Site icon Vistara News

Murder mystery : ಲವರ್‌ ಜತೆ ಸೇರಿ ಗಂಡನನ್ನೇ ಕೊಂದಳಾ ಹಂತಕಿ; ವಿಷಯ ತಿಳಿದ ಮಗಳ ಹತ್ಯೆಗೂ ಯತ್ನಿಸಿದ ಪಾತಕಿ!

Murder story

ವಿಜಯಪುರ: ಇದೊಂದು ಭಯಾನಕ ಸ್ಟೋರಿ (Horrible story). ಇಲ್ಲೊಬ್ಬ ಹಂತಕಿ ತನ್ನ ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಲೆ (woman kills her husband with paramour) ಮಾಡಿದ್ದಾಳೆ. ಈ ಕೊಲೆಯ ರಹಸ್ಯ ಆರು ತಿಂಗಳವರೆಗೂ ಹೊರಬಾರದಂತೆ ಕಾಪಾಡಿಕೊಂಡಿದ್ದಾಳೆ. ನಡುವೆ ಆಕೆಯ ಮಗಳಿಗೆ ವಿಷಯ ತಿಳಿದಿದೆ ಎಂಬ ಗುಮಾನಿ ಬಂದಾಗ ಆಕೆಯನ್ನೂ ಬಾವಿಗೆ ತಳ್ಳಿ ಕೊಲೆ ಮಾಡಲು (She tried to kill her daughter) ಯತ್ನಿಸಿದ್ದಾಳೆ. ಅಂತೂ ಕೊನೆಗೂ ಆಕೆಯ ಕ್ರೌರ್ಯ, ಅಪರಾಧದ ಒಂದು ಅಧ್ಯಾಯ ಮುಗಿದು ಆಕೆ ಈಗ ಜೈಲುಪಾಲಾಗಿದ್ದಾಳೆ. ಜತೆಗೆ ಅವಳ ಪ್ರಿಯಕರ ಕೂಡಾ.

ಈ ಘಟನೆ ಎಲ್ಲೋ ದೂರದಲ್ಲಿ ನಡೆದಿಲ್ಲ. ನಮ್ಮದೇ ರಾಜ್ಯದ ವಿಜಯಪುರದಲ್ಲಿ. ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ. ಈ ಕಥೆ ಶುರುವಾಗೋದು ಒಂದು ಕೊಲೆಯಿಂದಲ್ಲ, ಪ್ರೇಮ ಕಥೆಯಿಂದಲೂ ಅಲ್ಲ. ಒಂದು ಮಿಸ್ಸಿಂಗ್‌ ಸ್ಟೋರಿಯಿಂದ! ನಂತರ ಅದು ಅಕ್ರಮ ಸಂಬಂಧ, ಕೊಲೆ, ಕ್ರೌರ್ಯದ ನಾನಾ ಹಂತಗಳನ್ನು ದಾಟುತ್ತಾ ಹೋಗುತ್ತದೆ.

ಆವತ್ತು ಫೆಬ್ರವರಿ 23, 2023

ವಿಜಯಪುರ ತಾಲೂಕಿನ ಹೆಡಗಿಬಾಳ ಎಂಬ ಗ್ರಾಮದ ನಿವಾಸಿಯಾಗಿರುವ 40 ವರ್ಷದ ಜಕರಾಯ್‌ ದಳವಾಯಿ ಎಂಬಾತ ಇದ್ದಕ್ಕಿದ್ದಂತೆಯೇ ಕಾಣೆಯಾಗುತ್ತಾನೆ. ಆತನ ಹೆಂಡತಿ ಜಯಶ್ರೀ ತನ್ನ ತವರು ಮನೆಯಾದ ಬಸವನಬಾಗೇವಾಡಿಯಲ್ಲಿದ್ದಳು. ಅವಳನ್ನು ನೋಡಿಬರುತ್ತೇನೆ ಎಂದು ಹೋದವನು ಮರಳಿ ಬರಲೇ ಇಲ್ಲ. ಈ ಘಟನೆ ನಡೆದಿದ್ದು ಫೆಬ್ರವರಿ ತಿಂಗಳ 23ನೇ ತಾರೀಕು.

