ಚಿತ್ರದುರ್ಗ: ಮುಘಾ ಮಠದ ಮುರುಘಾಶ್ರೀ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ 4ನೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಮಠದ ಕಾರ್ಯದರ್ಶಿ ಪರಮಶಿವಯ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಾಗಿದ್ದ ವೇಳೆ ಇವರನ್ನು ನಾಲ್ಕನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಆಗಿನಿಂದ ನಾಪತ್ತೆಯಾಗಿದ್ದ ಪರಮಶಿವಯ್ಯ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಇವರ ಮೇಲೆ ಎರಡು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ನೀಡದೆ, ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಿತ್ತು.
ಈ ನಡುವೆ ಪರಮಶಿವಯ್ಯ ಶನಿವಾರ (ಅ. ೨೯) ಚಿತ್ರದುರ್ಗಕ್ಕೆ ಬಂದಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು, ತಕ್ಷಣವೇ ಪರಮಶಿವಯ್ಯ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಚಿತ್ರದುರ್ಗದ ಸಿಡಬ್ಲ್ಯೂಸಿಯಲ್ಲಿ ಇರಲೊಪ್ಪದ ಸಂತ್ರಸ್ತ ಬಾಲಕಿಯರು
ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ
ಸದ್ಯ ಪೊಲೀಸರ ವಶದಲ್ಲಿರುವ ಪರಮಶಿವಯ್ಯ ಅವರನ್ನು ಡಿವೈಎಸ್ಪಿ ಅನಿಲ್ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇಷ್ಟು ದಿನ ತಲೆ ಮರೆಸಿಕೊಂಡಿದ್ದಕ್ಕೆ ಕಾರಣ ಸೇರಿದಂತೆ ಅವರ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆಯೂ ಪೊಲೀಸರು ಹೇಳಿಕೆಯನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ.
ಮುರುಘಾ ಶರಣರು ವಿದ್ಯಾರ್ಥಿನಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದಾಖಲಾಗಿದ್ದ ದೂರಿನಲ್ಲಿ ನಾಲ್ಕನೇ ಆರೋಪಿಯಾಗಿರುವ ಪರಮಶಿವಯ್ಯ ಶ್ರೀಗಳಿಗೆ ಈ ಕೃತ್ಯದಲ್ಲಿ ಸಹಕಾರ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪರಮಶಿವಯ್ಯ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ತೀವ್ರ ಶೋಧ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ, ಅಜ್ಞಾತ ಸ್ಥಳದಲ್ಲಿದ್ದ ಇವರು ಅಲ್ಲಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಅರ್ಜಿ ವಿಚಾರಣೆಯು ಮುಂದಕ್ಕೆ ಹೋಗಿದೆ. ಇದರಿಂದ ಯಾರಿಗೂ ತಿಳಿಯದಂತೆ ಚಿತ್ರದುರ್ಗಕ್ಕೆ ಬಂದಿದ್ದರು ಎನ್ನಲಾಗಿದೆ. ಆದರೆ, ವಿಷಯ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ನ್ಯಾಯಾಂಗ ಬಂಧನ / ಪೊಲೀಸ್ ಕಸ್ಟಡಿ?
ಪರಮಶಿವಯ್ಯ ಅವರನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡ ತರುವಾಯ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಜಡ್ಜ್ ಮುಂದೆ ಹೇಳಿಕೆ ದಾಖಲಾಗುತ್ತಿದ್ದಂತೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ. ಆದರೆ, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಿದೆಯೋ ಅಥವಾ ಪೊಲೀಸ್ ಕಸ್ಟಡಿಗೆ ನೀಡಲಿದೆಯೇ ಎಂಬುದು ನಂತರದಲ್ಲಿ ತಿಳಿದುಬರಬೇಕಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | 2ನೇ ಲೈಂಗಿಕ ದೌರ್ಜನ್ಯ ಪ್ರಕರಣದ ಬಾಲಕಿಯರಿಬ್ಬರಿಗೆ ವೈದ್ಯಕೀಯ ಟೆಸ್ಟ್, ಮಠದಲ್ಲಿ ಸ್ಥಳ ಮಹಜರು
ಮುರುಘಾಶ್ರೀ ಇಂದು ಪೊಲೀಸ್ ಕಸ್ಟಡಿಗೆ ಸಾಧ್ಯತೆ
ಮುರುಘಾಶ್ರೀ ವಿರುದ್ಧ ಕೇಳಿಬಂದಿರುವ 2ನೇ ಪೋಕ್ಸೋ ಪ್ರಕರಣ ಸಂಬಂಧ ಶನಿವಾರ (ಅ. ೨೯) ಮುರುಘಾ ಶರಣರನ್ನು ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಲೈಂಗಿಕ ದೌರ್ಜನ್ಯದ ಮೊದಲನೇ ಪ್ರಕರಣದಲ್ಲಿ ಬಂಧಿತರಾಗಿರುವ ಶ್ರೀಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ಮುರುಘಾಶ್ರೀ ವಿರುದ್ಧ ಅ. ೧೩ರಂದು ೨ನೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಶ್ರೀಗಳ ವಿಚಾರಣೆ ಆಗಿಲ್ಲ. ಅಲ್ಲದೆ, ಹೇಳಿಕೆಯನ್ನೂ ದಾಖಲು ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಕೇಳುವ ಸಾಧ್ಯತೆ ಇದೆ.
ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ನೀಲಕಂಠೇಶ್ವರ ದೇಗುಲದಲ್ಲಿ ಕೊನೆಗೂ ಮುರುಘಾಶರಣರ ಫೋಟೊ ತೆರವು