ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ಕೇಳಿಬಂದಿರುವ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ಇಲ್ಲಿನ ಬಾಲಕಿಯರ ಬಾಲಮಂದಿರಕ್ಕೆ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷೆ ಜಯಶ್ರೀ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸಿಇಒ ನಂದಿನಿ ದೇವಿ, ಎಸ್.ಪಿ. ಪರಶುರಾಮ್, ನ್ಯಾಯಾಧೀಶರಾದ ಗಿರೀಶ್ ಅವರು ಸಹ ಭೇಟಿ ನೀಡಿದ್ದಾರೆ. ಅಲ್ಲದೆ, ಇಲ್ಲಿಯೇ ಅಧ್ಯಕ್ಷೆ ಜಯಶ್ರೀ ಸಂತ್ರಸ್ತ ಬಾಲಕಿಯರ ಹೇಳಿಕೆ ಪಡೆಯಲಿದ್ದಾರೆ. ಇದಾದ ಬಳಿಕ ಮುರುಘಾ ಮಠದ ಹಾಸ್ಟೆಲ್‌ಗೂ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಹಾಸ್ಟೆಲ್‌ಗೆ ಭೇಟಿ
ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಹಿನ್ನೆಲೆ ಮುರುಘಾಮಠಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಭೇಟಿ ನೀಡಿದ್ದು, ಮಠದ ಹಾಸ್ಟೆಲ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಹಾಸ್ಟೆಲ್‌ನಲ್ಲಿ ಇರುವ ಮಕ್ಕಳ ಜತೆ ಸಮಾಲೋಚನೆ ನಡೆಸಿದ್ದಾರೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮಠಕ್ಕೆ ಆಗಮಿಸಿದ ಪೊಲೀಸರು
ಮನೆಗೆ ತೆರಳಲು ಅರ್ಜಿ ಬರೆದ ಮಕ್ಕಳು
ಈ ನಡುವೆ ಬಾಲಕಿಯರ ಹಾಸ್ಟೆಲ್‌ನಲ್ಲಿ ಇರುವ ಕೆಲವು ಹೆಣ್ಣುಮಕ್ಕಳು ತಮ್ಮನ್ನು ಮನೆಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹೋಗಿಬರುವುದಾಗಿ ಹಲವು ಹೇಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಬಾಲಕರೂ ಸೇರಿದಂತೆ ಕೆಲವರು ಊರಿಗೆ ಹೋಗಿ ಬರಲು ಅನುಮತಿ ನೀಡಿ ಎಂದು ಶಾಲಾ ಮುಖ್ಯಸ್ಥರು, ನಿಲಯ ಪಾಲಕರಿಗೆ ಮನವಿ ಪತ್ರದ ಮೂಲಕ ಕೋರಿದ್ದಾರೆ. ಈಗ ಆ ಮನವಿ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ವ್ಯವಸ್ಥೆ
ಮುರುಘಾಮಠಕ್ಕೆ ಭೇಟಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು, ಮಕ್ಕಳ ಜತೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಹೂಡಲು ಇಚ್ಛಿಸುವ ಮಕ್ಕಳಿಗೆ ಅಲ್ಲಿಗೆ ತೆರಳಲು ವ್ಯವಸ್ಥೆ ಮಾಡಿದ್ದಾರೆ. ಬೇರೆ ಜಿಲ್ಲೆಯ ಮಕ್ಕಳಿಗೆ ಆಯಾ ಜಿಲ್ಲೆಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಪೋಷಕರನ್ನು ಕರೆಸಿ ಅವರೊಂದಿಗೆ ತೆರಳಲು ಅನುಕೂಲ ಕಲ್ಪಿಸಿದ್ದಾರೆ. ಇನ್ನು ಮಠದ ಹಾಸ್ಟೆಲ್‌ನಲ್ಲಿಯೇ ಉಳಿಯಲು ಬಯಸಿದವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | ಮುರುಘಾಮಠ ಪ್ರಕರಣ | ನನ್ನನ್ನು ಬಂಧಿಸಿಲ್ಲ, ಮಠಕ್ಕೆ ಹಿಂದಿರುಗುತ್ತಿರುವೆ ಎಂದ ಸ್ವಾಮೀಜಿ
