ವಿಜಯನಗರ/ ಹುಬ್ಬಳ್ಳಿ : ಕುಡಿತ ಮತ್ತಿನಲ್ಲಿ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲದ ಧೂಳ್ ಪೇಟೆಯಲ್ಲಿ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಶ್ರೀನಿವಾಸ್ ಅಲಿಯಾಸ್ ಮುಕ್ಕಣ್ಣ (24) ಮೃತಪಟ್ಟವರು. ಆಚಾರಿ ವರ್ಮ(23), ಪ್ರತಾಪ್ (25) ಹತ್ಯೆ ಮಾಡಿದ ಆರೋಪಿಗಳು.
ಶನಿವಾರ ಸಂಜೆ ಈ ಮೂವರ ನಡುವೆ ಸಣ್ಣದಾಗಿ ಜಗಳ ನಡೆದಿತ್ತು. ಬಳಿಕ ರಾತ್ರಿಯಾಗುತ್ತಿದ್ದಂತೆ ಪಾನಮತ್ತರಾಗಿದ್ದ ಮೂವರ ನಡುವೆ ಮತ್ತೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಆಚಾರಿ ವರ್ಮ ಮತ್ತು ಪ್ರತಾಪ್ ಸೇರಿ ಶ್ರೀನಿವಾಸ್ ಅಲಿಯಾಸ್ ಮುಕ್ಕಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಹತ್ಯೆಯಾದ ಶ್ರೀನಿವಾಸನ ಸಹೋದರ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿಸಿದ ಪತ್ನಿಯನ್ನೇ ಕೊಂದ ಗಂಡ
ಪತಿಯೊಬ್ಬ ತಾನು ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ (Man kills wife) ಕತ್ತುಹಿಸುಕಿ ಕೊಲೆ ಮಾಡಿ (Murder Case) ಪರಾರಿಯಾಗಿದ್ದ. ಸಾಲದ್ದಕ್ಕೆ ಕೇವಲ 45 ದಿನದ ತನ್ನ ಮಗುವನ್ನು (45 Days old infant) ಆಕೆಯ ಹೆಣದ ಬಳಿ ಬಿಟ್ಟು ಹೋಗಿದ್ದ. ಹುಬ್ಬಳ್ಳಿಯ (Hubballi News) ನೇಕಾರ ನಗರದಲ್ಲಿ ಈ ಭೀಕರ ಕೃತ್ಯ ಜು.3ರಂದು ನಡೆದಿತ್ತು. ಸುಧಾ ಹಿರೇಮಠ (20) ಮೃತ ಮಹಿಳೆ. ಆಕೆಯ ಪತಿ ಶಿವಯ್ಯ ಹಿರೇಮಠ ಹತ್ಯೆ ಮಾಡಿ ಪರಾರಿ ಆಗಿದ್ದವನು ಈಗ ಬಂಧಿಯಾಗಿದ್ದಾನೆ.
ಶಿವಯ್ಯ ಮತ್ತು ಸುಧಾ ಪ್ರೀತಿಸಿ ಮದುವೆಯಾಗಿದ್ದರು. ಶಿವಯ್ಯ ಆಕೆಯನ್ನು ಬೆನ್ನು ಬಿದ್ದು ಮದುವೆ ಮಾಡಿಕೊಂಡಿದ್ದ. ಆದರೆ, ಈ ಮದುವೆಯಲ್ಲಿ ಆಕೆ ನೆಮ್ಮದಿಯನ್ನು ಕಾಣಲೇ ಇಲ್ಲ. ಆದರೆ, ಯಾವತ್ತಾದರೂ ಸರಿ ಹೋಗಬಹುದು ಎಂಬ ನಂಬಿಕೆಯಲ್ಲಿ ಬದುಕಿದ್ದಳು. ಈ ನಡುವೆ ಅವರ ಸಾಂಸಾರಿಕ ಬದುಕಿನಲ್ಲಿ ಪುಟ್ಟ ಮಗುವೊಂದು ಬಂದಿತ್ತು. ಅದು ಬಂದ ಮೇಲಾದರೂ ಬದುಕು ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ಆದರೆ, ಆ ದಿನ ಬರಲೇ ಇಲ್ಲ.
