Site icon Vistara News

ಮುರುಘಾಶ್ರೀ ಪ್ರಕರಣ | ಎರಡೂವರೆ ವರ್ಷದಿಂದ ಲೈಂಗಿಕ ಕಿರುಕುಳ; ಬಡವರಾಗಿದ್ದರಿಂದ ಹೆದರಿದರು: ಸ್ಟ್ಯಾನ್ಲಿ

Not timetable to send children; Havent seen Murugha Seer room says Warden Rashmi

ಮೈಸೂರು: ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ಮೈಸೂರಿನಲ್ಲಿ ಮತ್ತಿಬ್ಬರು ಬಾಲಕಿಯರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈಗ ಶ್ರೀಮಠದಲ್ಲಿ ನಡೆದಿದೆ ಎನ್ನಲಾದ ದೌರ್ಜನ್ಯ ಪ್ರಕರಣಗಳ ಬಗ್ಗೆ ಒಂದೊಂದೇ ಮಾಹಿತಿ ಹೊರಬೀಳುತ್ತಿದೆ. ಇನ್ನೂ 30-35 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಆರೋಪ ಮಾಡಿರುವ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ, ಹಾಲಿ ದೂರು ನೀಡಿರುವ ಇಬ್ಬರು ಮಕ್ಕಳ ಮೇಲೆ ಎರಡೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆದಿದ್ದು, ಬಡವರಾಗಿದ್ದರಿಂದ ದೂರು ನೀಡಲು ಹೆದರಿದರು ಎಂದು ಆರೋಪಿಸಿದ್ದಾರೆ.

ಶ್ರೀಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರು ಈಗಾಗಲೇ ಆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದು, ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಬಡವರಾಗಿದ್ದರಿಂದ ಹೆದರಿದರು
ಈಗ ದಾಖಲಾಗಿರುವ ಎರಡನೇ ಪ್ರಕರಣವೂ ಮೊದಲನೇ ಪ್ರಕರಣದ ರೀತಿಯೇ ಇದೆ. ಮುರುಘಾ ಶರಣರಿಂದ ಸುಮಾರು ಎರಡೂವರೆ ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಲಾಗುತ್ತಾ ಬಂದಿದೆ. ಗುರುವಾರವಷ್ಟೇ ಮಕ್ಕಳ ಜತೆ ಪೋಷಕರು ನಮ್ಮ ಬಳಿ ಬಂದಿದ್ದರು. ಬಾಲಕಿ ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದಳು. ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಡವರಾಗಿದ್ದರಿಂದ ಈ ಬಗ್ಗೆ ಮಾತನಾಡಲು ಹೆದರಿದ್ದರು. ತಾವು ಅವರ ವಿರುದ್ಧ ಹೇಗೆ ಮಾತನಾಡುವುದು? ನಮಗೆ ಹೋರಾಟ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಸುಮ್ಮನೆ ಇದ್ದೆವು. ಈಗ ನಿಮ್ಮ ಸಹಾಯ ಬೇಕು ಎಂದು ನಮ್ಮ ಬಳಿಗೆ ಬಂದಿದ್ದಾರೆ ಎಂದು ಸ್ಟ್ಯಾನ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಮಠದ ಇನ್ನಷ್ಟು ವ್ಯಕ್ತಿಗಳ ರಕ್ಷಣೆ
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಮಠದಲ್ಲಿದ್ದ ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿದರೆ ಇನ್ನಷ್ಟು ಪ್ರಕರಣಗಳು ಹೊರಬರುತ್ತಿತ್ತು. ಆದರೆ, ಮಠದಲ್ಲಿ ಇನ್ನಷ್ಟು ವ್ಯಕ್ತಿಗಳನ್ನು ರಕ್ಷಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ನ್ಯಾಯಾಧೀಶರು ಮಠಕ್ಕೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಬೇಕು. ಪ್ರಕರಣವನ್ನು ಚಿತ್ರದುರ್ಗಕ್ಕೆ ರವಾನಿಸಲಾಗಿದೆ. ಆದರೆ, ಮಕ್ಕಳು ಮೈಸೂರಿನಲ್ಲೇ ಇರುತ್ತಾರೆ. ಪೋಷಕರು ಇರುವುದರಿಂದ ಬಾಲ ಮಂದಿರಕ್ಕೆ ಕಳುಹಿಸಲಾಗುತ್ತಿಲ್ಲ. ಮಕ್ಕಳ ಮೇಲೆ ಭಾರಿ ಒತ್ತಡ ನೀಡಲಾಗುತ್ತಿದೆ. ಒಂದೇ ಸಮನೆ ಪ್ರಶ್ನೆಗಳನ್ನು ಕೇಳಿದರೆ ಮಕ್ಕಳ ಪರಿಸ್ಥಿತಿ ಏನಾಗಬೇಡ? ಮಕ್ಕಳು ಮೈಸೂರಿನಲ್ಲೇ ಉಳಿಯಲು ಅವಕಾಶ ಮಾಡಿಕೊಡಬೇಕು ಎಂದು ಸ್ಟ್ಯಾನ್ಲಿ ಒತ್ತಾಯ ಮಾಡಿದ್ದಾರೆ.

