾನೇ ಮುಹೂರ್ತವಿಟ್ಟರೇ ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬರಬೇಕಾಗಿದೆ. ಆದರೆ, ಶ್ರೀಧರ ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದು ಪ್ರಿಯಾಂಕಾ ಎರಡನೇ ಆರೋಪಿಯಾಗ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಅಂತೂ ಪ್ರೀತಿ ಮತ್ತು ಅದರಿಂದ ಹುಟ್ಟಿದ ದ್ವೇಷ ಒಬ್ಬ ವ್ಯಕ್ತಿಯ ಹತ್ಯೆಗೆ ಕಾರಣವಾಗಿದೆ. ಇಬ್ಬರ ಬದುಕಿಗೆ ಕೊಳ್ಳಿ ಇಟ್ಟಿದೆ ಎನ್ನುವುದು ಸತ್ಯ. ಮೂರು ಕುಟುಂಬಗಳು ಕಣ್ಣೀರಲ್ಲಿ ತೊಳೆಯುವಂತೆ ಮಾಡಿದ್ದೂ ಸತ್ಯ.
ಇದನ್ನೂ ಓದಿ: Attempt Murder Case : ಹೆತ್ತವರಿಂದ ದೂರವಿಟ್ಟು ಡಿವೋರ್ಸ್ ಕೊಡದ ಪತ್ನಿಯ ಆ್ಯಕ್ಸಿಡೆಂಟ್!