Site icon Vistara News

Murugha Seer: ರಿಲೀಸ್‌ ಆದ ಐದೇ ದಿನಕ್ಕೆ ಮತ್ತೆ ಮುರುಘಾಶ್ರೀ ಬಂಧನ

Murugha seer

ಚಿತ್ರದುರ್ಗ: ಮೊದಲನೇ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದ ಮುರುಘಾ ಶ್ರೀಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಎರಡನೇ ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀಗಳನ್ನು (Murugha Seer) , ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ.

ಮತ್ತೊಂದೆಡೆ ಮುರುಘಾಶ್ರೀಗಳ ಬಂಧನ ವಾರಂಟ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಶ್ರೀಗಳ ಪರ ವಕೀಲರು ಮುಂದಾಗಿದ್ದಾರೆ. ಬಂಧನ ವಾರಂಟ್ ಹೊರಡಿಸಿರುವುದು ಕಾನೂನು ಬಾಹಿರ, ಹೀಗಾಗಿ ವಾರಂಟ್ ರದ್ದುಪಡಿಸುವಂತೆ ಇಂದು ಸಂಜೆಯೇ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಇಂದೇ ವಿಚಾರಣೆ ಕೂಡ ನಡೆಸುವಂತೆ ವಕೀಲರು ಮನವಿ ಮಾಡಲಿದ್ದಾರೆ. ಸಂಜೆ 4.30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೈಲು ಅಧಿಕಾರಿಗಳ ಕರ್ತವ್ಯ ಲೋಪ

ಪ್ರಕರಣದ ಬಗ್ಗೆ ಸಂತ್ರಸ್ತ ಬಾಲಕಿಯರ ಪರ ವಕೀಲ ಶ್ರೀನಿವಾಸ್ ಪ್ರತಿಕ್ರಿಯಿಸಿ, ಬಂಧನ ವಾರಂಟ್ ಹೊರಡಿಸುವುದು ಅವಶ್ಯ ಹಾಗೂ ಅನಿವಾರ್ಯವಾಗಿತ್ತು. ಕೋರ್ಟ್ ಬಂಧನ ವಾರಂಟ್ ಹೊರಡಿಸಿರುವುದು ಸಂತಸ ತಂದಿದೆ. ಮೊದಲನೇ ಪ್ರಕರಣದಲ್ಲಿ ಬೇಲ್ ಸಿಕ್ಕಾಗ ಸಂತ್ರಸ್ತ ಬಾಲಕಿಯ ಕುಟುಂಬ ಆತಂಕಕ್ಕೆ ಒಳಗಾಗಿತ್ತು. ಅಲ್ಲದೆ, ಸುಪ್ರೀಂ ಕೋರ್ಟ್‌ಗೆ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ತಯಾರಿ ನಡೆದಿತ್ತು. ಎರಡನೇ ಪ್ರಕರಣದಲ್ಲಿ ಜಾಮೀನು ಸಿಗದೇ ಇದ್ದರೂ ಅವರು ಹೊರಗಡೆ ಬಂದಿದ್ದು ಜೈಲು ಅಧಿಕಾರಿಗಳ ಕರ್ತವ್ಯ ಲೋಪ. ಎರಡನೇ ಪ್ರಕರಣಕ್ಕೆ ಜಾಮೀನು ಅರ್ಜಿ ಸಲ್ಲಿಸಿದರೆ ಅದಕ್ಕೆ ನಾವು ತಕರಾರು ಅರ್ಜಿ ಸಲ್ಲಿಸುತ್ತೇವೆ ತಿಳಿಸಿದ್ದಾರೆ.

ಇದನ್ನೂ ಓದಿ | Physical Abuse : ಹುಡುಗಿ ಒಪ್ಪದೆ ಪುರುಷ ಅತ್ಯಾಚಾರ ಮಾಡಲಾಗದು!; ಕಾಂಗ್ರೆಸ್‌ ನಾಯಕನ ಸಂಶೋಧನೆ!

ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯಿದೆಯಡಿ ಎರಡು ಪ್ರಕರಣಗಳು ದಾಖಲಾಗಿದ್ದವು. ಒಂದರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣವಾದರೆ ಎರಡನೇ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಜತೆಗೆ ಅವರು ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರು ಎಂಬುದನ್ನು ಉಲ್ಲೇಖಿಸಲಾಗಿದೆ. ಮೊದಲ ಪ್ರಕರಣದಲ್ಲಿ ಪೋಕ್ಸೊ ಪ್ರಕರಣ ಮಾತ್ರ ಇದ್ದರೆ, ಎರಡನೇ ಕೇಸ್‌ನಲ್ಲಿ ಪೋಕ್ಸೋ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯೂ ಅನ್ವಯವಾಗಿದೆ.

ನಿಜವೆಂದರೆ, ಮೊದಲನೇ ಪ್ರಕರಣದಲ್ಲಿ ಜಾಮೀನು ಪಡೆದಾಗ ಎರಡನೇ ಪ್ರಕರಣದ ಉಲ್ಲೇಖ ಆಗಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಎರಡನೇ ಪ್ರಕರಣದಲ್ಲಿ ನಡೆಯಬೇಕಾದ ಬಂಧನ, ವಿಚಾರಣೆಯ ಯಾವ ಪ್ರಕ್ರಿಯೆಗಳೂ ನಡೆದಿರಲಿಲ್ಲ. ಮೊದಲ ಪ್ರಕರಣದಲ್ಲಿ ಜಾಮೀನು ಪಡೆದಾಗ (ನವೆಂಬರ್‌ 16) ಶ್ರೀಗಳಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದರಲ್ಲಿ ಚಿತ್ರದುರ್ಗ ಜಿಲ್ಲಾ ಪ್ರವೇಶ ಮಾಡುವಂತಿಲ್ಲ ಎನ್ನುವುದು ಕೂಡಾ ಒಂದು. ಹೀಗಾಗಿ ಚಿತ್ರದುರ್ಗ ಜೈಲಿನಿಂದ ಹೊರಬಿದ್ದ ಶ್ರೀಗಳು ನೇರವಾಗಿ ದಾವಣಗೆರೆಯ ವಿರಕ್ತ ಮಠಕ್ಕೆ ಹೋಗಿದ್ದರು. ಇದೀಗ ಅಲ್ಲಿಯೇ ಅವರನ್ನು ಪೊಲೀಸರು ಬಂಧಿಸಿ, ಚಿತ್ರದುರ್ಗಕ್ಕೆ ಕರೆತರುತ್ತಿದ್ದಾರೆ.

ಇದನ್ನೂ ಓದಿ | Actor Darshan : ಸಾರ್ವಜನಿಕವಾಗಿ ಲಾಂಗ್‌ ಹಿಡಿದು ಪೋಸ್‌; ಮತ್ತೊಂದು ವಿವಾದದಲ್ಲಿ ದರ್ಶನ್‌

ಮೊದಲ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ದಿನವೇ ಅಂದರೆ ನವೆಂಬರ್‌ 16ರಂದೇ ಎರಡನೇ ಪ್ರಕಣರದ ವಿಚಾರಣೆ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿತ್ತು. ಶ್ರೀಗಳು ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಈ ವಿಚಾರಣೆ ನವೆಂಬರ್‌ 18ಕ್ಕೆ ಮುಂದೂಡಲ್ಪಟ್ಟಿತ್ತು. ನವೆಂಬರ್‌ 18ರಂದು ನಡೆದ ವಿಚಾರಣೆಯ ಅಂತಿಮ ತೀರ್ಪನ್ನು ನವೆಂಬರ್‌ 20ಕ್ಕೆ (ಮಂಗಳವಾರ) ಕಾಯ್ದಿರಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version