ಮತ್ತಿಬ್ಬರು ಬಾಲಕಿಯರಿಂದ ಲೈಂಗಿಕ ಕಿರುಕುಳ ದೂರು
ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಮತ್ತಿಬ್ಬರು ಅಪ್ರಾಪ್ತ ವಯಸ್ಕರಿಂದ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. 12 ಹಾಗೂ 14 ವರ್ಷದ ಇಬ್ಬರು ಬಾಲಕಿಯರು ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದ ಡಾ.ಶಿವರಾತ್ರಿ ಮುರುಘಾ ಶರಣರಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಪೋಷಕರ ಜತೆಯಲ್ಲಿ ಒಡನಾಡಿ ಸಂಸ್ಥೆಗೆ ವಿದ್ಯಾರ್ಥಿಗಳು ಆಗಮಿಸಿದ್ದು, ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿದ್ದಾರೆ. ಮಕ್ಕಳು ಈಗ ಒಡನಾಡಿ ಆಶ್ರಯದಲ್ಲಿ ಇದ್ದಾರೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮರುಘಾ ಶರಣರಿಗೆ ಯಶಸ್ವಿ ಕೊರೊನರಿ ಆಂಜಿಯೊಗ್ರಾಮ್‌: ನ್ಯಾಯಾಲಯಕ್ಕೆ ವರದಿ ಸಲ್ಲಿಕೆ

ಪ್ರಸ್ತುತ ಒಂದು ಮಗು ಹಾಗೂ ಆಕೆಯ ತಾಯಿಯ ಹೇಳಿಕೆಯನ್ನು ಸಿಡಬ್ಲ್ಯೂಸಿ ಹಾಗೂ ಪೊಲೀಸರು ಪಡೆದಿದ್ದಾರೆ. ನಾಲ್ಕು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ತಾಯಿ ಹೇಳಿದ್ದಾರೆ. “ಪತಿ ಇಲ್ಲದ ಕಾರಣ ತಾನು ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ. ನನ್ನ ಮಕ್ಕಳು ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ನನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮುರುಘಾ ಶರಣರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಪ್ರಭಾವ ಹೊಂದಿರುವ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ” ಎಂದು ದೂರಿನಲ್ಲಿ ಮಕ್ಕಳ ತಾಯಿ ಹೇಳಿದ್ದಾರೆ.

ಮೈಸೂರಿ‌ನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಟ್ಟು 7 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಹೊಸದಾಗಿ ಮಠದ ಇಬ್ಬರು ಸಿಬ್ಬಂದಿಯ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಸ್ವಾಮೀಜಿಯವರ ಸಹಾಯಕರಾದ ಮಹಾಲಿಂಗ, ಅಡುಗೆ ಸಹಾಯಕ ಕರಿಯಪ್ಪ ಮೇಲೂ ದೂರು ನೀಡಲಾಗಿದೆ.

ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಉಳಿದವರಾದ ಲೇಡಿ ಹಾಸ್ಟೆಲ್ ವಾರ್ಡನ್, ಮಠದ ಉತ್ತರಾಧಿಕಾರಿ, ಮಠದ ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರಯ್ಯ, ಮುರುಘಾಶ್ರೀ ಸಹಾಯಕ ಮಹಾಲಿಂಗ, ಮುರುಘಾಶ್ರೀ ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಕ್ರಮವಾಗಿ ಕೇಸ್ ದಾಖಲಾಗಿದೆ.

ಮುರುಘಾ ಶರಣರು ಈಗಾಗಲೇ ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೃದಯ ಸಮಸ್ಯೆ ಹೊಂದಿರುವ ಶ್ರೀಗಳಿಗೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಮ್‌ ನಡೆದಿ‌ದ್ದು, ಜಾಮೀನು ನಿರಾಕರಿಸಲಾಗಿದೆ.