ಭಾನುವಾರ ರಾತ್ರಿ (ಜು.2) ಯಾವುದೋ ವಿಷಯಕ್ಕೆ ಹೆಂಡತಿ ಜತೆ ಜಗಳಕ್ಕಿಳಿದ ಶಿವಯ್ಯ ಆಕೆ ಇನ್ನೂ ಹಸಿ ಹಸಿ ಬಾಣಂತಿ ಎನ್ನುವುದನ್ನೂ ಲೆಕ್ಕಿಸದೆ ಆಕೆಯ ಮೇಲೆ ದಾಳಿ ಮಾಡಿದ್ದ. ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದ. ಇಷ್ಟೆಲ್ಲ ದುಷ್ಕೃತ್ಯ ನಡೆಸುವಾಗ ಒಂದುವರೆ ಪುಟ್ಟ ಮಗು ಅಲ್ಲೇ ಇತ್ತು. ಅಪ್ಪ-ಅಮ್ಮನ ನಡುವೆ ಏನು ನಡೆಯುತ್ತಿದೆ ಎಂದು ಗೊತ್ತಾಗದ ಈ ಪುಟಾಣಿಯನ್ನೂ ಅಲ್ಲೇ ಬಿಟ್ಟ ಧೂರ್ತ ಮನೆಯಿಂದ ಹೊರಬಿದ್ದಿದ್ದ. ಹೊರಗೆ ಬರುವಾಗ ಬಾಗಿಲನ್ನೂ ಹಾಕಿಕೊಂಡಿದ್ದ.
ಇದನ್ನೂ ಓದಿ: Child Labour : ತೆಂಗು ಕಾರ್ಖಾನೆಯಲ್ಲಿ ಬಾಲ ಕಾರ್ಮಿಕರು ಬಂಧಿ; ಮಕ್ಕಳ ಆಯೋಗದಿಂದ ರಕ್ಷಣೆ
ಸೋಮವಾರ ಮುಂಜಾನೆ (ಜು.3) ಮನೆಯೊಳಗಿನಿಂದ ಒಂದೇ ಸಮನೆ ಮಗು ಅಳುತ್ತಿರುವ ಸದ್ದು ಕೇಳಿಬಂದಿತ್ತು. ಅಕ್ಕಪಕ್ಕದವರು ಸ್ವಲ್ಪ ಹೊತ್ತು ನೋಡಿ, ಬಳಿಕ ಬಾಗಿಲನ್ನು ತೆರೆದು ನೋಡಿದಾಗ ಸುಧಾ ಸತ್ತು ಬಿದ್ದಿದ್ದರು. ಮಗು ಆಕೆಯ ಪಕ್ಕದಲ್ಲಿ ಜೋರಾಗಿ ಅಳುತ್ತಾ ಇತ್ತು. ಕೂಡಲೇ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಸಬಾಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಪರಾರಿಯಾದ ಶಿವಯ್ಯನಿಗಾಗಿ ಬಲೆ ಬೀಸಿದ್ದರು.
ಹುಬ್ಬಳ್ಳಿಯಲ್ಲಿ ಪತ್ನಿಯನ್ನು ಕೊಂದು ಪರಾರಿ ಆಗಿದ್ದ ಶಿವಯ್ಯನನ್ನು ಹಾಸನ ಜಿಲ್ಲೆಯ ಅರಸಿಕೇರಿಯಲ್ಲಿ ಬಂಧಿಸಲಾಗಿದೆ. ಕುಡಿತದ ಚಟಕ್ಕೆ ಬಿದ್ದು ಮೈತುಂಬ ಸಾಲಮಾಡಿಕೊಂಡಿದ್ದ. ಸಾಲ ತೀರಿಸುವ ವಿಷಯಕ್ಕೆ ಆಗಾಗ ಇಬ್ಬರ ನಡುವೆಯೂ ಜಗಳ ನಡೆಯುತಿತ್ತು. ಆ ದಿನವೂ ಕೂಡ ಇದೇ ವಿಚಾರಕ್ಕೆ ಜಗಳ ಶುರುವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