ಬೆಂಗಳೂರು: ನೀನು ಗಂಡಸೇ ಆಗಿದ್ದರೆ ಬಾ ನನ್ನ ಗಂಡನನ್ನು ಮರ್ಡರ್ ಮಾಡು, ಆಮೇಲೆ ನನ್ನ ಜತೆ ಸೇರು…
42 ವರ್ಷದ ದೇಬಿ ತಂಬಾಗ್ ಎಂಬ ಮಹಿಳೆಯ ಚಾಲೇಂಜ್ ಅನ್ನು 28 ವರ್ಷದ ಬಾಬು ಅಲಿ, ಇದು ತನ್ನ ಮರ್ಯಾದೆಯ ಪ್ರಶ್ನೆ ಎಂಬಂತೆ ಸ್ವೀಕರಿಸಿಯೇ ಬಿಟ್ಟ. ಆಗ ಶುರುವಾಯಿತು ದೇಬಿ ತಂಬಾಗ್‌ಳ ಗಂಡ 60 ವರ್ಷದ ರಾಕೇಶ್ ತೋಮಂಗ್‌ನನ್ನು ಕೊಲ್ಲುವ ಸಂಚು. ಪ್ರಿಯಕರನ ಜತೆ ಸೇರಿ ಆ ಮಹಿಳೆ ಕೊಲೆ ಮಾಡಿದ್ದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈಗ ವಿದ್ಯಾರಣ್ಯ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.
ನವೆಂಬರ್ 6ರಂದು ಈ ಕೊಲೆ ಕೃತ್ಯ ನಡೆದಿತ್ತು. ಕಂಠಪೂರ್ತಿ ಕುಡಿದಿದ್ದ ಗಂಡ ಎದೆ ಉರಿ ಎನ್ನುತ್ತ ಸತ್ತು ಬಿದ್ದ ಎಂದಾಕೆ ಮೊದಲು ಪೊಲೀಸರ ಎದುರು ಕತೆ ಹೇಳಿದ್ದಳು. ಆದರೆ, ಮೃತನ ಕುತ್ತಿಗೆ ಮೇಲೆ ಗಾಯದ ಕುರುಹು ಇದ್ದುದನ್ನು ಗಮನಿಸಿದ್ದ ಪೊಲೀಸರು ತನಿಖೆ ನಡೆಸಿದಾಗ ಕೊಲೆಯ ಹಿಂದಿನ ಪ್ಲ್ಯಾನ್ ಬೆಳಕಿಗೆ ಬಂತು.
ಗಂಡನನ್ನು ಕೊಂದಿದ್ದು ಹೇಗೆ?
ದೇಬಿ ತಂಬಾಗ್‌ಳ ಗಂಡನಿಗೆ ಕುಡಿಯುವ ಚಟ ಇತ್ತು. ಮೂಲತಃ ಪಶ್ಚಿಮ ಬಂಗಾಳದವನಾದ ಆತ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೆ ಊಟ ಕೊಡಲು ಬರುತ್ತಿದ್ದಾಗ ಆಕೆ ಬಾಬು ಅಲಿಯ ಪರಿಚಯ ಮಾಡಿಕೊಂಡಿದ್ದಳು. ನಿಧಾನಕ್ಕೆ ಆತನ ಜತೆ ಸಲುಗೆ ಬೆಳೆಸಲಾರಂಭಿಸಿದಳು.