ಏನಿದು ಲೈಂಗಿಕ ಕಿರುಕುಳ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ವಸತಿ ಶಾಲೆಯಲ್ಲಿದ್ದ ಈ ಈ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆಂದು ದೂರು ನೀಡಲಾಗಿತ್ತು. ಅಲ್ಲದೆ, ಇದಕ್ಕೆ ಅಲ್ಲಿನ ವಾರ್ಡನ್‌ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಆಗಸ್ಟ್‌ ೨೭ರಂದು ಇಬ್ಬರು ವಿದ್ಯಾರ್ಥಿನಿಯರು ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರ್‌ಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಒಬ್ಬಳು ವಿದ್ಯಾರ್ಥಿನಿ ಮೇಲೆ ೩ ವರ್ಷದಿಂದ ಹಾಗೂ ಇನ್ನೊಬ್ಬ ವಿದ್ಯಾರ್ಥಿನಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಾ ಬರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರ ಮೇಲೆ ಅತ್ಯಾಚಾರ ಆರೋಪವನ್ನು ಹೊರಿಸಲಾಗಿದ್ದು, ಅವರಿಗೆ ಸಹಕಾರ ನೀಡಿದ ಆರೋಪದಡಿ ವಸತಿ ಶಾಲೆಯ ವಾರ್ಡನ್‌ ರಶ್ಮಿ, ಮಠದ ಮರಿಸ್ವಾಮಿ ಬಸವಾದಿತ್ಯ, ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರ್‌ ಮೇಲೆ ದೂರು ದಾಖಲಾಗಿತ್ತು. ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿ ಬಳಿ ಕಳುಹಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲೈಂಗಿಕ ಕ್ರಿಯೆಗೆ ಒಪ್ಪದೇ ಇದ್ದರೆ ಹಣ್ಣು, ಸಿಹಿಯಲ್ಲಿ ಮತ್ತುಬರುವ ಔಷಧವನ್ನು ಬೆರೆಸಿ ಅತ್ಯಾಚಾರ ನಡೆಸಲಾಗುತ್ತದೆ ಎಂದೂ ಹೇಳಲಾಗಿದೆ.

ಬಂಧನದ ಬಳಿಕ
ಆಗಸ್ಟ್‌ ೨೭ರಂದು ದೂರು ದಾಖಲಾಗಿತ್ತಾದರೂ ಮುಂದಿನ ನಾಲ್ಕು ದಿನಗಳ ಕಾಲ ಕಾನೂನು ಪ್ರಕ್ರಿಯೆಯನ್ನು ತೆಗೆದುಕೊಂಡಿರಲಿಲ್ಲ. ಸೆಪ್ಟೆಂಬರ್‌ ೧ರಂದು ರಾತ್ರಿ ಸ್ವಾಮೀಜಿಯನ್ನು ಬಂಧನ ಮಾಡಲಾಯಿತು. ಎರಡನೇ ಆರೋಪಿ, ಹಾಸ್ಟೆಲ್‌ ವಾರ್ಡನ್‌ ರಶ್ಮಿಯನ್ನು ಸಹ ಬಳಿಕ ಬಂಧನ ಮಾಡಿ ಶಿವಮೊಗ್ಗದ ಜೈಲಿಗೆ ಕಳುಹಿಸಲಾಗಿದೆ. ಇದರ ಜತೆಗೆ ಉಳಿದ ಆರೋಪಿಗಳ ಪೈಕಿ ಬಸವಾದಿತ್ಯ ಮತ್ತು ಪರಮಶಿವಯ್ಯ ತಲೆಮರೆಸಿಕೊಂಡಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಕೋರ್ಟ್‌ ಅದನ್ನು ಪುರಸ್ಕರಿಸದೆ ವಿಚಾರಣೆಯನ್ನು ಮುಂದೂಡುತ್ತಲೇ ಬಂದಿದೆ. ಇದರ ನಡುವೆ, ವಕೀಲರಾಗಿರುವ ಗಂಗಾಧರಯ್ಯ ಅವರನ್ನು ಪೊಲೀಸರು ವಿಚಾರಣೆ ನಡೆಸಿ, ಕರೆದಾಗ ಬರುವ ಷರತ್ತಿನೊಂದಿಗೆ ಬಿಟ್ಟುಕಳುಹಿಸಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಇನ್ನೂ 30-35 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಸ್ಟ್ಯಾನ್ಲಿ ಗಂಭೀರ ಆರೋಪ

Exit mobile version