Site icon Vistara News

Murder Case | ಹಣದ ವಿಚಾರಕ್ಕೆ ಯುವಕನ ಕಿಡ್ನ್ಯಾಪ್ ಮಾಡಿ ಕೊಲೆ; 9 ತಿಂಗಳ ನಂತರ ಆರೋಪಿಗಳ ಬಂಧನ

Murder Case

ಬೆಂಗಳೂರು: ಒಂಬತ್ತು ತಿಂಗಳ ಹಿಂದೆ ನಡೆದಿದ್ದ ಯುವಕನ ಅಪಹರಣ ಹಾಗೂ ಹತ್ಯೆ ಪ್ರಕರಣದಲ್ಲಿ (Murder Case) ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಣಕಾಸಿನ ವಿಚಾರಕ್ಕೆ ಯುವಕನನ್ನು ಕಿಡ್ನ್ಯಾಪ್‌ ಮಾಡಿದ ಬಳಿಕ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ್ದ ಹಂತಕರು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಆರೋಪಿ ಶರತ್‌

ನಗರದ ಶರತ್ ಕೊಲೆಯಾದ ಯುವಕ. ಕನ್ನಡಪರ ಸಂಘಟನೆ ಮುಖಂಡ ವೆಂಕಟಾಚಲಪತಿ ಹಾಗೂ ಆತನ ಪುತ್ರ ಶರತ್ ಹಾಗೂ ಈತನ ಕೃತ್ಯಕ್ಕೆ ಸಾಥ್ ನೀಡಿದ್ದ ಮಂಜುನಾಥ್, ಶ್ರೀಧರ್, ದನುಷ್ ಎಂಬುವರರು ಬಂಧಿತ ಆರೋಪಿಗಳಾಗಿದ್ದು, ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಹುಡಕಾಟ ನಡೆಯುತ್ತಿದೆ.

ಯುವಕನನ್ನು ಕಿಡ್ನ್ಯಾಪ್ ಮಾಡಿದ್ದ ದುಷ್ಕರ್ಮಿಗಳು ಹಗ್ಗದಿಂದ ಕಟ್ಟಿಹಾಕಿ ಅಮಾನವೀಯವಾಗಿ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್‌ ಆಗಿದ್ದವು. ಈ ವಿಷಯ ಕಬ್ಬನ್ ಪಾರ್ಕ್ ಸಬ್ ಡಿವಿಷನ್ ಎಸಿಪಿಗೂ ತಲುಪಿತ್ತು. ಹೀಗಾಗಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Prahlad Modi | ಬಂಡೀಪುರಕ್ಕೆ ಹೊರಟಿದ್ದ ಮೋದಿ ಸಹೋದರನ ಕುಟುಂಬದ ಕಾರು ಅಪಘಾತ; ಮಗುವಿನ ಕಾಲು ಮೂಳೆ ಕಟ್‌, ಉಳಿದವರು ಪಾರು

ಹತ್ಯೆಯಾದ ಶರತ್ ಎಸ್‌ಸಿ ಎಸ್‌ಟಿ ಅಭಿವೃದ್ಧಿ ನಿಗಮದಿಂದ ಸಿಗುವ ಕೆಲ ಸೌಲಭ್ಯಗಳನ್ನು ಕೊಡಿಸುವುದಾಗಿ ನಂಬಿಸಿ 20 ಲಕ್ಷ ಹಣ ರೂಪಾಯಿ ಪಡೆದು ವಂಚಿಸಿದ್ದ ಎನ್ನಲಾಗಿದೆ. ಈ ಸಂಬಂಧ ಶರತ್ ಬಳಿ ಹಣ ವಾಪಸ್‌ ಕೊಡುವಂತೆ ಕೇಳಿ‌ಕೇಳಿ ಸುಸ್ತಾಗಿದ್ದ ಪ್ರಮುಖ ಆರೋಪಿ ಶರತ್ ಮತ್ತು ಸಹಚರರು, ಮಾರ್ಚ್ ತಿಂಗಳಲ್ಲಿ‌ ಯುವಕನನ್ನು ಅಪಹರಣ ಮಾಡಿದ್ದರು.

