ಶಿವಮೊಗ್ಗ: ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರ ಮೇಲೆ ಕೇಳಿಬಂದಿರುವ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣ (Murugashree case) ಸಂಬಂಧ ಸೂಕ್ತ ತನಿಖೆ ನಡೆಯುತ್ತಿದ್ದು, ಯಾವುದೇ ವಿಳಂಬ ಆಗುತ್ತಿಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವರು, ಮುರುಘಾ ಶ್ರೀಗಳ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಈ ಬಗ್ಗೆ ದೂರು, ಪ್ರತಿದೂರು ದಾಖಲಾಗಿದೆ. ಈ ಹಂತದಲ್ಲಿ ನಾನು ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.
ಕಾನೂನು ಪ್ರಕಾರ ತನಿಖೆ
ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಯಾವುದೇ ವಿಳಂಬವಾಗುತ್ತಿಲ್ಲ. ಅಲ್ಲದೆ, ಅನಗತ್ಯ ವಿಳಂಬಕ್ಕೆ ಅವಕಾಶ ಇಲ್ಲ. ಏನು ನಿಯಮ ಇದೆಯೋ, ಅದೇ ಪ್ರಕಾರ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮುಕ್ತವಾಗಿ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರ ಕೈವಾಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶ್ರೀಗಳ ಬಂಧನ ಇದುವರೆಗೂ ಆಗಿಲ್ಲ
ಮುರುಘಾಶರಣರು ಚಿತ್ರದುರ್ಗದಿಂದ ಬೇರೆ ಕಡೆಗೆ ತೆರಳಿದ್ದು, ಅವರನ್ನು ಹಾವೇರಿಯಲ್ಲಿ ಪೊಲೀಸರು ಬಂಧಿಸಿದ್ದರು ಎಂಬ ವದಂತಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ನಾನು ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಶ್ರೀಗಳು ಬೇರೆ ಎಲ್ಲೂ ತೆರಳಿರಲಿಲ್ಲ. ಅವರು ಯಾರದ್ದೋ ಬಳಿ ಕಾನೂನು ಸಲಹೆ ಪಡೆಯಲು ತೆರಳಿದ್ದರು. ಅಲ್ಲದೆ, ಈಗಾಗಲೇ ಅವರು ಚಿತ್ರದುರ್ಗ ಮಠಕ್ಕೆ ವಾಪಸ್ ಆಗಿ, ಅವರೇ ಸುದ್ದಿಗೋಷ್ಠಿ ಮಾಡಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದು ಬಹಳ ಸೂಕ್ಷ್ಮವಾದ ವಿಚಾರವಾಗಿದ್ದು, ಈ ಬಗ್ಗೆ ಇನ್ನೇನೂ ಹೆಚ್ಚಿಗೆ ಹೇಳುವುದಿಲ್ಲ. ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | 15 ವರ್ಷದಿಂದ ನಡೆದಿತ್ತಾ ಪಿತೂರಿ? ಈ ಬಗ್ಗೆ ಸ್ವಾಮೀಜಿ ಹೇಳಿದ್ದೇನು?