ಚಿತ್ರದುರ್ಗ: ಮುರುಘಾ ಶರಣರು ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಬೆನ್ನಲ್ಲೇ ಮತ್ತೆ ನಾಲ್ಕು ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆಂಬ ದೂರು ಬಂದಿದ್ದ ಹಿನ್ನೆಲೆಯಲ್ಲಿ ಶ್ರೀಮಠದ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಎಲ್ಲ ಹೆಣ್ಣುಮಕ್ಕಳಿಗೂ ಆಪ್ತ ಸಮಾಲೋಚನೆ ನಡೆಸುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದೆ.
ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಬಂಧನವಾಗುತ್ತಿದ್ದಂತೆ ಮಠದ ಹಾಸ್ಟೆಲ್‌ನಲ್ಲಿದ್ದ ಒಟ್ಟು ೧೦೩ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಕೆಲವರನ್ನು ಪೋಷಕರ ಜತೆಗೆ ಕಳುಹಿಸಿದರೆ, ಮತ್ತೆ ಕೆಲವರನ್ನು ಸಂಬಂಧಿಸಿದ ಮಕ್ಕಳ ಕಲ್ಯಾಣ ಸಮಿತಿಗೆ ವರ್ಗಾಯಿಸಲಾಗಿತ್ತು.
ಮತ್ತೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕ್ರಮ
ಮೊದಲನೇ ಲೈಂಗಿಕ ದೌರ್ಜನ್ಯ ಪ್ರಕರಣವು ವಿಚಾರಣೆ ಹಂತದಲ್ಲಿರುವಾಗಲೇ ಮೈಸೂರಿನಲ್ಲಿ ಅ.೧೩ರಂದು ಮಠದ ಅಡುಗೆ ಸಹಾಯಕಿಯೊಬ್ಬರು ತನ್ನ ಇಬ್ಬರು ಮಕ್ಕಳು ಸೇರಿದಂತೆ ಇನ್ನಿಬ್ಬರು ಮಕ್ಕಳ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಅಲ್ಲದೆ, ಇವರಿಗೆ ಒತ್ತಾಸೆಯಾಗಿ ನಿಂತಿದ್ದ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಇನ್ನೂ ೩೦-೩೫ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಎಲ್ಲ ಹೆಣ್ಣು ಮಕ್ಕಳಿಗೂ ಆಪ್ತ ಸಮಾಲೋಚನೆ ನಡೆಸುವಂತೆ ಸೂಚನೆ ನೀಡಿದೆ.
ನವೆಂಬರ್ ೩೦ರ ಗುಡುವು
ಮಠದಿಂದ ವಿವಿಧ ಸರ್ಕಾರಿ ಹಾಸ್ಟೆಲ್, ಬಾಲಮಂದಿರಕ್ಕೆ ಸ್ಥಳಾಂತರಗೊಂಡಿರುವ ಅಥವಾ ಮನೆಗೆ ಹೋಗಿರುವ ಎಲ್ಲ ಹೆಣ್ಣುಮಕ್ಕಳ ಜತೆ ನವೆಂಬರ್ 30ರೊಳಗೆ ಆಪ್ತ ಸಮಾಲೋಚನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವ ಮಾಹಿತಿ ಸಿಕ್ಕಲ್ಲಿ ಹೇಳಿಕೆ ದಾಖಲಿಸಿ, ನಿಯಮಾನುಸಾರ ಮುಂದಿನ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ನಿರ್ಲಕ್ಷ್ಯ ವಹಿಸದಂತೆ ಕ್ರಮಕ್ಕೆ ಸೂಚನೆ
