Site icon Vistara News

Murder Case | ಯಲಹಂಕ ಕೊಲೆ ಕೇಸ್‌ಗೆ ಟ್ವಿಸ್ಟ್‌; ಆಂಧ್ರದ ಸರ್ಕಾರಿ ಅಧಿಕಾರಿ ವರಿಸಲು ಗಂಡನನ್ನೇ ಕೊಲ್ಲಿಸಿದಳು!

murder case

ಬೆಂಗಳೂರು: ಕಳೆದ ಅಕ್ಟೋಬರ್‌ 22ರಂದು ಯಲಹಂಕದಲ್ಲಿ ವ್ಯಕ್ತಿಯೊಬ್ಬನ ತಲೆ, ಮರ್ಮಾಂಗ ಸೇರಿದಂತೆ ದೇಹದ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder Case) ಮಾಡಿದ್ದ ಪ್ರಕರಣ ಹಿಂದಿನ ಸತ್ಯಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಮೊದಲು ದ್ವೇಷಕ್ಕೆ ನಡೆದಿದ್ದ ಕೊಲೆ ಎಂದು ಭಾವಿಸಲಾಗಿತ್ತು. ಪತ್ನಿ ಇದೊಂದು ಆ್ಯಕ್ಸಿಡೆಂಟ್‌ ಎಂದು ಕತೆ ಕಟ್ಟಿದ್ದಳು. ತನಿಖೆಗಿಳಿದ ಪೊಲೀಸರಿಗೆ ಪ್ರೇಮ ಪುರಾಣಕ್ಕೆ ನಡೆದ ಕೊಲೆ ಎಂದು ತಿಳಿದುಬಂದಿತ್ತು. ಆದರೆ, ಈಗ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ.

ಆಂಧ್ರದ ಸರ್ಕಾರಿ ಅಧಿಕಾರಿಯೊಬ್ಬನನ್ನು ವರಿಸುವ ಸಂಬಂಧ ಆಕೆ ಹಲವರನ್ನು ಬಳಸಿಕೊಂಡು ಕೊಲೆ ಮಾಡಿಸಿರುವ ಸಂಗತಿ ಬಯಲಾಗಿದೆ.

ಏನಿದು ಪ್ರಕರಣ?
ಯಲಹಂಕದಲ್ಲಿ ಅಕ್ಟೋಬರ್‌ 22ರಂದು ರಕ್ತದ ಮಡುವಿನಲ್ಲಿದ್ದ ಚಂದ್ರಶೇಖರ್‌ ಎಂಬುವವರನ್ನು ಪತ್ನಿ ಶ್ವೇತಾ ಆಸ್ಪತ್ರೆಗೆ ದಾಖಲಿಸಿದ್ದಳು. ಆ ವೇಳೆ ಇದು ಅಪಘಾತ ಎಂದು ಹೇಳಿದ್ದಳು. ಚಂದ್ರಶೇಖರ್‌ ಅವರನ್ನು ಗಮನಿಸಿದ ವೈದ್ಯರಿಗೆ ಮೇಲ್ನೋಟಕ್ಕೇ ಇದು ಅಪಘಾತವಲ್ಲ, ಹಲ್ಲೆ ಎಂಬುದು ಗೊತ್ತಾಗಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿ ಚಿಕಿತ್ಸೆ ಮುಂದುವರಿಸಿದ್ದರು. ಆಗ ಆಸ್ಪತ್ರೆಗೆ ಬಂದ ಪೊಲೀಸರು ತನಿಖೆ ನಡೆಸಿದಾಗ, ಅಪಘಾತವಾಗಿದೆ ಎಂದು ಶ್ವೇತಾ ಮೊದಲು ಉತ್ತರಿಸಿದ್ದಾಳೆ. ಅನುಮಾನ ಬಂದು ಪುನಃ ಕೇಳಿದಾಗ ಬೇರೆ ಬೇರೆ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ಸಂಗತಿಯನ್ನು ಶ್ವೇತಾ ಬಾಯಿಬಿಟ್ಟಿದ್ದು, ಕೊಲೆಗೆ ಕಾಲೇಜಿನಲ್ಲಿ ಓದುತ್ತಿದ್ದಾಗ ಲೋಕೇಶ್‌ ಎಂಬಾತನ ಜತೆಗೆ ಆಗಿದ್ದ ಪ್ರೀತಿಯೇ ಕಾರಣ ಎಂಬುದು ತಿಳಿದುಬಂದಿತ್ತು. ಆದರೆ ಈಗ ಗಂಡ ಚಂದ್ರಶೇಖರ್ ಕೊಲೆ ಬಳಿಕ ಸರ್ಕಾರಿ ನೌಕರನ ಮದುವೆ ಆಗುವ ತಯಾರಿಯಲ್ಲಿ ಶ್ವೇತಾ ಇದ್ದಳು ಎಂಬುದು ತಿಳಿದು ಬಂದಿದೆ.

ಚಂದ್ರಶೇಖರ್‌ ಅವರ ಸ್ವಂತ ಅಕ್ಕನ ಮಗಳೇ ಆದ ಶ್ವೇತಾ, ಕುಟುಂಬದವರ ಒತ್ತಾಯಕ್ಕೆ ಮದುವೆ ಆಗಿದ್ದಳು. ಆದರೆ ಆಂಧ್ರದ ಸರ್ಕಾರಿ ಅಧಿಕಾರಿಯನ್ನು ಮದುವೆ ವರಿಸಲು ಗಂಡನನ್ನು ಕೊಲೆ ಮಾಡಿಸಿದ್ದೆ ಎಂಬ ಮಾಹಿತಿಯನ್ನು ಯಲಹಂಕ ಪೊಲೀಸರಿಗೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ. ಚಂದ್ರಶೇಖರ್‌ ಕೊಲೆ ಮಾಡಿಸಲು ಪ್ರಿಯಕರ ಲೋಕೇಶ್‌ ಹಾಗೂ ಆತನ ಸ್ನೇಹಿತ ಸುರೇಶ್‌ನನ್ನು ಬಳಸಿಕೊಂಡಿದ್ದಳು. ಕೊಲೆ ಬಳಿಕ ಲೋಕೇಶ್‌ ಹೇಗೂ ಜೈಲಿಗೆ ಹೋಗುತ್ತಾನೆ. ನಂತರ ತಾನು ಸರ್ಕಾರಿ ನೌಕರನ ಮದುವೆ ಆಗಬಹುದು ಎಂದು ಯೋಚಿಸಿದ್ದಳು ಎಂಬ ಸಂಗತಿ ಈಗ ಬಹಿರಂಗವಾಗಿದೆ.

ಇದನ್ನೂ ಓದಿ | Modi in Bengaluru| ಮೋದಿ ಭೇಟಿ ವೇಳೆ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಬ್ರೇಕ್‌: ಉದ್ಯೋಗಕ್ಕೆ ತೆರಳಲು ಜನರ ಪರದಾಟ

Exit mobile version