ಫೆಬ್ರವರಿ 25ರಂದು ತವರು ಮನೆಯಿಂದ ಹೆಡಗಿ ಬಾಳಕ್ಕೆ ಬಂದ ಜಯಶ್ರೀ ನನ್ನ ಗಂಡ ಜಕರಾಯ ಕಾಣಿಸುತ್ತಿಲ್ಲ ಎಂದಿದ್ದಾಳೆ. ಕೆಲಸಕ್ಕೆ ಹೋಗಿ ಬರುತ್ತೇನೆ ಎಂದವನು ಬಂದಿಲ್ಲ ಎಂದು ಹೇಳಿಕೊಂಡಿದ್ದಾಳೆ. ಪೊಲೀಸರಿಗೂ ದೂರು ನೀಡಲಾಗಿತ್ತು. ಅವರೂ ಸ್ವಲ್ಪ ದಿನ ಹುಡುಕಿದರು. ಆಮೇಲೆ ಮರೆತುಬಿಟ್ಟರು. ಹಾಗೆ ಎಲ್ಲ ಕೆಲಸ ಬಿಟ್ಟು ಅವನನ್ನೇ ಹುಡುಕಾಡುವಷ್ಟು ದೊಡ್ಡ ಮನುಷ್ಯ ಜಕರಾಯನೂ ಆಗಿರಲಿಲ್ಲ. ಹೀಗಾಗಿ ಜಕರಾಯನ ಬಗ್ಗೆ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ.

ಕಾಲ ಹೀಗೇ ಕಳೆದು ಆರು ತಿಂಗಳೇ ಆಗಿ ಹೋಗಿದೆ. ಜಕರಾಯ ಎಲ್ಲಿದ್ದಾನೆ ಎನ್ನುವ ವಿಚಾರದಲ್ಲಿ ಹೆಂಡತಿಯೇ ತಲೆ ಕೆಡಿಸಿಕೊಳ್ಳಲಿಲ್ಲ. ಆತನ ಮನೆಯವರೂ ಅಷ್ಟೆ, ಎಲ್ಲಾದರೂ ಇದ್ದರೆ ಬಂದಾನು ಎಂದು ಭಾವಿಸಿ ಸುಮ್ಮನಿದ್ದರು. ಆದರೆ, ಈ ಎಲ್ಲ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡವಳು ಒಬ್ಬಳಿದ್ದಳು. ಅವಳೇ ಜಕರಾಯನ ಮಗಳು!

ಪೊಲೀಸರಿಗೆ ಮಾಹಿತಿ ಕೊಟ್ಟ 12 ವರ್ಷದ ಬಾಲಕಿ

ಎಲ್ಲರೂ ಜಕರಾಯನ ವಿಷಯವನ್ನು ಮರೆತಿರುವಾಗ ಅದೊಂದು ದಿನ ಜಕರಾಯನ 12 ವರ್ಷದ ಮಗಳು ತನ್ನ ತಾಯಿ ಜಯಶ್ರೀ ಅಪ್ಪನನ್ನು ಕೊಲೆ ಮಾಡಿದ್ದಾಳೆ ಎಂಬ ಸ್ಫೋಟಕ ಮಾಹಿತಿಯನ್ನು ಪೊಲೀಸರ ಮುಂದೆ ಬಾಯಿಬಿಟ್ಟಳು. ಆವತ್ತಿನಿಂದ ಮರೆತೇ ಹೋಗಿದ್ದ ಜಕರಾಯ ಮತ್ತೆ ಎದ್ದು ಕುಳಿತ!

ಮಗಳ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆ, ವಿಚಾರಣೆ ಶುರು ಮಾಡಿದರು. ಮೊದಲು ವಿಚಾರಣೆಗೆ ಕರೆದಿದ್ದೇ ಜಕರಾಯನ ಹೆಂಡತಿ ಜಯಶ್ರೀಯನ್ನು! ಆರಂಭದಲ್ಲಿ ಮಗಳು ಏನೇನೋ ಹೇಳುತ್ತಿದ್ದಾಳೆ. ಅವಳಿಗೀಗ ನನ್ನ ಮೇಲೆ ದ್ವೇಷ ಎಂದು ಕಥೆ ಹೆಣೆದ ಜಯಶ್ರೀ ಎರಡನೇ ಹಂತದ ವಿಚಾರಣೆಯ ವೇಳೆ ಇನ್ನೊಂದು ಸ್ಫೋಟಕ ಸಂಗತಿಯನ್ನು ತೆರೆದಿಟ್ಟಳು.