ಆಪ್ತ ಸಮಾಲೋಚನೆ ವೇಳೆ ಯಾವುದೇ ರೀತಿಯಾದಂತಹ ನಿರ್ಲಕ್ಷ್ಯ ಆಗಕೂಡದು. ಆದ್ಯತೆ ಮೇರೆಗೆ ಕ್ರಮ ವಹಿಸಬೇಕು. ಆಪ್ತ ಸಮಾಲೋಚನೆ ನಡೆಸುವಾಗ ಉಪಸ್ಥಿತರಿರುವ ಸಂಖ್ಯೆ, ಮಕ್ಕಳಿಂದ ಯಾವ ಮಾದರಿಯಲ್ಲಿ ಮಾಹಿತಿ ಸಂಗ್ರಹಣೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ಜತೆಗೆ ಈಗ ಈ ಎಲ್ಲ ಮಕ್ಕಳಿಗೆ ಯಾವ ರೀತಿಯಾಗಿ ಪುನರ್ವಸತಿ ಕಲ್ಪಿಸಲಾಗಿದೆ? ಅವರಿಗೆ ವ್ಯವಸ್ಥೆ ಹೇಗಿದೆ ಎಂಬ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | 2ನೇ ಲೈಂಗಿಕ ದೌರ್ಜನ್ಯ ಪ್ರಕರಣ; ಕೋರ್ಟಲ್ಲಿ ಸಂತ್ರಸ್ತ ಬಾಲಕಿಯರಿಬ್ಬರ ಹೇಳಿಕೆ ದಾಖಲು
ಪ್ರಕರಣದ ಸಾರಾಂಶ
ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಮುರುಘಾಶರಣರು ಜೈಲಿನಲ್ಲಿ ಇರುವ ಬೆನ್ನಲ್ಲೇ ಶುಕ್ರವಾರ (ಅ.೧೪) ಮೈಸೂರಲ್ಲಿ ಮಠದ ಅಡುಗೆ ಸಹಾಯಕಿಯೊಬ್ಬರು ತನ್ನಿಬ್ಬರು ಮಕ್ಕಳು ಸೇರಿದಂತೆ ಮತ್ತಿಬ್ಬರು ಮಕ್ಕಳ ಮೇಲೆ ಮುರುಘಾಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲು ಮಾಡಿದ್ದರು. ಈ ವೇಳೆ ಪೊಲೀಸರು ಹಾಗೂ ಸಿಡಬ್ಲ್ಯೂಸಿ ಅಧಿಕಾರಿಗಳು ಆಕೆಯ ಹಾಗೂ ಒಬ್ಬಳು ಮಗಳ ಹೇಳಿಕೆಯನ್ನು ಪಡೆದುಕೊಂಡಿದ್ದರು. ನಾಲ್ಕು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ತಾಯಿ ಹೇಳಿದ್ದಾರೆ. “ಪತಿ ಇಲ್ಲದ ಕಾರಣ ತಾನು ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ. ನನ್ನ ಮಕ್ಕಳು ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ನನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮುರುಘಾ ಶರಣರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಪ್ರಭಾವ ಹೊಂದಿರುವ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ” ಎಂದೂ ಸಹ ಸಂತ್ರಸ್ತ ಬಾಲಕಿಯರಿಬ್ಬರ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಸಂಬಂಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಒಟ್ಟು 7 ಮಂದಿ ಮೇಲೆ ಕೇಸ್ ಹಾಕಲಾಗಿತ್ತು. ಸ್ವಾಮೀಜಿಯವರ ಸಹಾಯಕರಾದ ಮಹಾಲಿಂಗ, ಅಡುಗೆ ಸಹಾಯಕ ಕರಿಯಪ್ಪ ಎಂಬ ಇಬ್ಬರ ಮೇಲೆ ಹೊಸದಾಗಿ ಎಫ್‌ಐಆರ್ ದಾಖಲಾದಂತಾಗಿತ್ತು.
ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಉಳಿದವರಾದ ಲೇಡಿ ಹಾಸ್ಟೆಲ್ ವಾರ್ಡನ್, ಮಠದ ಉತ್ತರಾಧಿಕಾರಿ, ಮಠದ ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರಯ್ಯ, ಮುರುಘಾಶ್ರೀ ಸಹಾಯಕ ಮಹಾಲಿಂಗ, ಮುರುಘಾಶ್ರೀ ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಕ್ರಮವಾಗಿ ಕೇಸ್ ದಾಖಲಾಗಿದೆ.
