ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಮತ್ತು ಮಾಜಿ ಶಾಸಕ ಸುರೇಶ್ ಗೌಡ ನಡುವಿನ ವೈಷಮ್ಯ ಮುಗಿಲು ಮುಟ್ಟಿದಂತಿದೆ. ಗೌರಿಶಂಕರ್ ಅವರು ತಮ್ಮ ಕೊಲೆಗೆ ಐದು ಕೋಟಿ ರೂ. ಸುಪಾರಿ ನೀಡಿದ್ದಾರೆ ಎಂದು ಸುರೇಶ್ ಗೌಡ ಅವರು ಆರೋಪಿಸಿದ್ದು, ಈ ಜಿದ್ದನ್ನು ಇನ್ನಷ್ಟು ಹೆಚ್ಚಿಸುವ ಲಕ್ಷಣ ಕಂಡುಬಂದಿದೆ.
ಸುರೇಶ್ ಗೌಡರ ಸುಪಾರಿ ವಿಚಾರಕ್ಕೆ ಸಂಬಂಧಿಸಿ ಶಾಸಕ ಗೌರಿಶಂಕರ್ ಅವರು ತುಮಕೂರು ಎಸ್‌ಪಿಗೆ ದೂರು ನೀಡಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಸುರೇಶ್ ಗೌಡರು ಹೇಳಿದ್ದೇನು?
ಎರಡು ದಿನಗಳ ಹಿಂದೆ ತುಮಕೂರು ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಸುರೇಶ್ ಗೌಡ ಅವರು, ʻʻಶಾಸಕ ಗೌರಿಶಂಕರ್ ನನ್ನ ಕೊಲೆಗೆ ರೌಡಿಶೀಟರ್ ಒಬ್ಬನಿಗೆ 5 ಕೋಟಿಗೆ ಸುಫಾರಿ ನೀಡಿದ್ದಾರೆʼʼ ಎಂದು ಬಹಿರಂಗವಾಗಿ ಹೇಳಿದ್ದರು..
ʻʻನಿನ್ನ ನಾಟಕ ಎಲ್ಲ ಬಂದ್ ಮಾಡು, ನಮ್ಮ ತಾಕತ್ತು ಏನು ಎಂಬುವುದನ್ನು ನಮ್ಮ ಕಾರ್ಯಕರ್ತರು ತೋರಿಸುತ್ತಾರೆ. ಕಳೆದ ಒಂದೂವರೆ ತಿಂಗಳಿಂದ ನಮ್ಮ ಶಕ್ತಿ ಏನು ಎಂಬುದನ್ನು ಪ್ರತಿ ಊರಿನಲ್ಲೂ ತೋರಿಸಿದ್ದೇವೆ. ನಿನ್ನ ಒಂದೊಂದು ಆಟವೂ ನನಗೆ ಗೊತ್ತಿದೆ. ನನ್ನ ಕೊಲೆ ಮಾಡಿಸಲು ನೀನು ಸಜ್ಜಾಗಿದ್ದೀಯಾ, ಇದೆಲ್ಲ ನಡೆಯಲ್ಲಪ್ಪ ಮಿಸ್ಟರ್ ಗೌರಿಶಂಕರ್ʼʼ ಎಂದು ಏಕವಚನದಲ್ಲಿಯೇ ಕಿಡಿಕಾರಿದ್ದರು.
ʻʻನಾನೊಬ್ಬ ರೈತನ ಮಗ. ನಮ್ಮ ಮತದಾರರು, ಕಾರ್ಯಕರ್ತರು ಇರುವವರೆಗೂ ನನ್ನ ಒಂದು ಕೂದಲನ್ನೂ ಮುಟ್ಟೋಕೆ ಆಗಲ್ಲ. ನನ್ನನ್ನು ಕೊಲೆ ಮಾಡಲು ಜೈಲಲ್ಲಿ ಇರುವವರೆಗೆ ಸುಪಾರಿ ಕೊಡುತ್ತೀಯಾ? ನಿನಗೆ ಧಮ್ ಇದ್ದರೆ ಕೊಲೆ ಸುಪಾರಿ ಕೊಡು ನೋಡೋಣಾʼʼ ಎಂದು ಏಕವಚನದಲ್ಲಿಯೇ ಸವಾಲು ಹಾಕಿದ್ದರು.
ಗೌರಿಶಂಕರ್ ಹೇಳುವುದೇನು?
ಈ ಪ್ರಕರಣ ಸಂಬಂಧ ತುಮಕೂರು ಎಸ್ ಪಿ ಗೆ ದೂರು ನೀಡಿದ ಶಾಸಕ ಗೌರಿಶಂಕರ್, ʻʻನನ್ನ ವಿರುದ್ಧ ಇದೊಂದು ಸುಳ್ಳು ಆರೋಪ. ನನ್ನ ಘನತೆ ಮಸಿ ಬಳಿಯಲು, ತೇಜೋವಧೆ ಮಾಡಲು ಈ ರೀತಿಯ ಸುಳ್ಳು ಆರೋಪ ಮಾಡ್ತಿದ್ದಾರೆ. ಹೀಗಾಗಿ ಸುರೇಶ್ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುʼʼ ಎಂದಿದ್ದಾರೆ.
ʻʻಮಾಜಿ ಶಾಸಕ ಸುರೇಶ್ ಗೌಡರಿಂದ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಜೀವ ಭಯವಿದೆʼʼ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಗೌರಿಶಂಕರ್, ಕೂಡಲೇ ಈ ಪ್ರಕರಣವನ್ನು ಸಿಓಡಿ ತನಿಖೆ ನಡೆಸಿ ಸುರೇಶ್ ಗೌಡ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮನವಿಯನ್ನು ತುಮಕೂರು ಎಸ್ ಪಿ ಅವರಿಗಲ್ಲದೆ, ಸಿಎಂ ಹಾಗೂ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರಿಗೂ ಕಳುಹಿಸಿದ್ದಾರೆ.
ಗೌರಿಶಂಕರ್ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕರು. ಸುರೇಶ್ ಗೌಡ ಅವರು ಈ ಹಿಂದೆ ಬಿಜೆಪಿಯಲ್ಲಿದ್ದು, ಸದ್ಯ ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಬ್ಬರೂ ಜಗಳಕ್ಕೆ ಇಳಿದಿದ್ದಾರೆ ಎಂಬ ಗುಮಾನಿ ಇದೆ.
ಇದನ್ನೂ ಓದಿ | Supari for murder | ಮಾಜಿ ಶಾಸಕ ಸುರೇಶ್ ಗೌಡರ ಕೊಲೆಗೆ ಶಾಸಕ ಗೌರಿಶಂಕರ್ ಸುಪಾರಿ?