ಅದೇನೆಂದರೆ ಕೊಲೆ ಮಾಡಿದ್ದು ಅವಳೊಬ್ಬಳೇ ಅಲ್ಲ!

ಅವನ ಹೆಸರು ಡೋಂಗ್ರಿ ಸಾಬ್‌. ವಿಚಾರಣೆ ನಡೆಯುತ್ತಿದ್ದಂತೆಯೇ ಈ ಕೊಲೆ ಪ್ರಕರಣದಲ್ಲಿ ಒಂದು ಹೆಸರು ಎಂಟ್ರಿ ಪಡೆದುಕೊಂಡಿದೆ. ಅದುವೇ ಡೋಂಗ್ರಿಸಾಬ್‌! ಜಯಶ್ರೀಗೆ ಆಕೆಯ ಊರಾದ ಬಸವನಬಾಗೇವಾಡಿಯಲ್ಲಿ ಒಬ್ಬ ಪ್ರಿಯಕರನಿದ್ದ. ಆಕೆಯನ್ನು ಹೆಡಗಿ ಬಾಳಕ್ಕೆ ಮದುವೆ ಮಾಡಿಕೊಟ್ಟಿದ್ದರೂ ಅದೂ ಇದೂ ಅನ್ನೋ ಕಾರಣ ಹಿಡಿದುಕೊಂಡು ಆಕೆ ಬಸವನಬಾಗೇವಾಡಿಗೆ ಬಂದು ಹೋಗುತ್ತಲೇ ಇದ್ದಳು. ಯಾಕೆಂದರೆ, ಅವಳಿಗೆ ಗಂಡ ಜಕರಾಯನಿಗಿಂತಲೂ ಡೋಂಗ್ರಿ ಸಾಬನ ಮೇಲೆಯೇ ಹೆಚ್ಚು ಮೋಹ.

ಆವತ್ತು ಫೆಬ್ರವರಿ 23ರಂದು ಜಕರಾಯ ಹೆಂಡತಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಬಸವನಬಾಗೇವಾಡಿಗೆ ಬಂದಿದ್ದನಲ್ಲ. ಆವತ್ತೇ ಅವನ ತಿಥಿಗೆ ಮುಹೂರ್ತವಿಟ್ಟಿದ್ದರು ಪಾತಕಿಗಳು. ಜಕರಾಯನಿಗೆ ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಿತ್ತು. ಕೆಲವೊಮ್ಮೆ ಜಗಳ, ಕೆಲವೊಮ್ಮೆ ಮಾತುಕತೆ ಎಲ್ಲವೂ ಆಗಿತ್ತು. ಇನ್ನು ಡೋಂಗ್ರಿ ಸಾಬನನ್ನು ಬಿಟ್ಟುಬಿಡುತ್ತೇನೆ ಅನ್ನುತ್ತಿದ್ದ ಆಕೆ ನಾಲ್ಕೇ ದಿನದಲ್ಲಿ ಮತ್ತೆ ಅವನನ್ನು ಹುಡುಕಿ ತವರಿಗೆ ಹೊರಡುತ್ತಿದ್ದಳು. ಆವತ್ತು ಆಗಿದ್ದೂ ಅದೇ! ಹಾಗೆ ಬಂದವಳು ಇನ್ನೂ ಮರಳಿ ಬಂದಿಲ್ಲ ಎಂದು ಹುಡುಕಿಕೊಂಡು ಬಂದಿದ್ದಾನೆ ಜಕರಾಯ. ಹಾಗ ಬಂದಾಗ ಜಯಶ್ರೀ ಮತ್ತು ಡೋಂಗ್ರಿ ಸಾಬ್‌ ಇಬ್ಬರೂ ಆತನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ! ಅಷ್ಟಕ್ಕೇ ಬಿಟ್ಟರೆ ಎಲ್ಲರಿಗೂ ಗೊತಾಗುತ್ತದೆ ಎಂದು ಆತನ ದೇಹವನ್ನು ಸುಟ್ಟು ಹಾಕಿ, ಅಂತಿಮವಾಗಿ ಅಳಿದುಳಿದುದನ್ನು ಬಾವಿಯೊಂದರಲ್ಲಿ ಹಾಕಿ ಕೈ ತೊಳೆದುಕೊಂಡಿದ್ದಾರೆ. ಎರಡು ದಿನದ ಬಳಿಕ ಗಂಡ ಕಾಣ್ತಿಲ್ಲ ಎಂಬ ನಾಟಕ ಶುರುವಾಗಿದೆ!

