ಚಿತ್ರದುರ್ಗ: ಮಠದ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಜೈಲು ಸೇರಿರುವ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಪೀಠತ್ಯಾಗಕ್ಕೆ ತೀವ್ರ ಒತ್ತಡ ಕೇಳಿಬಂದಿದೆ. ಶಿವಮೂರ್ತಿ ಮುರುಘಾಶರಣರನ್ನು ಪೀಠದಿಂದ ಕಿತ್ತು ಹಾಕಬೇಕು, ಅವರ ಸ್ಥಾನಕ್ಕೆ ಸಮರ್ಥ, ಸಜ್ಜನರನ್ನು ನೇಮಿಸಲು ಅವಕಾಶ ಮಾಡಿಕೊಡಬೇಕು ಎಂದು ಇಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದವರ ಸಮಾಲೋಚನಾ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಚಿನ್ಮೂಲಾದ್ರಿ ಶ್ರೀ ಮುರುಘರಾಜೇಂದ್ರ ಪೀಠದ ಉಳಿವಿಗಾಗಿ ವೀರಶೈವ ಲಿಂಗಾಯತ ಸಮಾಜದವರ ಸಮಾಲೋಚನಾ ಸಭೆಯು ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಗುರುವಾರ ನಡೆಯಿತು. ಮಾಜಿ ಸಚಿವ ಏಕಾಂತಯ್ಯ, ಮಾಜಿ ಶಾಸಕ ತಿಪ್ಪೇರುದ್ರಪ್ಪ, ಮುಖಂಡರಾದ ಮಲ್ಲಿಕಾರ್ಜುನ್, ಪ್ರಭಾಕರ್, ಷಣ್ಮುಖಪ್ಪ ನೇತೃತ್ವದಲ್ಲಿ ಸಭೆ ನಡೆದಿದ್ದು, ಸುಮಾರು 500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಒಂದು ಕಡೆ ಮುರುಘಾಶರಣರ ಪೀಠ ತ್ಯಾಗಕ್ಕೆ ಒತ್ತಡ ಕೇಳಿಬಂದರೆ, ಇನ್ನೊಂದು ಕಡೆ ಕೆಲವು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಆರಂಭದಲ್ಲೇ ಗಲಾಟೆ
ಲಿಂಗಾಯತ ಮುಖಂಡರ ಸಭೆ ಆರಂಭವಾಗುತ್ತಿದ್ದಂತೆಯೇ ಗದ್ದಲ ಶುರುವಾಯಿತು. ಮುರುಘಾಶ್ರೀ ಅವರ ಹೆಸರು ಹೇಳುತ್ತಿದ್ದಂತೆಯೇ ಕೆಲವು ಮುಖಂಡರು ಅವರ ಹೆಸರು ಹೇಳಬಾರದು ಎಂಬ ಆಗ್ರಹ ಕೇಳಿಬಂತು. ‘ಅವನ ಹೆಸರು ಎತ್ತಬೇಡಿ’ ಎಂದು ಏಕವಚನದಲ್ಲಿ ಕೆಲವು ಮುಖಂಡರು ಹೇಳಿದರು. ‘ಮಲ್ಲಿಕಾರ್ಜುನ ಸ್ವಾಮಿಗಳ ಹೆಸರು ಹೇಳಿ’ ಅವನ ಹೆಸರು ಎತ್ತಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ, ಮಾಜಿ ಶಾಸಕ ತಿಪ್ಪೇರುದ್ರಸ್ವಾಮಿ ಮಾತನಾಡುವಾಗ ಸಭೆಯಲ್ಲಿದ್ದ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಉಳಿದವರು ಆತನನ್ನು ಎತ್ತಿ ಹೊರಹಾಕಿದರು. ಈ ವೇಳೆ ಸಣ್ಣ ಮಟ್ಟದ ಘರ್ಷಣೆಯೂ ನಡೆಯಿತು.