ಗಂಡನಿಗೆ ಮದ್ಯ ಕುಡಿಸಿ ಕತ್ತು ಹಿಸುಕಿ ಸಾಯಿಸುವ ಪ್ಲ್ಯಾನ್ ಮಾಡಿದವಳು ದೇಬಿ. ಜತೆಗೆ ಚಿಕನ್ ಕಬಾಬೂ ಇರಲಿ ಎಂದು ತಿನ್ನಿಸಿ ಕತ್ತು ಹಿಸುಕಿ ಸಾಯಿಸಿದವನು ಬಾಬು ಅಲಿ! ರಾಕೇಶ್‌ನ ಕುಡಿಯುವ ಚಟವೇ ಇವರ ಕ್ರಿಮಿನಲ್ ಕೃತ್ಯಕ್ಕೆ ಮೂಲ ಬಂಡವಾಳವಾಯಿತು. ರಾಕೇಶ್ ಕಂಠಪೂರ್ತಿ ಕುಡಿದು ಗೊರಕೆ ಹೊಡೆಯುತ್ತಿದ್ದಂತೆ, ಬಾಬು ಅಲಿ ಆತನ ಮೈಮೇಲೆ ಕುಳಿತು ಕತ್ತು ಹಿಸುಕಿ ಉಸಿರು ನಿಲ್ಲಿಸಿ ಬಿಟ್ಟ. ಈ ವೇಳೆ ಗಂಡನ ಕೈ, ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ದೇಬಿ ಕೊಲೆಗೆ ಸಹಕರಿಸಿದಳು. ಮರು ದಿನ ಆಕೆಯೇ ಪೊಲೀಸರಿಗೆ ಫೋನ್ ಮಾಡಿ, ರಾತ್ರಿ ಮಲಗಿದ್ದ ಗಂಡ ಬೆಳಗ್ಗೆ ಎದ್ದೇ ಇಲ್ಲ ಎಂದು ಗೋಳಿಟ್ಟಳು.
ಗಂಡಸಾದ್ರೆ ಅವನನ್ನ ಸಾಯಿಸು, ಇಲ್ಲವಾದ್ರೆ ನನ್ನ ಬಿಟ್ಟುಬಿಡು…
ಗಂಡನಿಗೆ ವಯಸ್ಸಾಗಿದೆ. ಜತೆಗೆ ಕುಡಿತದ ಚಟ ಬೆಳೆಸಿಕೊಂಡಿರುವ ಆತನಿಗೆ ಲೈಂಗಿಕ ಆಸಕ್ತಿಯೇ ಇಲ್ಲ. ಆತನ ಸಹವಾಸ ಸಾಕು, ನನಗೀಗ ನೀನು ಬೇಕು ಎಂದು ಬಾಬು ಅಲಿಯನ್ನು ದೇಬಿ ಹುರಿದುಂಬಿಸಿದ್ದಳು. ಗಂಡನನ್ನು ಸಾಯಿಸದೆ ಹೋದರೆ ಇನ್ನು ಮುಂದೆ ನನ್ನ ಬಳಿ ಬರಬೇಡ ಎಂದು ಕೆರಳಿಸಿದ್ದಳು.
ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ರಾಕೇಶ್ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರೆ ಇತ್ತ ಅದೇ ಹೊತ್ತಿಗೆ ಬಾಬು ಅಲಿ, ರಾಕೇಶ್‌ನ ಮನೆಗೆ ಬಂದು ಆತನ ಪತ್ನಿ ದೇಬಿಯ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ. ದೇಬಿ ಮತ್ತು ಬಾಬು ಅಲಿಯ ನಡುವಿನ ಅಕ್ರಮ ಸಂಬಂಧ ಗ್ರಹಿಸಿದ್ದ ರಾಕೇಶ್, ಎರಡು ಮೂರು ಬಾರಿ ವಾರ್ನಿಂಗ್ ಕೊಟ್ಟಿದ್ದ. ಇನ್ನು ಮುಂದೆ ನಿಮ್ಮಿಬ್ಬರ ಸಲುಗೆ ನನ್ನ ಕಣ್ಣಿಗೆ ಬಿದ್ದರೆ ಸುಮ್ಮನಿರುವುದಿಲ್ಲ ಎಂದು ಗದರಿಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ದೇಬಿ ಗಂಡನನ್ನು ಸಾಯಿಸಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಳು.
ಅದೇ ಮನೆಯಲ್ಲಿ 9 ದಿನ ಅಡಗಿ ಕೂತಿದ್ದ ಕೊಲೆಗಾರ!