ನಿಜವೆಂದರೆ ದೂರು ಸ್ವೀಕಿರಿಸಿದ ಪೊಲೀಸರಿಗೂ ಆಕೆಯ ಮೇಲೆ ಒಂದು ಕಣ್ಣು ಇದ್ದೇ ಇತ್ತು. ಹಲವು ಬಾರಿ ವಿಚಾರಣೆ ನಡೆಸಿದರೂ ನಾಟಕ ಮಾಡಿ ತಪ್ಪಿಸಿಕೊಂಡಿದ್ದಾಳೆ. ಆದರೆ, ಈ ಕೊಲೆಯ ಕಥೆ ಅದು ಹೇಗೋ 12 ವರ್ಷದ ಮಗಳಿಗೆ ಗೊತ್ತಾಗಿದೆ!

ಇದನ್ನೂ ಓದಿ: Murder Case : ಹೆತ್ತಮ್ಮನನ್ನೇ ಕೊಂದ ಧೂರ್ತ ಮಗ ; ಕುಡಿದ ಮತ್ತಿನಲ್ಲಿ ಕೊಲೆ ಮಾಡಿ ಗದ್ದೆಗೆ ಹೋಗಿ ಮಲಗಿದ್ದ!

ಮಕ್ಕಳನ್ನೇ ಕೊಲ್ಲಲು ಯತ್ನಿಸಿದ್ದ ಜಯಶ್ರೀ

ಮಗಳಿಗೆ ತಾನು ಮಾಡಿದ ಕೃತ್ಯ ಗೊತ್ತಾಗಿದೆ ಎಂಬ ಸಂಗತಿ ಯಾವಾಗ ಅರಿವಿಗೆ ಬಂತೋ ಆಕೆ ಮಗಳನ್ನೂ ಮುಗಿಸಲು ನಿರ್ಧಾರ ಮಾಡಿದ್ದಾಳೆ! ಹೌದು ನಿರ್ಧಾರ ಮಾಡಿದ್ದು ಮಾತ್ರವಲ್ಲ, ಮಗಳು ಹಾಗೂ ಇನ್ನೊಬ್ಬ ಮಗನನ್ನು ಕಲ್ಲು ಕಟ್ಟಿ ಬಾವಿಗೆ ಹಾಕಿ, ಕೊಲ್ಲಲು ಯತ್ನಿಸಿದ್ದಾಳೆ. ಆದರೆ ಕೊಲೆ ಯತ್ನದಿಂದ ಬಚಾವ್‌ ಆದ ಬಾಲಕಿಗೆ ನಾನು ಹೀಗೇ ಇದ್ದರೆ ಅಮ್ಮ ಕೊಲೆ ಮಾಡಿಯೇ ತೀರುತ್ತಾಳೆ ಎಂದು ತಿಳಿದು ಆಕೆ ಪೊಲೀಸರ ಮುಂದೆ ಬಂದು ಅಮ್ಮನ ಅದಷ್ಟೂ ದುಷ್ಕೃತ್ಯಗಳನ್ನು ಬಿಚ್ಚಿಟ್ಟಿದ್ದಾಳೆ.

ಪೊಲೀಸರು ವಿಚಾರಣೆ ನಡೆಸಿ ಆಕೆಯನ್ನು ಈಗ ಜೈಲಿಗೆ ಹಾಕಿದ್ದಾರೆ. ಪ್ರಿಯಕರನಿಗಾಗಿ ಪತಿಯನ್ನೇ ಕೊಂದು ಹಾಕಿದ ಜಯಶ್ರೀಗೆ ಈಗ ಮಗಳೇ ಚೆನ್ನಾಗಿ ಪಾಠ ಕಲಿಸಿದ್ದಾಳೆ. ಈ ಜಗತ್ತಿನಲ್ಲಿ ಎಂಥೆಂಥ ಮನುಷ್ಯರು ಇರುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಜಯಶ್ರೀ ಜೈಲಿನಲ್ಲಿದ್ದಾಳೆ.

Exit mobile version