ಮೈಸೂರಿನಿಂದ ಬೆಂಗಳೂರಿಗೆ ಬಂದು ಬನಶಂಕರಿ ಬಸ್ ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದಾಗ ಯುವಕನ ಕಿಡ್ನ್ಯಾಪ್ ಮಾಡಲಾಗಿತ್ತು. ಬಳಿಕ ಆತನನ್ನು ನೇರವಾಗಿ ಗೌರಿಬಿದನೂರಿನ ಫಾರ್ಮ್ ಹೌಸ್‌ಗೆ ಆರೋಪಿಗಳು ಕರೆದೊಯ್ದಿದ್ದರು. ಕೋಣೆಯೊಂದರಲ್ಲಿ ಯುವಕನ್ನು ಕೂಡಿ ಹಾಕಿ ನಗ್ನಗೊಳಿಸಿ ಹಲ್ಲೆ ಮಾಡಿ, ಅಷ್ಟು ಸಾಲದೆಂಬಂತೆ ಮರಕ್ಕೆ ನೇತಾಕಿಯೂ ಮನ ಬಂದಂತೆ ಆರೋಪಿಗಳು ಹಲ್ಲೆ ಮಾಡಿದ್ದರು.

ಹಲ್ಲೆ ನಡೆಸಿದ ವೇಳೆ ತೀವ್ರವಾಗಿ ಗಾಯಗೊಂಡು ಶರತ್ ಮೃತಪಟ್ಟಿದ್ದ. ಹೀಗಾಗಿ ಆರೋಪಿಗಳು, ಶವವನ್ನು ಮೂಟೆಯಲ್ಲಿ ತುಂಬಿ ಚಾರ್ಮಾಡಿಘಾಟ್‌ನಲ್ಲಿ ಬಿಸಾಡಿ ವಾಪಸ್ಸಾಗಿದ್ದರು. ಬಳಿಕ ಶರತ್ ಪೋಷಕರಿಗೆ ಮೃತ ಶರತ್ ಫೋನ್‌ನಿಂದಲೇ ಕರೆ ಮಾಡಿದ್ದ ಪ್ರಮುಖ ಆರೋಪಿ ಶರತ್, ನನಗೆ ಸಾಲ ಹೆಚ್ಚಾಗಿದೆ. ನಾನು ಊರು ಬಿಟ್ಟು ಹೋಗುತ್ತಿದ್ದೇನೆ. ಸಮಸ್ಯೆ ಬಗೆಹರಿದ ಮೇಲೆ ಬರುತ್ತೇನೆ ಎಂದು ಫೋನ್ ಸ್ವಿಚ್ ಆಫ್ ಮಾಡಿ ಲಾರಿ ಮೇಲೆ ಎಸೆದಿದ್ದ. ಇದರಿಂದ ಪಾಲಕರು ಮಗ ದುಡಿಯಲು ಹೋಗಿದ್ದಾನೆ ಎಂದು ಆತಂಕವಿಲ್ಲದೆ ಇದ್ದರು.

ಹಲ್ಲೆಯ ದೃಶ್ಯಗಳು ದಿನಕಳೆದಂತೆ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನಿಂದ ಲೀಕ್ ಆಗಿತ್ತು. ಅದು ಒಬ್ಬರಿಂದ ಒಬ್ಬರ ಮೊಬೈಲ್‌ಗೆ ಹರಿದು ಕೊನೆಗೆ ಪೊಲೀಸರ ಕೈ ಸೇರಿತ್ತು. ವಿಡಿಯೊ ನೋಡಿದ ಬಳಿಕ ಪೊಲೀಸರು, ಏನೋ ಆಗಿದೆ ಎಂಬ ಅನುಮಾನದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು, ಪ್ರಕರಣವನ್ನು ಭೇದಿಸಿದ್ದಾರೆ.

ಇದನ್ನೂ ಓದಿ | Lift Crash | ಮೆಡಿಕಲ್‌ ವೇರ್‌ಹೌಸ್‌ನಲ್ಲಿ ಓಪನ್‌ ಲಿಫ್ಟ್‌ ಕುಸಿದು ಕಾರ್ಮಿಕ ಸಾವು, ನಾಲ್ವರು ಗಂಭೀರ

Exit mobile version