ಏನಿದು ಲೈಂಗಿಕ ಕಿರುಕುಳ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮಠದ ಮೂಲಕ ನಡೆಸಲಾಗುವ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಾ, ವಸತಿ ಶಾಲೆಯಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು, ಇದಕ್ಕೆ ಅಲ್ಲಿನ ವಾರ್ಡನ್ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಒಬ್ಬ ವಿದ್ಯಾರ್ಥಿನಿ ಮೇಲೆ ಮೂರು ವರ್ಷದಿಂದ ಇನ್ನೊಬ್ಬ ವಿದ್ಯಾರ್ಥಿನಿ ಮೇಲೆ ಒಂದೂವರೆ ವರ್ಷದಿಂದ ದೌರ್ಜನ್ಯ ನಡೆಯುತ್ತಿದೆ ಎನ್ನಲಾಗಿದೆ. ಅವರಿಬ್ಬರು ಮಹಿಳಾ ರಕ್ಷಣಾ ಸಮಿತಿ ಮತ್ತು ಸಾಂತ್ವನ ಕೇಂದ್ರವಾದ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದರು. ಸಂಸ್ಥೆಯು ಅವರಿಬ್ಬರನ್ನೂ ಕರೆಸಿಕೊಂಡು ಆಪ್ತ ಸಮಾಲೋಚನೆಯ ಮೂಲಕ ದೌರ್ಜನ್ಯದ ವಿವರಗಳನ್ನು ಪಡೆದುಕೊಂಡು ಇದೀಗ ಚಂದ್ರಕುಮಾರ್ ಎಂಬುವರ ಮೂಲಕ ಪೊಲೀಸರಿಗೆ ದೂರು ನೀಡಿದೆ.
ಹೇಗೆ ದೌರ್ಜನ್ಯ, ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರಲ್ಲದೆ, ಅವರಿಗೆ ಸಹಕಾರ ನೀಡಿದ ಆರೋಪದಲ್ಲಿ ವಸತಿ ಶಾಲೆಯ ವಾರ್ಡನ್ ಆಗಿರುವ ರಶ್ಮಿ, ಮಠಕ್ಕೆ ಸಂಬಂಧಿಸಿದ ಬಸವಾದಿತ್ಯ, ಲಾಯರ್ ಗಂಗಾಧರ್ ಮತ್ತು ಲೀಡರ್ ಪರಮಶಿವಯ್ಯ ಅವರ ವಿರುದ್ಧ ದೂರು ದಾಖಲಾಗಿದೆ.
ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿಗಳ ಬಳಿಗೆ ಕಳುಹಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಬಳಿಗೆ ಹೋಗಲು ಒಪ್ಪದಿದ್ದರೆ ಹಾಸ್ಟೆಲ್ ಸಿಬ್ಬಂದಿಯೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ. ಅದಕ್ಕಿಂತಲೂ ಗಂಭೀರವಾದ ಇನ್ನೊಂದು ಆರೋಪವೆಂದರೆ ವಿದ್ಯಾರ್ಥಿನಿಯರನ್ನು ಹೀಗೆ ಲೈಂಗಿಕವಾಗಿ ಬಳಸಿಕೊಳ್ಳುವ ಮುನ್ನ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಹಣ್ಣು, ಸಿಹಿಯಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಅತ್ಯಾಚಾರ ನಡೆಸುತ್ತಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಕಿರುಕುಳವನ್ನು ಪ್ರಶ್ನಿಸಿದ ಕಾರಣಕ್ಕೆ ಈ ವಿದ್ಯಾರ್ಥಿನಿಯರನ್ನು ಹಾಸ್ಟೆಲ್‌ನಿಂದ ಹೊರ ಹಾಕಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ | Murugha Shri | ಬಾಲಕಿಯರ ಮೆಡಿಕಲ್ ಟೆಸ್ಟ್, ಸೋಮವಾರ ಜಡ್ಜ್ ಮುಂದೆ ಹೇಳಿಕೆ; ಮುರುಘಾಶ್ರೀ ಬಂಧನ ಆಗುತ್ತಾ?