ಪೊಲೀಸರ ಮೇಲೂ ಆಕ್ರೋಶ
ಸಮಾಲೋಚನೆ ಸಭೆಯಲ್ಲಿ ಕೆಲವರ ಆಕ್ಷೇಪ, ಗೊಂದಲ ಸೃಷ್ಟಿ ಹಿನ್ನೆಲೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಏಕಾಂತಯ್ಯ ಅವರು ಪೊಲೀಸರ ಮೇಲೆ ಕಿಡಿ ಕಾರಿದರು. ಪೊಲೀಸರು ಸಭೆಗೆ ಅಡ್ಡಿಪಡಿಸಿದ ವ್ಯಕ್ತಿಗಳ ಪರವಾಗಿದ್ದಾರೆ ಎಂಬ ಅನುಮಾನವಿದೆ. ಅವರು ಈ ವ್ಯಕ್ತಿಗಳ ಜತೆ ಶಾಮೀಲಾಗಿದ್ದಾರೆ. ಹೀಗಾಗಿ ಎಸ್‌ಪಿ ಅವರು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲಿವರೆಗೆ ಸಭೆ ನಡೆಸುವುದು ಬೇಡ ಎಂದರು. ಆದರೆ, ಸ್ವಲ್ಪ ಹೊತ್ತಿನ ಬಳಿಕ ಸಭೆ ಮುಂದುವರಿಯಿತು.
ಪೀಠ ತ್ಯಾಗಕ್ಕೆ ಒತ್ತಡ
ಎಚ್.ಏಕಾಂತಯ್ಯ ನೇತೃತ್ವದ ಈ ಸಭೆಯಲ್ಲಿ ಕೂಡಲೇ ಮುರುಘಾ ಶ್ರೀಗಳು ಪೀಠ ತ್ಯಾಗ ಮಾಡಬೇಕು, ವೀರಶೈವ- ಲಿಂಗಾಯತ ಸಮಾಜದ ಗೌರವಕ್ಕೆ ಧಕ್ಕೆ ತಂದ ಶ್ರೀಗಳು ಮಠಕ್ಕೆ ಬೇಡ ಎಂಬ ಒತ್ತಾಯ ಕೇಳಿಬಂತು. ಶೂನ್ಯ ಪೀಠ ಪರಂಪರೆಯ ಮಠಕ್ಕೆ ಅಪಮಾನ ಮಾಡಿರುವ ಸ್ವಾಮೀಜಿ ಕೂಡಲೇ ಪೀಠ ತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು.
ವೀರಶೈವ ಸಮಾಜದ ಮುಖಂಡ ಸೈಟ್ ಬಾಬು ಮಾತನಾಡಿ, ಮುರುಘಾ ಮಠದ ಪರಂಪರೆ, ಸಂಸ್ಕೃತಿ ಉಳಿಯಬೇಕು, ಮುರುಘಾ ಮಠ ನಂಬರ್ ಒನ್ ಆಗಬೇಕು. ಇತಿಹಾಸದಲ್ಲಿ ಮಠಕ್ಕೊಂದು ಐತಿಹ್ಯವಿದೆ, ಗೌರವವಿದೆ. ಅದನ್ನು ಉಳಿಸಿಕೊಳ್ಳಲು ಮುರುಘಾಮಠಕ್ಕೆ ಹೊಸ ಸ್ವಾಮೀಜಿ ನೇಮಕವಾಗಬೇಕು, ಈಗಿರುವ ಎಲ್ಲ ಸಮಿತಿಗಳು ರದ್ದಾಗಬೇಕು, ನಾವೆಲ್ಲ ಹೋಗಿ ಮಠದಲ್ಲಿರುವವರನ್ನು ಹೊರ ಹಾಕೋಣ ಎಂದು ಕಿಡಿಕಾರಿದರು.
ಹಲವು ಮಠಾಧೀಶರಿಂದ ಜೈಲಿನಲ್ಲಿ ಶ್ರೀಗಳ ಭೇಟಿ
ಒಂದು ಕಡೆ ಮುರುಘಾಶ್ರೀಗಳ ಪೀಠತ್ಯಾಗಕ್ಕೆ ಆಗ್ರಹಿಸುವ ಸಭೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಅವರಿರುವ ಜಿಲ್ಲಾ ಕಾರಾಗೃಹಕ್ಕೆ ಹಲವು ಮಠಾಧೀಶರು ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರ ಶ್ರೀಗಳು, ದಾವಣಗೆರೆ ವಿರಕ್ತ ಮಠದ ಬಸವಪ್ರಭು ಶ್ರೀ ಸೇರಿ ವಿವಿಧ ಮಠಾಧೀಶರು ಜೈಲಿನಲ್ಲಿ ಶ್ರೀಗಳನ್ನು ಭೇಟಿಯಾದರು.