ರಾಕೇಶ್ ತೋಮಂಗನನ್ನ ಕೊಲೆ ಮಾಡಲು ಮುಹೂರ್ತ ಇಟ್ಟಿದ್ದು ಅಕ್ಟೋಬರ್ 29ರಂದು. ಆದರೆ ಆತನ ಪತ್ನಿ ಹಾಗೂ ಪ್ರಿಯಕರ ಸೇರಿ ಹತ್ಯೆ ಮಾಡಿದ್ದು ನವೆಂಬರ್ 6 ರಂದು. ಅ.29ರಿಂದ ನವೆಂಬರ್ 6ರವರೆಗೂ ಮೃತ ರಾಕೇಶ್ ತೋಮಂಗನ ಮನೆಯಲ್ಲಿ ಬಾಬು ಅಲಿ ಅಡಗಿ ಕುಳಿತಿದ್ದ. ರಾಕೇಶ್ ತೋಮಂಗನ ಡಬಲ್ ಬೆಡ್ ರೂಮ್ ಮನೆಯ ಒಂದು ರೂಮ್‌ನಲ್ಲಿ ಹಳೆಯ ಸಾಮಗ್ರಿಗಳನ್ನು ತುಂಬಿಸಿಡಲಾಗಿತ್ತು. ಆರೋಪಿ ಆ ರೂಮ್‌ನಲ್ಲಿ 9 ದಿನ ಅಡಗಿ ಕುಳಿತಿದ್ದ. ಪ್ರಿಯಕರನಿಗೆ ಊಟ, ತಿಂಡಿಯನ್ನ ದೇಬಿ ಅಲ್ಲೇ ತಂದು ಕೊಡುತ್ತಿದ್ದಳು. ಮದ್ಯದ ಅಮಲಿನಲ್ಲೇ ಇರುತ್ತಿದ್ದ ರಾಕೇಶ್‌ಗೆ ಹಂತಕ ಮನೆಯಲ್ಲೇ ಇರುವುದು ಗೊತ್ತೇ ಆಗಲಿಲ್ಲ.
ಕೊಲೆಗಾರರು ಲಾಕ್ ಆಗಿದ್ದು ಇಂಟ್ರೆಸ್ಟಿಂಗ್!
ಪ್ರಿಯಕರನಿಗೆ ತನ್ನ ಹೆಸರಿನ ದಾಖಲೆ ಕೊಟ್ಟು ದೇಬಿ ಹೊಸ ಸಿಮ್ ಕಾರ್ಡ್ ಖರೀದಿಸಿದ್ದಳು. ತನ್ನ ಹಳೇ ನಂಬರನ್ನು ಸ್ವಿಚ್ಡ್ ಆಫ್ ಮಾಡಿದ್ದಳು. ಗಂಡನ ಕೊಲೆಗೆ ಮುಹೂರ್ತ ಇಟ್ಟ ಅ.29ರಿಂದ ಹೊಸ ಸಿಮ್‌ನಿಂದಲೇ ಕಾಲ್ ಮಾಡುತ್ತಿದ್ದಳು. ಕೊಲೆಯ ನಂತರ ಬೆಳಗ್ಗೆ ಪತಿಯ ಅಕೌಂಟ್‌ನಿಂದ ತನ್ನ ಅಕೌಂಟ್‌ಗೆ ಹಣ ವರ್ಗಾಯಿಸಿಕೊಂಡಿದ್ದಳು. ತನ್ನ ಅಕೌಂಟ್‌ನಿಂದ ಪ್ರಿಯಕರನ ಫೋನ್ ಪೇಗೆ ಹಣ ವರ್ಗಾಯಿಸಿದ್ದಳು. ಆಕೆ ಕೊಟ್ಟ ಹಣದಲ್ಲಿ ಆರೋಪಿ ಹೊಸೂರಿನಲ್ಲಿ ತಲೆಮರೆಸಿಕೊಂಡಿದ್ದ. ಮೃತನ ಕುತ್ತಿಗೆಯಲ್ಲಿದ್ದ ಪರಚಿದ ಗುರುತು, ಫೋನ್ ಕಾಲ್ ಹಾಗೂ ಬ್ಯಾಂಕ್ ಟ್ರಾನ್ಸಾಕ್ಷನ್ ದಾಖಲೆಗಳು ಈ ಇಬ್ಬರು ಕೊಲೆಗಾರರನ್ನು ಜೈಲಿಗೆ ತಳ್ಳಲು ನೆರವಾಗಿದೆ.
ಇದನ್ನೂ ಓದಿ| Murder Mystery | ಬಾಲಕಿಯ ರೇಪ್, ಕೊಲೆ ಕೇಸ್ ಭೇದಿಸಲು ಒಂದು ವಾಟ್ಸ್‌ಆ್ಯಪ್ ಮೆಸೇಜ್ ನೆರವಾಗಿದ್ದು ಹೇಗೆ?