ಏನಿದು ಮೊದಲ ಲೈಂಗಿಕ ಕಿರುಕುಳ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ವಸತಿ ಶಾಲೆಯಲ್ಲಿದ್ದ ಈ ಈ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆಂದು ದೂರು ನೀಡಲಾಗಿತ್ತು. ಅಲ್ಲದೆ, ಇದಕ್ಕೆ ಅಲ್ಲಿನ ವಾರ್ಡನ್ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಆಗಸ್ಟ್ ೨೭ರಂದು ಇಬ್ಬರು ವಿದ್ಯಾರ್ಥಿನಿಯರು ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಬ್ಬಳು ವಿದ್ಯಾರ್ಥಿನಿ ಮೇಲೆ ೩ ವರ್ಷದಿಂದ ಹಾಗೂ ಇನ್ನೊಬ್ಬ ವಿದ್ಯಾರ್ಥಿನಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಾ ಬರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರ ಮೇಲೆ ಅತ್ಯಾಚಾರ ಆರೋಪವನ್ನು ಹೊರಿಸಲಾಗಿದ್ದು, ಅವರಿಗೆ ಸಹಕಾರ ನೀಡಿದ ಆರೋಪದಡಿ ವಸತಿ ಶಾಲೆಯ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿ ಬಸವಾದಿತ್ಯ, ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರ್ ಮೇಲೆ ದೂರು ದಾಖಲಾಗಿತ್ತು. ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿ ಬಳಿ ಕಳುಹಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲೈಂಗಿಕ ಕ್ರಿಯೆಗೆ ಒಪ್ಪದೇ ಇದ್ದರೆ ಹಣ್ಣು, ಸಿಹಿಯಲ್ಲಿ ಮತ್ತುಬರುವ ಔಷಧವನ್ನು ಬೆರೆಸಿ ಅತ್ಯಾಚಾರ ನಡೆಸಲಾಗುತ್ತದೆ ಎಂದೂ ಹೇಳಲಾಗಿದೆ.
ಬಂಧನದ ಬಳಿಕ
ಆಗಸ್ಟ್ ೨೭ರಂದು ದೂರು ದಾಖಲಾಗಿತ್ತಾದರೂ ಮುಂದಿನ ನಾಲ್ಕು ದಿನಗಳ ಕಾಲ ಕಾನೂನು ಪ್ರಕ್ರಿಯೆಯನ್ನು ತೆಗೆದುಕೊಂಡಿರಲಿಲ್ಲ. ಸೆಪ್ಟೆಂಬರ್ ೧ರಂದು ರಾತ್ರಿ ಸ್ವಾಮೀಜಿಯನ್ನು ಬಂಧನ ಮಾಡಲಾಯಿತು. ಎರಡನೇ ಆರೋಪಿ, ಹಾಸ್ಟೆಲ್ ವಾರ್ಡನ್ ರಶ್ಮಿಯನ್ನು ಸಹ ಬಳಿಕ ಬಂಧನ ಮಾಡಿ ಶಿವಮೊಗ್ಗದ ಜೈಲಿಗೆ ಕಳುಹಿಸಲಾಗಿದೆ. ಇದರ ಜತೆಗೆ ಉಳಿದ ಆರೋಪಿಗಳ ಪೈಕಿ ಬಸವಾದಿತ್ಯ ಮತ್ತು ಪರಮಶಿವಯ್ಯ ತಲೆಮರೆಸಿಕೊಂಡಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಕೋರ್ಟ್ ಅದನ್ನು ಪುರಸ್ಕರಿಸದೆ ವಿಚಾರಣೆಯನ್ನು ಮುಂದೂಡುತ್ತಲೇ ಬಂದಿದೆ. ಇದರ ನಡುವೆ, ವಕೀಲರಾಗಿರುವ ಗಂಗಾಧರಯ್ಯ ಅವರನ್ನು ಪೊಲೀಸರು ವಿಚಾರಣೆ ನಡೆಸಿ, ಕರೆದಾಗ ಬರುವ ಷರತ್ತಿನೊಂದಿಗೆ ಬಿಟ್ಟುಕಳುಹಿಸಲಾಗಿದೆ.
ಇದನ್ನೂ ಓದಿ | ಮುರುಘಾ ಶ್ರೀ | ಒಡನಾಡಿ ಸೇವಾ ಸಂಸ್ಥೆಯಿಂದ ಮತ್ತೊಂದು ದೂರು